ADVERTISEMENT

ಬಿಸಿಲೇರಿದಂತೆ ಬೆಲೆಯೇರಿದ ಎಳನೀರು

ಬಿಸಿಲಿಗೆ ಬಸವಳಿದ ಜನರು ಎಳನೀರಿಗೆ ಬೆಲೆಯ ತಾಪ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 8:34 IST
Last Updated 20 ಮಾರ್ಚ್ 2017, 8:34 IST
ಕೊಪ್ಪಳದಲ್ಲಿ ಎಳನೀರು ಮಾರುತ್ತಿರುವ ವ್ಯಾಪಾರಿ
ಕೊಪ್ಪಳದಲ್ಲಿ ಎಳನೀರು ಮಾರುತ್ತಿರುವ ವ್ಯಾಪಾರಿ   

ಕೊಪ್ಪಳ:  ಜಿಲ್ಲೆಯಲ್ಲಿ ಬಿಸಿಲಿನ ತಾಪ ಏರಿದೆ. ದೇಹ ತಣಿಸಿಕೊಳ್ಳಲು ಜನರು ಎಳನೀರು, ಕಲ್ಲಂಗಡಿ ಮೊರೆ ಹೋಗುವುದು ಸಾಮಾನ್ಯವಾಗಿಬಿಟ್ಟಿದೆ.
ಬರಗಾಲದ ಹಿನ್ನೆಲೆಯಲ್ಲಿ ಈ ಬಾರಿ ಎಳನೀರಿನ ಇಳುವರಿಯೂ ಕಡಿಮೆಯಾಗಿದೆ. ಹೀಗಾಗಿ ಬೇರೆ ಜಿಲ್ಲೆಗಳಿಂದ ಎಳನೀರು ಖರೀದಿಸುವುದು ವ್ಯಾಪಾರಿಗಳಿಗೆ ಅನಿವಾರ್ಯವಾಗಿದೆ. ಸಹಜವಾಗಿ ಬೆಲೆಯೂ ಏರಿದೆ. ಎಳನೀರು ವ್ಯಾಪಾರವನ್ನು ಅವಲಂಬಿಸಿ ನಗರದಲ್ಲಿ ಹಲವು ಕುಟುಂಬಗಳು ಬದುಕು ಕಟ್ಟಿಕೊಂಡಿವೆ.

‘ಮನೆಯಲ್ಲಿ ಐದು ಜನ ಸದಸ್ಯರಿದ್ದೇವೆ. ಎಲ್ಲರೂ ಈ ವ್ಯಾಪಾರ ಮಾಡುತ್ತೇವೆ. ಹೊಲ ಇದೆಯಾದರೂ ನೀರಿಲ್ಲ, ಹೀಗಾಗಿ ಖಾಲಿ ಇದೆ. ಹೊಲದ ಕೆಲಸ ನಮಗೆ ಗೊತ್ತಿದೆ. ಕೃಷಿಯಿಂದ ದಿನಕ್ಕೆ ದಿನ ಹಣ ಬರುವುದಿಲ್ಲ. ಅದಕ್ಕಾಗಿ ಈ ವ್ಯಾಪಾರ ಮಾಡುತ್ತಿದ್ದೇವೆ. ನಗರದಲ್ಲಿ ನಾವು ನಾಲ್ಕು ಕಡೆಗಳಲ್ಲಿ ಎಳನೀರು ವ್ಯಾಪಾರ ಮಾಡುತ್ತೇವೆ ಎಂದರು ನಗರದ ಎಳನೀರು ವ್ಯಾಪಾರಿಯೊಬ್ಬರು’.

‘ನಮ್ಮಲ್ಲಿ ಎಲ್ಲ ಬಗೆಯ ಗ್ರಾಹಕರು ಬರುತ್ತಾರೆ. ಪ್ರಯಾಣಿಕರು, ಚಾಲಕರು ಹೀಗೆ ಎಲ್ಲರೂ ಸೇವಿಸುತ್ತಾರೆ. ಆರೋಗ್ಯದ ಕಾಳಜಿ ಮತ್ತು ಜಾಗೃತಿ ಮೂಡಿರುವುದು, ಕಲಬೆರಕೆರಹಿತ ಪೇಯವಾಗಿರುವುದು ಇದಕ್ಕೆ ಕಾರಣ’ ಎಂದು ವ್ಯಾಪಾರಿಗಳು ವಿಶ್ಲೇಷಿಸುತ್ತಾರೆ.

ನಮಗೆ ನಮ್ಮದೇ ಆದ ಗ್ರಾಹಕರು ಬಹಳಷ್ಟು ಜನ ಇದ್ದಾರೆ. ನಗರದಲ್ಲಿ 35ರಿಂದ 40 ಕಡೆಗಳಲ್ಲಿ ಎಳನೀರು ಮಾರಾಟ ಮಾಡುತ್ತಾರೆ. ಮಳೆಗಾಲದಲ್ಲಿ ಜಿಲ್ಲೆಯಲ್ಲಿ ಎಳನೀರು ಕಾಯಿಗಳು ಕಡಿಮೆ ಬೆಲೆಗೆ ಸಿಗುವುದರಿಂದ ಪಾನ್‌ಶಾಪ್‌ ಅಂಗಡಿಗಳಲ್ಲೂ ಮಾರಾಟವಾಗುತ್ತವೆ.

ಮಳೆಗಾಲದಲ್ಲಿ ಜಿಲ್ಲೆಯ ಕಂಪ್ಲಿ ಮತ್ತು ಕಮಲಾಪುರದಿಂದ ಕೊಂಡುಕೊಳ್ಳುತ್ತೇವೆ. ಜಿಲ್ಲೆಯಲ್ಲಿ ಬರ ಇರುವುದರಿಂದ ಮದ್ದೂರಿನಿಂದ ಕೊಂಡುಕೊಳ್ಳುತ್ತಿದ್ದೇವೆ. ಹಾಗಾಗಿ ಎಳನೀರು ಬೆಲೆ ಹೆಚ್ಚಾಗುತ್ತದೆ ಎಂದು ಇಲ್ಲಿನ ವ್ಯಾಪಾರಿಯೊಬ್ಬರು ಹೇಳಿದರು.
-ಅನಿಲ್‌ ಬಾಚನಹಳ್ಳಿ

ಬೆಲೆ ಏರಿಕೆಗೆ ತಕರಾರು
ದಿನಕ್ಕೆ 100ರಿಂದ 150 ಎಳನೀರು ಮಾರಾಟ ಮಾಡುತ್ತೇವೆ. ಇಷ್ಟು ಕಾಯಿಗಳು ಮಾರಾಟವಾದರೆ ₹3 ಸಾವಿರ ಆದಾಯ ಬರುತ್ತದೆ. ಇದರಲ್ಲಿ ₹2,500 ಖರ್ಚಾಗುತ್ತದೆ. ₹ 500 ಒಂದು ದಿನದ ಗಳಿಕೆಯಾಗುತ್ತದೆ. ಬಿಸಿಲಿನಲ್ಲಿ ಮಾರಾಟ ಮಾಡುತ್ತೇವೆ. ಬೆಲೆ ಹೆಚ್ಚಾದಂತೆ ಗ್ರಾಹಕರು ಇಷ್ಟೊಂದು ಬೆಲೆ ಯಾಕೆ ಎಂದು ಜಗಳವಾಡುತ್ತಾರೆ ಎನ್ನುತ್ತಾರೆ ಎಳನೀರು ವ್ಯಾಪಾರಿಗಳು.

ಬೆಲೆಯಲ್ಲೂ ಸ್ಪರ್ಧೆ
ಕಳೆದ ವರ್ಷ ಒಂದು ಎಳನೀರು ಕಾಯಿಯ ಬೆಲೆ ₹ 25ರಿಂದ ₹30 ಇತ್ತು. ಈ ವರ್ಷ ಅಷ್ಟೇ ಇದೆ. ಬಿಸಿಲು ಹೆಚ್ಚಾದಂತೆ ಎಳನೀರು ಕಡಿಮೆ ಸಿಗುವ ಕಾರಣಕ್ಕೆ ಬರುವ ದಿನಗಳಲ್ಲಿ ₹35ರಿಂದ  ₹40 ಆದರೂ ಅಚ್ಚರಿ ಇಲ್ಲ. ನಮ್ಮಲ್ಲಿಯೂ ಸ್ಪರ್ಧೆ ಏರ್ಪಟ್ಟಿದೆ ಎಂದು ವ್ಯಾಪಾರಿಗಳು ವಿವರಿಸಿದರು.

ADVERTISEMENT

*
ಮಳೆಗಾಲದಲ್ಲಿ ಜಿಲ್ಲೆಯ ಕಂಪ್ಲಿ ಮತ್ತು ಕಮಲಾಪುರದಿಂದ ಎಳನೀರು ಕಾಯಿಗಳನ್ನು ಕೊಳ್ಳುತ್ತೇವೆ. ಜಿಲ್ಲೆಯಲ್ಲಿ ಬರ ಇರುವುರಿಂದ ಬೇರೆ ಕಡೆಯಿಂದ ಕೊಳ್ಳುತ್ತಿದ್ದೇವೆ. ಹಾಗಾಗಿ ಗ್ರಾಹಕರಿಗೆ ಎಳನೀರು ಬೆಲೆ ಹೆಚ್ಚಾಗಿದೆ.
-ಗೋವಿಂದಪ್ಪ, ಎಳನೀರು ವ್ಯಾಪಾರಿ, ಕೊಪ್ಪಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.