ADVERTISEMENT

ಮಹಿಳೆಯನ್ನು ಬೌದ್ಧಿಕವಾಗಿ ಗುರುತಿಸಿ

ಅಂತರರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಡಾ.ಶೈಲಜಾ ಹಿರೇಮಠ ಅಭಿಮತ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2017, 7:51 IST
Last Updated 20 ಮಾರ್ಚ್ 2017, 7:51 IST

ಕೊಪ್ಪಳ: ಸಾಮಾಜೀಕರಣಕ್ಕೆ ಒಳಪಟ್ಟು ನಾವು ಹೆಣ್ಣಾಗಿ ರೂಪುಗೊಳ್ಳುತ್ತೇವೆ. ಆದರೆ ಜೈವಿಕತೆಯಿಂದ ಅಲ್ಲ. ಜೈವಿಕತೆ ಮಹಿಳಾ ಸಂವೇದನೆಯನ್ನು ರೂಪಿಸುತ್ತದೆ ಎಂದು ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ.ಶೈಲಜಾ ಹಿರೇಮಠ ಹೇಳಿದರು.

ನಗರದ ಗವಿಸಿದ್ದೇಶ್ವರ ಕಾಲೇಜಿನಲ್ಲಿ ಭಾನುವಾರ ಕಾಲೇಜಿನ ಹಿಂದಿ ವಿಭಾಗದ ಆಶ್ರಯದಲ್ಲಿ ಸಮಕಾಲೀನ ಹಿಂದಿ, ಕನ್ನಡ ಮತ್ತು ಇಂಗ್ಲೀಷ್ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆ ವಿಷಯದ ಕುರಿತು ನಡೆದ ಅಂತರರಾಷ್ಟ್ರೀಯ ವಿಚಾರ ಸಂಕಿರಣ  ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳಾ ಸಂವೇದನೆ ಎಂಬ ಪದ ಪುರುಷ ನಿಷ್ಠವಾದವನ್ನು ಸಾರುತ್ತದೆ. ಸ್ತ್ರೀ  ಸಂವೇದನೆ ಬಗ್ಗೆ ಅನೇಕ ಅನುಮಾನಗಳಿವೆ. ಸ್ತ್ರೀ ಸಂವೇದನೆ ಎನ್ನುವುದು ಆಧುನಿಕ ಪರಿಕಲ್ಪನೆಯಾಗಿದೆ. ಯಾವ ಮೌಲ್ಯಗಳು ಪ್ರಧಾನವಾಗಿರುತ್ತವೆಯೋ ಅವು ಪುರುಷ ಪ್ರಧಾನವಾಗಿವೆ. ಅವು ಮಹಿಳೆಯ ಮೌಲ್ಯಗಳನ್ನು ಎತ್ತಿ ತೋರಿಸುವುದಿಲ್ಲ. ಹಿಂದೆ ಮಹಿಳಾ ಬರಹಗಾರರು ಅಲ್ಪ ಪ್ರಮಾಣದಲ್ಲಿ ಇದ್ದಾಗ ಈ ಸಂವೇದನೆ ಇರಲಿಲ್ಲ.

ಸ್ವಾತಂತ್ರ್ಯ ನಂತರ ಆಧುನಿಕ ಶಿಕ್ಷಣ ಪಡೆದು ಹೆಚ್ಚು ಮಹಿಳಾ ಬರಹಗಾರ್ತಿಯರು ಹುಟ್ಟಿಕೊಂಡ ಮೇಲೆ ಸ್ತ್ರೀ ಸಂವೇದನೆ ಬಗ್ಗೆ ಮಾತನಾಡಲಾಗುತ್ತಿದೆ. ಆದರೆ ಗ್ರಾಮೀಣ ಮತ್ತು ಅನಕ್ಷರಸ್ಥ ಮಹಿಳೆಯರಲ್ಲಿ ಹೆಚ್ಚು ಸ್ತ್ರೀ ಸಂವೇದನೆ ಇದೆ ಎಂದು ಅಭಿಪ್ರಾಯಪಟ್ಟರು.

ಸಾಂಪ್ರದಾಯಿಕ ಧೋರಣೆಗೆ ಮಹಿಳೆಯನ್ನು ಒಳಪಡಿಸದೇ ಮಹಿಳೆಯನ್ನು ಬೌದ್ಧಿಕವಾಗಿ ಗುರುತಿಸಬೇಕು. ಆದರೆ ತಾಯ್ತನ, ಮುಟ್ಟು ಹೀಗೆ ಕೆಳಮಟ್ಟದ ವಿಷಯಗಳ ಕುರಿತು ಹೇಳುವುದನ್ನೇ ಸ್ತ್ರೀ ಸಂವೇದನೆ ಎಂದು ಹೇಳುತ್ತಾರೆ. ಈ ನಿಟ್ಟಿನಲ್ಲಿ ನನ್ನನ್ನು ಸ್ತ್ರೀ ಎಂದು ಗುರುತಿಸದೆ, ಲೇಖಕಿಯಾಗಿ ಗುರುತಿಸಿ. ಸ್ತ್ರೀ ಸಂವೇದನೆಯನ್ನು ಸಮುದಾಯಿಕ ನೆಲೆಯಲ್ಲಿ ನೋಡಬೇಕು ಎಂದು ಸಲಹೆ ನೀಡಿದರು.

ಪ್ರಾಚಾರ್ಯ ಮನೋಹರ್‌ ಎಸ್‌.ದಾದ್ಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜರ್ಮನಿಯ ಹ್ಯಾಂಬರ್ಗ್‌ ಯುನಿವರ್ಸಿಟಿಯ ಭಾರತ ಮತ್ತು ಟಿಬೆಟ್‌ನ ಸಂಸ್ಕೃತಿ ಇತಿಹಾಸ ವಿಭಾಗದ ಡಾ.ರಾಮ್‌ಪ್ರಸಾದ್‌ ಭಟ್‌, ನೇಪಾಳದ ಅವಧಿ ಸಾಂಸ್ಕೃತಿಕ ಪ್ರತಿಷ್ಠಾನದ ವಿಷ್ಣುಲಾಲ್‌ ಕುಮಾಲ್‌,  ಪ್ರಾಧ್ಯಾಪಕ ಡಾ. ಬಸವರಾಜ್‌ ಪೂಜಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.