ADVERTISEMENT

ರೇಷ್ಮೆ ಕೃಷಿ:ಮಾದರಿಯಾದ ಇಟಗಿ ರೈತ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2017, 6:47 IST
Last Updated 5 ಸೆಪ್ಟೆಂಬರ್ 2017, 6:47 IST
ಯಲಬುರ್ಗಾ ತಾಲ್ಲೂಕಿನ ಇಟಗಿ ಗ್ರಾಮದಲ್ಲಿ ಹಿಪ್ಪುನೇರಳೆ ಬೆಳೆದ ರೈತ ಅಂದಪ್ಪ ಹುರಳಿ
ಯಲಬುರ್ಗಾ ತಾಲ್ಲೂಕಿನ ಇಟಗಿ ಗ್ರಾಮದಲ್ಲಿ ಹಿಪ್ಪುನೇರಳೆ ಬೆಳೆದ ರೈತ ಅಂದಪ್ಪ ಹುರಳಿ   

ಕೊಪ್ಪಳ: ಬರ ಪರಿಸ್ಥಿತಿಯಲ್ಲಿ ಪಾರಂಪರಿಕ ಕೃಷಿ ಪದ್ಧತಿಗಿಂತ, ಕಡಿಮೆ ನೀರು ಬಳಸಿ, ಹೆಚ್ಚು ಆದಾಯ ಬರುವ ಬೆಳೆಗಳನ್ನು ಬೆಳೆದು, ಆರ್ಥಿಕ ಲಾಭ ಕಂಡುಕೊಳ್ಳಬಹುದು ಎಂಬುದನ್ನು ಯಲಬುರ್ಗಾ ತಾಲ್ಲೂಕಿನ ಇಟಗಿ ಗ್ರಾಮದ ರೈತ ಅಂದಪ್ಪ ಹುರಳಿ ಸಾಬೀತುಪಡಿಸಿದ್ದಾರೆ.

ಇಟಗಿ ಗ್ರಾಮದಲ್ಲಿನ ಬಹುತೇಕ ಕುಟುಂಬಗಳು ಕೃಷಿ ಅವಲಂಬಿತ. ಆದರೆ ಇಲ್ಲಿ ಯಾವುದೇ ರೀತಿಯ ನೈಸರ್ಗಿಕ ಜಲ ಸಂಪತ್ತು ಇಲ್ಲ. ಎಲ್ಲ ಕೃಷಿಕರು ಸಾಂಪ್ರದಾಯಿಕ ಕೃಷಿ ಅವಲಂಬಿಸಿ ಶೇಂಗಾ, ಹೆಸರು, ಸಜ್ಜೆ, ನವಣೆ, ಕುಸುಬೆ, ಗೋಧಿ, ಜೋಳ ಸೇರಿದಂತೆ ಋತುಮಾನಕ್ಕೆ ಒಗ್ಗುವ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಆದರೆ ಅದೇ ಗ್ರಾಮದ ಕೃಷಿಕ ಅಂದಪ್ಪ ಬಸಪ್ಪ ಹುರಳಿ ಇವರು ಕೃಷಿ ಕ್ಷೇತ್ರದಲ್ಲಿ ಬದಲಾವಣೆ ಬಯಸಿ ತಮ್ಮ ಜಮೀನಿನಲ್ಲಿ ಪಾರಂಪರಿಕವಾಗಿ ಬೆಳೆಯುತ್ತಿದ್ದ ಬೆಳೆಗಳಿಗೆ ಪರ್ಯಾಯವಾಗಿ ಹಿಪ್ಪುನೇರಳೆ ಬೆಳೆಯಲು ಆರಂಭಿಸಿದರು.

ADVERTISEMENT

ಆರಂಭದಲ್ಲಿ ಅನೇಕ ಸಮಸ್ಯೆ ಎದುರಾದವು ವಿದ್ಯುತ್ ಸಮಸ್ಯೆಯಿಂದ ಸಕಾಲದಲ್ಲಿ ಬೆಳೆಗೆ ನೀರು ಹರಿಸಲು ಆಗುತ್ತಿರಲಿಲ್ಲ. ಆದರೆ ಹನಿ ನೀರಾವರಿ ಪದ್ಧತಿಯಿಂದ ಕಡಿಮೆ ನೀರು ಮತ್ತು ಶ್ರಮ ಬಳಸಿ ಬೆಳೆಗೆ ನೀರುಣಿಸುತ್ತಿದ್ದಾರೆ. ಇದಕ್ಕೆ ಇವರಿಗೆ ರೇಷ್ಮೆ ಇಲಾಖೆಯಿಂದ ಹನಿ ನೀರಾವರಿ ಪದ್ಧತಿ ಅಳವಡಿಕೆಗೆ ಮತ್ತು ರೇಷ್ಮೆ ಸಾಕಾಣಿಕೆ ಶೆಡ್ ನಿರ್ಮಾಣ ಮಾಡಲು ಸರ್ಕಾರದ ಸಹಾಯಧನ ಲಭಿಸಿದೆ.

ಹಿಪ್ಪುನೇರಳೆ ಬೆಳೆ ನಾಟಿ ಮತ್ತು ನಿರ್ವಹಣೆಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಡಿ ಕೂಲಿ ಹಣದ ಸಹಾಯ ನೀಡಲಾಗುತ್ತಿದೆ. ಕೃಷಿ ಕ್ಷೇತ್ರದಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಂಡು 1.20 ಎಕರೆ ಜಮೀನಿನಲ್ಲಿ ಪ್ರತಿ ತಿಂಗಳಿಗೆ ₹ 3,040 ಸಾವಿರ ಆದಾಯ ಗಳಿಸುತ್ತಿದ್ದಾರೆ.

ರೇಷ್ಮೆ ಹಿಪ್ಪುನೇರಳೆ ಎಲ್ಲ ಕಚ್ಚಾ ಪದಾರ್ಥಗಳನ್ನು ಟ್ರೆಂಚಿಂಗ್-ಮಂಚಿಂಗ್ ಪದ್ಧತಿ ಅಳವಡಿಸಿ ಉತ್ತಮ ಸಾವಯವ ಗೊಬ್ಬರವು ಬೆಳೆಗೆ ಸಿಗುವಂತೆ ಮಾಡಿದ್ದೇನೆ. ಈ ಕೃಷಿ ಸಾಧನೆ ಬೇರೆ ರೈತರಿಗೆ ಸ್ಫೂರ್ತಿಯಾಗಲಿ ಎಂಬುದು ಯಲಬುರ್ಗಾದ ಐ.ಇ.ಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ ಅಭಿಪ್ರಾಯ.

ಅವರು ತಮ್ಮ ಜಮೀನನ್ನು ಉತ್ತಮವಾಗಿ ಉಳುಮೆ ಮಾಡಿ ಸಾಲಿನಿಂದ ಸಾಲಿಗೆ 3 ಅಡಿ ಅಂತರದಲ್ಲಿ, ಗಿಡದಿಂದ ಗಿಡಕ್ಕೆ 2 ಅಡಿ ಅಂತರದಲ್ಲಿ ರೇಷ್ಮೆ ನಾಟಿ ಮಾಡಿದ್ದಾರೆ. ಅಲ್ಲದೆ ಪ್ರತಿ ಬೆಳೆ ಕಟಾವಿನ ನಂತರ ಬೆಳೆ ನಡುವಿನ ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿ ಸಾವಯವ ಗೊಬ್ಬರ ನೀಡಿ, ಬೆಳೆ ಬೆಳೆಯುತ್ತಿದ್ದಾರೆ. ಇವರು ರೇಷ್ಮೆಯ ಸಾಕಾಣಿಕೆ ಶೆಡ್ ಮೇಲೆ ತೆಂಗಿನ ಗರಿ ಹಾಕಿದ್ದರಿಂದ ರೇಷ್ಮೆ ಕೃಷಿಗೆ ಅಧಿಕ ತಾಪಮಾನದಿಂದ ಉಂಟಾಗುವ ತೊಂದರೆ ತಪ್ಪಿಸಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.