ADVERTISEMENT

ರೈತರಿಗೆ ಉದ್ಯೋಗ; ಕ್ರಮಕ್ಕೆ ಜಿ.ಪಂ ಸೂಚನೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2017, 10:02 IST
Last Updated 12 ಏಪ್ರಿಲ್ 2017, 10:02 IST

ಕೊಪ್ಪಳ: ಗೋಶಾಲೆಗಳಿಗೆ ಜಾನುವಾರು ತರುವ ರೈತರಿಗೆ ಸಮೀಪದಲ್ಲಿಯೇ ಉದ್ಯೋಗ ಖಾತರಿ ಯೋಜನೆ ಅಡಿ ಕೆಲಸ ನೀಡುವ ಕುರಿತು ಕ್ರಮ ವಹಿಸುವಂತೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶೇಖರಪ್ಪ ನಾಗರಳ್ಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಮಂಗಳವಾರ ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ 7 ಗೋಶಾಲೆಗಳನ್ನು ತೆರೆಯಲಾಗಿದೆ. ಎಲ್ಲ ಗೋಶಾಲೆಗಳಿಗೆ 5 ಎಚ್.ಪಿ ಸಾಮರ್ಥ್ಯದ ಮೇವು ಕತ್ತರಿಸುವ ಯಂತ್ರಗಳನ್ನು ಒದಗಿಸಲಾಗುವುದು ಎಂದು ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಶಿವಣ್ಣ ತಿಳಿಸಿದರು.

ಮೀನುಗಾರಿಕೆ ಗುತ್ತಿಗೆ ಮುಂದುವರಿಕೆ: ಕೆರೆಗಳಲ್ಲಿ ಮೀನುಗಾರಿಕೆಗೆ 2016-17ನೇ ಸಾಲಿನಲ್ಲಿ ಮೀನುಗಾರಿಕೆ ಇಲಾಖೆಯಿಂದ ಟೆಂಡರ್ ಕರೆದು ಗುತ್ತಿಗೆ ನೀಡಲಾಗಿತ್ತು. ಆದರೆ ಜಿಲ್ಲೆಯಲ್ಲಿ ಮುಂಗಾರು ಮತ್ತು ಹಿಂಗಾರು ಮಳೆಯ ವೈಫಲ್ಯದಿಂದಾಗಿ ಮೀನುಗಾರಿಕೆ ಗುತ್ತಿಗೆ ಪಡೆದವರಿಗೆ ತೀವ್ರ ನಷ್ಟ ಉಂಟಾಗಿದೆ. ಹೀಗಾಗಿ 2017-18ನೇ ಸಾಲಿಗೆ ಯಾವುದೇ ಗುತ್ತಿಗೆ ಶುಲ್ಕ ಪಡೆಯದೆ, ಅದೇ ಸಂಘದವರಿಗೆ ಮೀನುಗಾರಿಕೆ ಗುತ್ತಿಗೆಯನ್ನು ಮುಂದುವರಿಸುವಂತೆ ಸರ್ಕಾರ ನಿರ್ದೇಶನ ನೀಡಿದೆ ಎಂದು ಮೀನುಗಾರಿಕೆ ಸಹಾಯಕ ನಿರ್ದೇಶಕರು ಸಭೆಯ ಗಮನಕ್ಕೆ ತಂದರು.

ADVERTISEMENT

ಕೃಷಿ ಭಾಗ್ಯ ಯೋಜನೆ ಅಡಿ ಕೃಷಿ ಹೊಂಡ ಕಾರ್ಯಕ್ರಮ ಕೊಪ್ಪಳ ಜಿಲ್ಲೆಯಲ್ಲಿ ಉತ್ತಮವಾಗಿ ಅನುಷ್ಠಾನಗೊಂಡಿದೆ. 2016-17ನೇ ಸಾಲಿನಲ್ಲಿ 2,302 ಕೃಷಿ ಹೊಂಡ ನಿರ್ಮಾಣದ ಗುರಿಯನ್ನು ಸರ್ಕಾರ ನಿಗದಿಪಡಿಸಿತ್ತು. ಜಿಲ್ಲೆಯಲ್ಲಿ 2,876 ಕೃಷಿ ಹೊಂಡ ನಿರ್ಮಿಸಿ ಗುರಿ ಮೀರಿ ಸಾಧನೆ ಮಾಡಲಾಗಿದೆ. ಪ್ರಸಕ್ತ ವರ್ಷ 3,000 ಕೃಷಿ ಹೊಂಡಗಳ ಗುರಿ ನಿಗದಿಪಡಿಸಲಾಗಿದೆ. ಕೃಷಿ ಹೊಂಡಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ, ಇನ್ನೂ 1,500 ಹೆಚ್ಚುವರಿ ಕೃಷಿ ಹೊಂಡಗಳನ್ನು ಜಿಲ್ಲೆಗೆ ಮಂಜೂರು ಮಾಡುವಂತೆ ಈಗಾಗಲೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಅನುಷ್ಠಾನದಲ್ಲಿ ಜಿಲ್ಲೆ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದು ಜಂಟಿಕೃಷಿ ನಿರ್ದೇಶಕ ಡಾ.ರಾಮದಾಸ್ ಹೇಳಿದರು.

ನೀರಿನ ಮೂಲ ಲಭ್ಯವಾಗದ ಕಾರಣ ಜಿಲ್ಲೆಯ 89 ಗ್ರಾಮಗಳಲ್ಲಿ 110 ಖಾಸಗಿ  ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆದು, ನೀರು ಪೂರೈಸಲಾಗುತ್ತಿದೆ. ನನೆಗುದಿಗೆ ಬಿದ್ದಿದ್ದ ಶುದ್ಧ ಕುಡಿಯುವ ನೀರಿನ ಹೊಸ ಘಟಕಗಳ ಸ್ಥಾಪನೆ ಕಾರ್ಯ ಶೀಘ್ರ ಪೂರ್ಣಗೊಳ್ಳಲಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಎಂಜಿನಿಯರ್ ಹೇಳಿದರು.

ಜಿಲ್ಲೆಯಲ್ಲಿ ಸಹಕಾರ ಇಲಾಖೆ 2016-17ನೇ ಸಾಲಿನಲ್ಲಿ ಶೇ 58ರಿಂದ 67 ರಷ್ಟು ಮಾತ್ರ ಸಾಧನೆ ಮಾಡಿದೆ. ಅದಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಹಕಾರ ಸಂಘಗಳ ಉಪನಿಬಂಧಕರಿಗೆ ಕಾರಣ ಕೇಳುವ ನೋಟಿಸ್ ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮಮ್ಮ ನೀರಲೂಟಿ, ಮುಖ್ಯ ಯೋಜನಾಧಿಕಾರಿ ಎಂ. ನಿಂಗಪ್ಪ, ಸದಸ್ಯರಾದ ಮಹೇಶ್, ಭೀಮಣ್ಣ ಅಗಸಿಮುಂದಿನ, ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.