ADVERTISEMENT

‘ಮಹಿಳೆಗೆ ಸಮಾನ ಅವಕಾಶ ಅಗತ್ಯ’

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2017, 5:56 IST
Last Updated 20 ಫೆಬ್ರುವರಿ 2017, 5:56 IST

ಕೊಪ್ಪಳ: ಮಹಿಳೆಯರಿಗೆ ಸಮಾನ ಅವಕಾಶ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೈಕೋರ್ಟ್‌ ನ್ಯಾಯಾಧೀಶರಾದ ಎಸ್‌.ಸುಜಾತಾ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಭಾನುವಾರ ನಡೆದ ರಾಜ್ಯ ಮಹಿಳಾ ವಕೀಲರ ಸಮಾವೇಶದ ಸಮಾರೋಪ ಸಮಾರಂಭದಲ್ಲಿ  ಅವರು ಮಾತನಾಡಿದರು.

ಹೆಣ್ಣಿನ ಭದ್ರತೆ ಕಾಪಾಡುವ ದೃಷ್ಟಿಯಿಂದ ವಿವಿಧ ಕಾನೂನು ಮತ್ತು ಯೋಜನೆಗಳಿವೆ.  ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳಿಸಿದಾಗ ಮಾತ್ರ ಪರಿವರ್ತನೆ ಸಾಧ್ಯ ಎಂದರು.

ಮಹಿಳೆಗೆ ಸ್ವಾತಂತ್ರ್ಯ ನೀಡಬಾರದು ಎಂದು ಮನುಸ್ಮೃತಿಯಲ್ಲಿ ಹೇಳಲಾಗಿದೆ.   ಸ್ತ್ರೀಗೆ ಸ್ವಾತಂತ್ರ್ಯ ಕೊಟ್ಟರೆ ದೇಶವನ್ನು ಅಭಿವೃದ್ಧಿಪಡಿಸಬಲ್ಲಳು. ಅದನ್ನು  ಮಹಿಳೆಯರು  ಸಾಬೀತುಪಡಿಸಿದ್ದಾರೆ.  ಪೋಷಕರ ಮನಸ್ಸು ಬದಲಾಗಬೇಕು. ಲಿಂಗಬೇಧ ಮರೆತು ಅವರಿಗೆ  ಉತ್ತಮ ಶಿಕ್ಷಣ ನೀಡಬೇಕು. ಶಿಕ್ಷಣದಿಂದ ಮಾತ್ರ ಕಾನೂನಿನ ಅರಿವು ಸಾಧ್ಯ ಎಂದರು.

ಸುಶಿಕ್ಷಿತರಲ್ಲಿ ಮಾತ್ರ ವ್ಯವಸ್ಥೆಯನ್ನು ಪ್ರಶ್ನಿಸುವ ಧೈರ್ಯ ಇರುತ್ತದೆ. ಆಸ್ತಿ ವ್ಯಾಜ್ಯದಲ್ಲಿ ಮಹಿಳೆಗೆ ಸಿಗಬೇಕಾದ ಪಾಲು ನೀಡಬೇಕು.  ನಾವು ಪುರುಷ ದ್ವೇಷಿಗಳಲ್ಲ. ಪುರುಷರ ಸಹಕಾರವಿಲ್ಲದೆ  ಏನನ್ನೂ ಸಾಧಿಸಲಾಗುತ್ತಿರಲಿಲ್ಲ.  ಪುರುಷ ಮತ್ತು ಮಹಿಳೆ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಿದಾಗ ಮಾತ್ರ ಯಶಸ್ಸು ಸಾಧ್ಯ.  ಸಕಾರಾತ್ಮಕವಾಗಿ ಬದುಕಬೇಕು ಎಂದರು.
 
ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ವಿಜಯಲಕ್ಷ್ಮೀ ಉಪನಾಳ ಮಾತನಾಡಿ, ಮಹಿಳೆಯರಿಗೆ  2005ರಲ್ಲಿ ಆಸ್ತಿ ಹಕ್ಕು ಬಂದ ಮೇಲೆ ಸಾವಿರಾರು ಆಸ್ತಿ ವ್ಯಾಜ್ಯಗಳು ಬಂದವು.  ದುಡಿಯಲೇಬೇಕಾದ ಒತ್ತಡಕ್ಕೆ ಸಿಲುಕಿದ ಮಹಿಳೆಯರು ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ.  ಅಂಥವರನ್ನು ರಕ್ಷಿಸುವುದು ನಮ್ಮ ಹೊಣೆ ಎಂದರು.

ರಾಜ್ಯ ವಕೀಲರ ಸಂಘದ ಮಾಜಿ ಅಧ್ಯಕ್ಷ ಸಿ.ಎಂ.ಜಗದೀಶ, ವಕೀಲರಾದ ಸುಮನಾ ಹೆಗ್ಡೆ, ಸಂಧ್ಯಾ ಮಾದಿನೂರ, ನಿಲೂಫರ್‌ ರಾಂಪುರಿ, ಕವಿತಾ ಗುರುಮೂರ್ತಿ, ಅಕ್ಕಮಹಾದೇವಿ ಪಾಟೀಲ್, ಸುಭದ್ರಾ ದೇಸಾಯಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.