ADVERTISEMENT

ನೀರು ಹೊತ್ತು ಹತ್ತಿ ಬೆಳೆದವರು

ಕಿಶನರಾವ್‌ ಕುಲಕರ್ಣಿ
Published 2 ಸೆಪ್ಟೆಂಬರ್ 2017, 6:46 IST
Last Updated 2 ಸೆಪ್ಟೆಂಬರ್ 2017, 6:46 IST
ಹನುಮಸಾಗರ ಸಮೀಪದ ಪರಮನಟ್ಟಿ ಗ್ರಾಮದ ರೈತ ಕುಟುಂಬವೊಂದು ಖುಷ್ಕಿ ಜಮೀನಿನಲ್ಲಿ ಬೆಳೆದ ಹತ್ತಿ ಬೆಳೆಗೆ ಕೊಡದಲ್ಲಿ ನೀರು ತಂದು ಸುರಿಯುತ್ತಿರುವುದು
ಹನುಮಸಾಗರ ಸಮೀಪದ ಪರಮನಟ್ಟಿ ಗ್ರಾಮದ ರೈತ ಕುಟುಂಬವೊಂದು ಖುಷ್ಕಿ ಜಮೀನಿನಲ್ಲಿ ಬೆಳೆದ ಹತ್ತಿ ಬೆಳೆಗೆ ಕೊಡದಲ್ಲಿ ನೀರು ತಂದು ಸುರಿಯುತ್ತಿರುವುದು   

ಹನುಮಸಾಗರ: ಮಳೆ ಕೊರತೆ ನಡುವೆ ಚಿಂತೆ ಮಾಡದೇ ಸಹೋದರರಿಬ್ಬರೂ ಕೊಡ ಹಿಡಿದು ದೂರದಲ್ಲಿದ್ದ ಕೃಷಿ ಹೊಂಡದಲ್ಲಿನ ನಿತ್ಯ ನೀರು ಹೊತ್ತು ಹಾಕಿದ್ದರಿಂದ ಉತ್ತಮವಾಗಿ ಹತ್ತಿ ಬೆಳೆ ಬೆಳೆದಿದೆ.  ಬೆಳೆಯನ್ನು ನೋಡಲು ಜನ ತಂಡೋಪತಂಡವಾಗಿ ಬರುತ್ತಿದ್ದಾರೆ.

ಇದು ಸಮೀಪದ ಪರಮನಹಟ್ಟಿ ಗ್ರಾಮದ ಕೃಷಿ ಕುಟುಂಬವೊಂದು ಲಭ್ಯವಿರುವ ಮೂರು ಎಕರೆ ಖುಷ್ಕಿ ಜಮೀನಿನಲ್ಲಿ ಹತ್ತಿ ಬೀಜೋತ್ಪಾದನೆಗೆ ಮುಂದಾಗಿ ಯಶಸ್ವಿಯಾಗಿದೆ.
ರೈತ ರಾಮನಗೌಡ ಗುಳೇದಗುಡ್ಡ ಬೆಳೆ ಹಿಂದಿನ ಪರಿಶ್ರಮವನ್ನು ನೆನೆಸಿಕೊಳ್ಳುವುದು ಹೀಗೆ, 'ಗುಳೆ ಹೋಗುವುದೇ ನಮ್ಮ ಪ್ರತಿ ವರ್ಷದ ಕಸುಬು ಆಗಿತ್ತು.

ಈ ಬಾರಿ ಏನೆ ಮಾಡಿಯಾದರೂ ಕೃಷಿ ಮಾಡಿಕೊಂಡು ಇಲ್ಲೇ ಇರೋಣ ಎಂದು ತೀರ್ಮಾನಿಸಿದೆವು. ಬೀಜದ ಕಂಪೆನಿಯವರು ನೀರಾವರಿ ವ್ಯವಸ್ಥೆ ಇಲ್ಲದ ಕಾರಣ ನಮಗೆ ಬೀಜ ನೀಡಲು ಹಿಂದೆ ಮುಂದೆ ನೋಡಿದರು. ಅವರ ಮನವೊಲಿಸಿ ಬೀಜ ಪಡೆದು ಮಳೆ ಕೈಕೊಟ್ಟಾಗ ನೀರು ಹೊತ್ತು ಹಾಕಿ ಹೀಗೆ ಬೆಳೆಸಿದ್ದೇವೆ ನೋಡ್ರಿ' ಎಂದು ಖುಷಿಯಿಂದ ಹತ್ತಿ ಬೆಳೆ ತೋರಿಸುತ್ತಾರೆ.

ADVERTISEMENT

ಕೊಳವೆ ಬಾವಿ ಹೊಂದಿದ ರೈತರೂ ಮಾಡಿದ ಹತ್ತಿ ಬೀಜೋತ್ಪಾದನೆಗಿಂತ ಬಂಪರ್ ಫಸಲು ಇವರದ್ದು. ಪ್ರತಿ ಗಿಡದಲ್ಲೂ 100 ರಿಂದ 150 ಕಾಯಿಗಳು ಆರೋಗ್ಯಕರವಾಗಿವೆ. 'ಆರಂಭದಲ್ಲಿ ಒಂದೆರಡು ಬಾರಿ ಮಳೆಯಾಯಿತಾದರೂ ನಂತರದ ದಿನಗಳಲ್ಲಿ ಮಳೆ ಸುಳಿವೇ ಇರಲಿಲ್ಲ. ಸಾಲ ಮೈಮೇಲೆ ಬರುತ್ತಿದೆ ಎಂಬ ಆತಂಕವಿದ್ದರೂ ಸಹೋದರರು ಪ್ರತಿ ಗಿಡಗಳಿಗೂ ಎರಡು ತಂಬಿಗೆ ನೀರು ನಿಲ್ಲುವಷ್ಟು ಮಡಿ ಮಾಡಿದರು.

ಕೃಷಿ ಹೊಂಡದಲ್ಲಿ ಸಂಗ್ರಹವಾಗಿದ್ದ ನೀರನ್ನು ಬೆಳಿಗ್ಗೆ ಮತ್ತು ಸಂಜೆ ಹೊತ್ತು ತಂದು ಹಾಕಿದ ಕಾರಣ ಯಾವುದೇ ರೋಗವಿಲ್ಲದೆ ಬೆಳೆ ಬೆಳೆದು ನಿಂತಿದೆ. ಸಣ್ಣ ಗಿಡಗಳಿಗೆ ತಂಬಿಗೆಯಿಂದ ಹಾಕಿದರೆ ದೊಡ್ಡ ಗಿಡಗಳಿಗೆ ಕೊಡಗಳಿಂದಲೇ ನೀರು ಸುರಿಯುತ್ತಾರೆ. ಸಾಕಷ್ಟು ಕೊಟ್ಟಿಗೆ ಗೊಬ್ಬರ ಹಾಕಿರುವುದರಿಂದ ಉಸುಕು ಮಿಶ್ರಿತ ಫಲವತ್ತಾದ ಮಣ್ಣು ಹೆಚ್ಚಿನ ದಿನಗಳವರೆಗೆ ತೇವಾಂಶ ಹಿಡಿದಿಟ್ಟುಕೊಳ್ಳುವಲ್ಲಿ ಸಹಾಯಕವಾಗಿದೆ. ಪ್ರತಿ ಗಿಡಗಳೊಂದಿಗೆ ಇವರ ಬಾಂಧವ್ಯ ಗುಣಮಟ್ಟದ ಬೆಳೆ ಪಡೆಯಲು ಕಾರಣವಾಗಿದೆ’ ಎಂದು ಕೃಷಿ ಅಧಿಕಾರಿ ಅರುಣಕುಮಾರ ಹೇಳಿದರು.

‘ಈ ಬಾರಿ ಬಂಪರ್ ಫಸಲು ಬರುವ ನಿರೀಕ್ಷೆ ನಮಗಿದೆ. ಹಣ ಕೈಗೆ ಬಂದ ನಂತರ ನಮ್ಮ ಜಮೀನಿನಲ್ಲಿಯೇ ಕೃಷಿ ಹೊಂಡ ಮಾಡಿಸಿಕೊಳ್ಳುತ್ತೇವೆ. ಸಾಧ್ಯವಾದರೆ ಒಂದು ಕೊಳವೆಬಾವಿ ಕೊರೆಯಿಸುತ್ತೇವೆ. ಒಟ್ಟಾರೆ ಗುಳೆ ಶಾಪದಿಂದ ದೂರವಾಗುತ್ತೇವೆ’ ಎಂದು ಗುಳೇದಗುಡ್ಡ ಸಹೋದರರು ಆಶಾದಾಯಕ ಮಾತುಗಳನ್ನು ಹೇಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.