ADVERTISEMENT

ಬಿತ್ತನೆಗಾಗಿ ಕೃಷಿ ಪರಿಕರಗಳ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 16 ಮೇ 2017, 9:27 IST
Last Updated 16 ಮೇ 2017, 9:27 IST

ಹನುಮಸಾಗರ: ಈ ಬಾರಿ ಮಳೆ ರೈತರಿಗೆ ಭರವಸೆ ತೋರುತ್ತಿರುವ ಲಕ್ಷಣಗಳು ಕಾಣುತ್ತಿರುವ ಕಾರಣ ರೈತರು ಉತ್ಸಾಹದಿಂದ ಬಿತ್ತುವ ಕೂರಿಗೆ ಸೇರಿದಂತೆ ಬಿತ್ತನೆಯ ಪರಿಕರಗಳನ್ನು ತಯಾರಿಸಿಕೊಳ್ಳುತ್ತಿರುವುದು ವಿವಿಧ ಗ್ರಾಮಗಳಲ್ಲಿ ಕಂಡು ಬರುತ್ತಿದೆ.

ಹಳ್ಳಿಯಲ್ಲಿನ ಬಡಿಗೆ, ಕಮ್ಮಾರರ ಕುಲುಮೆಗಳು ಗ್ರಾಮೀಣರಿಗೆ ಒಂದು ತರಹ ದೊಡ್ಡ ಉದ್ದಿಮೆಗಳು ಇದ್ದ ಹಾಗೆ. ರೈತರಿಗೆ ಬೇಕಾಗುವ ಕೂರಗಿ, ಕುಂಟೆ, ಚಕ್ಕಡಿ, ಪಿಕಾಸು, ಕುಡುಗೋಲು, ಸಲಿಕೆ, ಈಳಿಗೆ, ಗುದ್ದಲಿ, ಮಡಿಕೆಯ ಮುಂಜೂಣ ಹೀಗೆ ನಾನಾ ತರಹದ ಕೃಷಿ ಪರಿಕರಗಳನ್ನು ಈ ಕುಲುಮೆಗಳಿಂದಲೇ ಸಿದ್ಧಪಡಿಸಿಕೊಳ್ಳಲಾಗುತ್ತಿದೆ.

ಬದಲಾಗುತ್ತಿರುವ ಕಸುಬುದಾರರ ಬದುಕು: ಮಳೆಗಾಲ, ಚಳಿಗಾಲ, ಬೇಸಿಗೆ ಹೀಗೆ ಆಯಾ ಕಾಲಕ್ಕೆ ಅನುಗುಣವಾಗಿ ರೈತನಿಗೆ ಅನಿವಾರ್ಯವಾಗಿ ಕಸುಬುದಾರರು ಅಗತ್ಯ ಇತ್ತು. ಆದರೆ ಬದಲಾಗುತ್ತಿರುವ ಇಂದಿನ ಕೃಷಿ ಪದ್ಧತಿ ಹಾಗೂ ಕೃಷಿ ಯಂತ್ರ ಬಳಕೆಯಿಂದ ಗ್ರಾಮೀಣ ಕಸಬುದಾರರಿಗೆ ಕೆಲಸ ಇಲ್ಲದಂತಾಗಿದೆ. 

ADVERTISEMENT

ಮಳೆಗಾಲದಲ್ಲಿ ಬಿತ್ತುವ ಕುಂಟೆ, ಕೂರಗಿ, ಬುಕ್ಕ- ಮೇಳಿ, ಮಡಿಕೆ ದಿಂಡುಗಳನ್ನು  ಬಡಿಗೆ ಕಮ್ಮಾರರು ತಯಾರಿಸುತ್ತಿದ್ದರು. ಕೃಷಿ ಉಪಕರಣಗಳ ಬಿಗಿದು ಕಟ್ಟಿ ನೇಗಿಲು ಹೂಡಲು ಚರ್ಮದ ಮಿಣಿದಾರ, ಕಳೆಬಾರು, ಬಾರಕೋಲು-ಕೂರಿಗಿ ದಾರಗಳನ್ನು   ಚಮ್ಮಾರರು ಮಾಡಿಕೊಡುತ್ತಿದ್ದರು.

ಮಣ್ಣಿನ ಮಡಿಕೆ-ಕುಡಿಕೆ, ತತ್ರಾಣಿ- ಹರವಿಯನ್ನು  ಕುಂಬಾರರು ಮಾಡಿಕೊಡುತ್ತಿದ್ದರೆ, ರೈತನ ಪೈರು ಕೊಯ್ಲಿಗೆ ಬರುವಾಗ ಪಿಕಾಸು, ಕುಡುಗೋಲು ಹಣಿದುಕೊಡಲು ಕಮ್ಮಾರ ಬೇಕು. ಆದರೆ ಈ ಎಲ್ಲ ವಸ್ತುಗಳು ಮಾರುಕಟ್ಟೆಯಲ್ಲಿ ಸಿದ್ಧವಸ್ತುಗಳಾಗಿ ರೈತರಿಗೆ ದೊರಕುತ್ತಿರುವುದರಿಂದ ಹಳ್ಳಿಯ ಕುಲುಮೆಗಳು ರೈತರಿಲ್ಲದೆ ಭಣಗುಟ್ಟುತ್ತಿವೆ.

ಕುಲುಮೆಗಳಲ್ಲಿ ನಗದು ವ್ಯವಹಾರ: ಈ ಮೊದಲು ಬಡಿಗ, ಕಮ್ಮಾರರು ರೈತರಿಂದ ಧಾನ್ಯ ಪಡೆದುಕೊಳ್ಳುತ್ತಿದ್ದರು. ಸದ್ಯ ಅಂತಹ ಪದ್ಧತಿ ಬದಲಾಗಿದ್ದು, ನಗದು ರೂಪದಲ್ಲಿ ಕೆಲಸ ನಡೆಯುತ್ತದೆ.

ಒಂದು ಕಟ್ಟಿಗೆಯ ಬಿತ್ತುವ ಕೂರಗಿ ಸಿದ್ಧಪಡಿಸಲು ₹4,000, ದುರಸ್ತಿಗೊಳಿಸಲು ₹400, ಪಿಕಾಸು ಹಣಿಯಲು ₹20, ಕುಂಟಿ ಕೆತ್ತಲು ₹300 ಎಂದು ಕುಲುಮೆಗಳಲ್ಲಿ ದರ ನಿಗದಿ ಮಾಡಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಕೊಂಚ ದುಬಾರಿ ಎನ್ನಲಾಗುತ್ತದೆ.

‘ಎಲ್ಲ ವಸ್ತುಗಳ ಬೆಲೆ ಏರಿದೆ. ಇದ್ದಿಲುಗಳು ಸಿಗುತ್ತಿಲ್ಲ, ಇಂದು ಬಂದ ರೈತರು ತಿರುಗಿ ಕುಲುಮೆ ಕಡೆ ಬರುವುದು ಮುಂದಿನ ವರ್ಷವೆ’ ಎಂದು ಮಲಕಾಪುರದ ಮಾನಪ್ಪ ಬಡಿಗೇರ ಹೇಳುತ್ತಾರೆ.

ಮಾಯವಾದ ಸ್ವಾವಲಂಬಿ ಚಕ್ರ: ಅನಾದಿ ಕಾಲದಿಂದಲೂ ಕುಲುಮೆಗಳಲ್ಲಿ ಬಳಕೆಯಾಗುತ್ತಿದ್ದ ಕಟ್ಟಿಗೆ ಚಕ್ರದ ಸಹಾಯದಿಂದಲೇ ಬಹುತೇಕ ವಸ್ತುಗಳು ಸಿದ್ಧಗೊಳ್ಳುತ್ತಿದ್ದವು. ವಿದ್ಯುತ್ ಚಿಂತೆ ಇಲ್ಲ, ಪೇಟೆಯಿಂದ ಬಿಡಿ ಭಾಗಗಳನ್ನು ತರಬೇಕೆಂಬ ತಾಪತ್ರಯವಿಲ್ಲ.

ರೈತರಿಗೆ ಭಾರವೆನಿಸುವ ಶುಲ್ಕವೂ ಇಲ್ಲ. ಕಮ್ಮಾರನ ಕೈಯಲ್ಲಿ ಉಳಿ ಜೊತೆಗೆ ಚಕ್ರ ತಿರುವುಲು ರೈತನ ರಟ್ಟೆಯಲ್ಲಿ ಕಸುವು ಇದ್ದರೆ ಸಾಕು ಚಕ್ಕಡಿಗೆ ಬೇಕಾಗುವ ಚಕ್ರಗಳು ತಯಾರಾಗುತ್ತಿದ್ದವು. ಆ ಚಕ್ರವೇ ಬಡಿಗ, ಕಮ್ಮಾರರ ಬದುಕಿನ ಚಕ್ರವೂ ಆಗಿತ್ತು.  ಆದರೆ ಇಂತಹ ಸ್ವಾವಲಂಬಿ ಚಕ್ರಗಳು ಕುಲುಮೆಗಳಲ್ಲಿ ಅಪರೂಪವಾಗಿವೆ.

ಏರಿದ ಬಿತ್ತನೆಯ ದರ: ಅಲ್ಲದೆ, ಜಾನುವಾರುಗಳ ಮೇವಿನ ಕೊರತೆ ನೀಗಿಸಲಾಗದೆ ಎತ್ತುಗಳನ್ನು ಮಾರಾಟ ಮಾಡಿದ ರೈತರು ಬಿತ್ತನೆಗಾಗಿ ಬಾಡಿಗೆ ಗಳೆಗಳ ಮೊರೆ ಹೋಗಿದ್ದಾರೆ. ಬಾಡಿಗೆ ಆಧಾರದಲ್ಲಿ ಬಿತ್ತನೆ ಮಾಡುವ ಕೂಲಿ ಹಿಂದೆಂದೂ ಕಂಡರಿಯಲಾರದಷ್ಟು ಏರಿಕೆಯಾಗಿದ್ದು, ಒಂದು ದಿನದ ಕೂಲಿ ₹ 1,500 ಆಗಿದ್ದು ಸಣ್ಣ ರೈತರಿಗೆ ಇದು ಹೊರೆಯಾಗಿದೆ ಎಂದು ಹನುಮಸಾಗರದ ರೈತ ಮಲ್ಲಪ್ಪ ಕುರನಾಳ ಹೇಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.