ADVERTISEMENT

ರಾಷ್ಟ್ರೀಯ ಕ್ಷಯರೋಗ ಪತ್ತೆ ಅಭಿಯಾನ

​ಪ್ರಜಾವಾಣಿ ವಾರ್ತೆ
Published 15 ಜುಲೈ 2017, 7:34 IST
Last Updated 15 ಜುಲೈ 2017, 7:34 IST

ಕುಷ್ಟಗಿ: ಪರಿಷ್ಕೃತ ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಕಾರ್ಯಕ್ರಮ ಹಾಗೂ ಕಾಯಿಲೆ ಪತ್ತೆ ಹಚ್ಚುವುದಕ್ಕೆ ಸಂಬಂಧಿಸಿದಂತೆ ಜುಲೈ 17 ರಿಂದ 31ರವರೆಗೆ ತಾಲ್ಲೂಕಿನಾದ್ಯಂತ ಕ್ಷಯರೋಗ ಪತ್ತೆ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಇಲ್ಲಿನ ತಾಲ್ಲೂಕು ಆರೋಗ್ಯ ಅಧಿಕಾರಿ ಕಚೇರಿಯಲ್ಲಿ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಮಾಹಿತಿ ನೀಡಿದ ಆರೋಗ್ಯ ಅಧಿಕಾರಿ ಡಾ. ಕೆ.ಎಸ್‌.ರೆಡ್ಡಿ, ‘ರೋಗ ಪತ್ತೆ ಮತ್ತು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರ ಪಡೆಯಬೇಕು’ ಎಂದು ಆರೋಗ್ಯ ಇಲಾಖೆ ಸಿಬ್ಬಂದಿಗೆ ಸೂಚಿಸಿದರು.

‘‘ಮೈಕ್ರೋ ಬ್ಯಾಕ್ಟೀರಿಯಾ ಟ್ಯುಬರ್‌ಕ್ಯೂಲೊಸಿಸ್‌’ ಎಂಬ ಸೂಕ್ಷ್ಮ ರೋಗಾಣುವಿನಿಂದ ಕ್ಷಯರೋಗ ಹರಡುತ್ತದೆ. ಈ ಸೋಂಕು ಹೊಂದಿರುವ ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ರೋಗಾಣುಗಳು ಗಾಳಿಯ ಮೂಲಕ ಆರೋಗ್ಯವಂತ ವ್ಯಕ್ತಿಯ ಶ್ವಾಸಕೋಶ ಸೇರಿ ಸೋಂಕು ತಗಲುತ್ತದೆ’ ಎಂದರು.

ADVERTISEMENT

ಸಾರ್ವಜನಿಕರು ಯಾವುದೇ ಕಾಯಿಲೆಗಳನ್ನು ನಿರ್ಲಕ್ಷಿಸದಂತೆ ಮಾಹಿತಿ ನೀಡಲು ಆರೋಗ್ಯ ಇಲಾಖೆ ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು. ‘ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರ ತಪಾಸಣೆ ನಡೆಸಬೇಕು.

ರೋಗದ ಲಕ್ಷಣ ಕಂಡುಬಂದರೆ ಕಫ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಬೇಕು. ಕಾಯಿಲೆ ದೃಢಪಟ್ಟರೆ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ.  ಕಾಯಿಲೆ ಇರುವವರು ದೇಶದ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ’ ಎಂದರು.

ಲಕ್ಷಣಗಳು: ‘ಸತತ ಎರಡು ವಾರಗಳವರೆಗೆ ಕೆಮ್ಮು ಇರುವುದು, ಸಂಜೆ ಜ್ವರ ಬರುವುದು, ಎದೆಯಲ್ಲಿ ನೋವು, ತೂಕ ಕಡಿಮೆಯಾಗುವುದು, ಕಫದಲ್ಲಿ ರಕ್ತ ಬೀಳಬುವುದು ಇವು ಕ್ಷಯರೋಗದ ಲಕ್ಷಣಗಳಾಗಿರುತ್ತವೆ. 6 ರಿಂದ 9 ತಿಂಗಳವರೆಗೆ ಚಿಕಿತ್ಸೆ ಪಡೆದರೆ ರೋಗ ನಿವಾರಣೆಯಾಗುತ್ತದೆ’ ಎಂದು ಹೇಳಿದರು.

ಅಭಿಯಾನ ಕುರಿತು ಸಾರ್ವಜನಿಕರಿಗೆ ತಿಳಿವಳಿಕೆ ಮೂಡಿಸುವುದರ ಜತೆಗೆ ಚಿಕಿತ್ಸೆ ಸೌಲಭ್ಯ ಪಡೆಯಲು ಸಲಹೆ ನೀಡುವಂತೆ ಸಿಬ್ಬಂದಿಗೆ ಸೂಚಿಸಿದರು. ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಚಂದ್ರಕಾಂತ ಮಂತ್ರಿ, ಕ್ಷಯರೋಗ ಮೇಲ್ವಿಚಾರಕ ದಾದಾಪೀರ್‌, ಮಲೇರಿಯಾ ರೋಗ ಮೇಲ್ವಿಚಾರಕ ಪ್ರಕಾಶ ಗುತ್ತೇದಾರ, ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯ ಮೇಲ್ವಿಚಾರಕ ಪ್ರಕಾಶಗೌಡ ಬೆದವಟ್ಟಿ   ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.