ADVERTISEMENT

ಭೀಕರತೆಗೆ ತತ್ತರಿಸಿದ ನಾಗರಿಕರು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2017, 8:57 IST
Last Updated 7 ಆಗಸ್ಟ್ 2017, 8:57 IST
ಕೊಪ್ಪಳದ ಜಿಲ್ಲಾ ಕ್ರೀಡಾಂಗಣದ ಸಮೀಪ ಭಾನುವಾರ ನಡೆದ ಅಪಘಾತದಲ್ಲಿ ನಜ್ಜುಗುಜ್ಜಾದ ಟಿಪ್ಪರ್‌ ಲಾರಿ ಮತ್ತು ಪ್ರವಾಸಿ ವಾಹನಗಳನ್ನು ತೆರವು ಮಾಡುತ್ತಿರುವ ದೃಶ್ಯ
ಕೊಪ್ಪಳದ ಜಿಲ್ಲಾ ಕ್ರೀಡಾಂಗಣದ ಸಮೀಪ ಭಾನುವಾರ ನಡೆದ ಅಪಘಾತದಲ್ಲಿ ನಜ್ಜುಗುಜ್ಜಾದ ಟಿಪ್ಪರ್‌ ಲಾರಿ ಮತ್ತು ಪ್ರವಾಸಿ ವಾಹನಗಳನ್ನು ತೆರವು ಮಾಡುತ್ತಿರುವ ದೃಶ್ಯ   

ಕೊಪ್ಪಳ: ಜಿಲ್ಲಾ ಕ್ರೀಡಾಂಗಣದಲ್ಲಿ ಇಬ್ಬರನ್ನು ಬಳಿ ತೆಗೆದುಕೊಂಡ ಟಿಪ್ಪರ್‌ ಲಾರಿ ಮತ್ತು ಪ್ರವಾಸಿ ವ್ಯಾನ್‌ನ ಅಪಘಾತದ ಭೀಕರತೆ ನಾಗರಿಕರಲ್ಲಿ ಭೀತಿ ಸೃಷ್ಟಿಸಿದೆ.
ದ್ವಿಪಥ ರಸ್ತೆಯಲ್ಲಿ ಆಯಾ ದಿಕ್ಕಿನಲ್ಲಿ ಹೋಗುತ್ತಿದ್ದ ಸರಿಯಾಗಿಯೇ ಹೋಗುತ್ತಿದ್ದ ವಾಹನಗಳು ಇದ್ದಕ್ಕಿದ್ದಂತೆಯೇ ಅಪಘಾತಗೊಂಡಿರುವುದು ಜನರಲ್ಲಿ ಹಲವು ತರ್ಕ ಹುಟ್ಟುಹಾಕಿವೆ.

ಹೊಸಪೇಟೆ ದಿಕ್ಕಿನತ್ತ ಹೊರಟಿದ್ದ 22 ಚಕ್ರಗಳ ಟಿಪ್ಪರ್‌ ರಸ್ತೆ ವಿಭಜಕದ ಮೇಲೇರಿ ಅಲ್ಲಿನ ವಿದ್ಯುತ್‌ ದೀಪದ ಕಂಬಕ್ಕೆ ಡಿಕ್ಕಿ ಹೊಡೆದು ಅದೇ ವೇಳೆ ಪ್ರಯಾಣಿಕರನ್ನು ತುಂಬಿಕೊಂಡು ಹೊರಡಿದ್ದ ಮಯೂರ ಟ್ರಾವೆಲ್ಸ್‌ ಹೆಸರಿನ ವ್ಯಾನ್‌ಗೆ ಡಿಕ್ಕಿ ಹೊಡೆದಿದೆ. ಟಿಪ್ಪರ್‌ ರಸ್ತೆ ವಿಭಜಕವನ್ನು ಮೀರಿ ಸಂಪೂರ್ಣಭ ಬಲಭಾಗಕ್ಕೆ ಹೊರಳಿದೆ.  ಚಾಲಕ, ,ಮಾಲೀಕ  ಮಹಾಂತೇಶ, ಮೀನಾಕ್ಷಮ್ಮ ಸ್ಥಳದಲ್ಲೇ ಸಾವನ್ನಪ್ಪಿದರು. ಅವರ ದೇಹ ವಾಹನದ ಅವಶೇಷಗಳ ನಡುವೆ ಸಿಲುಕಿ ನಜ್ಜುಗುಜ್ಜಾಗಿತ್ತು.

ಅಪಘಾತದ ರಭಸಕ್ಕೆ ಪ್ರವಾಸಿ ವಾಹನದ ಆಸನಗಳೆಲ್ಲ ಕಳಚಿಬಿದ್ದಿವೆ. ಟಿಪ್ಪರ್‌ನ ಮುಂಭಾಗ ಹಾನಿಗೊಂಡಿದೆ. ಜೆಸಿಬಿ ಬಳಸಿ ವಾಹನಗಳನ್ನು ಸರಿಸಬೇಕಾಯಿತು.
ಪ್ರವಾಸಿ ವಾಹನ ಓಡಿಸಿಕೊಂಡು ಬದುಕು ಕಟ್ಟಿಕೊಳ್ಳಬೇಕು ಎಂದುಕೊಂಡಿದ್ದ ಮಹಾಂತೇಶನ ಕನಸು ಅರ್ಧದಲ್ಲೇ ಕಮರಿದೆ. ಮೀನಾಕ್ಷಮ್ಮ ಅವರ ಮನೆಯಲ್ಲಿಯೂ ದುಃಖ ಮಡುಗಟ್ಟಿದೆ.

ADVERTISEMENT

ಅತಿವೇಗ ಅಪಾಯ?
ಈ ಪ್ರದೇಶ ಸ್ವಲ್ಪ ತಿರುವಿನಿಂದ ಕೂಡಿದ್ದು ರಸ್ತೆಯೂ ಪೂರ್ಣ ಪ್ರಮಾಣದಲ್ಲಿ ಹೆದ್ದಾರಿಯಾಗಿ ರೂಪುಗೊಂಡಿಲ್ಲ. ಶನಿವಾರ ರಾತ್ರಿ ಸುರಿದ ಮಳೆಗೆ ರಸ್ತೆಯ ಮೇಲೆಲ್ಲಾ ತೆಳು ಕೆಸರು ಮಣ್ಣು ಲೇಪನಗೊಂಡಿತ್ತು. ಹೀಗಾದಾಗ ವಾಹನಗಳು ಬ್ರೇಕ್‌ ಹಾಕಿದಾಗ ತಕ್ಷಣವೇ ನಿಲ್ಲುವ ಸಾಧ್ಯತೆ ಕಡಿಮೆ ಎನ್ನುತ್ತಾರೆ ಸ್ಥಳೀಯ ಲಾರಿ ಚಾಲಕರು.

ನಗರ ಪ್ರದೇಶದ ವ್ಯಾಪ್ತಿಯಲ್ಲಿ ಅತಿ ವೇಗದಲ್ಲಿ ಟಿಪ್ಪರ್‌ ಧಾವಿಸಿ ಬಂದದ್ದು, ತಿರುವಿನಲ್ಲಿ ನಿಯಂತ್ರಣ ತಪ್ಪಿದ್ದು ಪ್ರವಾಸಿ ವಾಹನಕ್ಕೆ ಡಿಕ್ಕಿ ಹೊಡೆದದ್ದು ಎಲ್ಲವೂ ಕ್ಷಣಮಾತ್ರದೊಳಗೆ ನಡೆದುಹೋಗಿವೆ ಎಂದರು ಗಾಯಾಳು ವಿಶ್ವನಾಥ. ಟಿಪ್ಪರ್‌ ಚಾಲಕ ನಿದ್ದೆಗಣ್ಣಿನಲ್ಲಿದ್ದದ್ದು ಅಥವಾ ಅಮಲು ಪದಾರ್ಥ ಸೇವಿಸಿರಬಹುದು ಎಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಗಾಯಾಳುಗಳು: ಪತ್ರಕರ್ತ, ಸದಾಶಿವ ನಗರದ ನಿವಾಸಿ ದೊಡ್ಡೇಶ ಎಲಿಗಾರ, ಅವರ ತಂದೆ ಚಂದಾಲಿಂಗಪ್ಪ, ತಾಯಿ ಅಕ್ಕಮಹಾದೇವಿ,  ತಿಮ್ಮನಗೌಡ, ಶರಣಪ್ಪ ರ‍್ಯಾವಣಕಿ, ಸದಾಶಿವ ನಗರದ ಬೀಬಿಜಾನ್‌, ಲಿಂಗಪ್ಪ, ಬಸಪ್ಪ, ಅನ್ನಪೂರ್ಣಾ, ವಿಶ್ವನಾಥ್‌, ಸಂಗಮೇಶ್‌. ಇನ್ನುಳೀದವರ ಹೆಸರು ತಿಳಿದುಬಂದಿಲ್ಲ.

ಇವರ ಪೈಕಿ ಹೆಚ್ಚಿನವರು ಸದಾಶಿವನಗರದ ನಿವಾಸಿಗಳು ಮತ್ತು ಹಲವರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಉದ್ಯೋಗಿಗಳು. ಬಹುತೇಕರಿಗೆ ತಲೆ ಹಾಗೂ ಕೈಕಾಲಿಗೆ ಪೆಟ್ಟಾಗಿದೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.