ADVERTISEMENT

ಲಂಬಾಣಿ ಜನರ ಹಕ್ಕುಗಳಿಗೆ ಹೋರಾಟ ಅಗತ್ಯ

ಕನಕಗಿರಿ: ಸಂತ ಸೇವಾಲಾಲ್‌ ಜಯಂತಿ ಆಚರಣೆಯಲ್ಲಿ ಶಾಸಕ ಶಿವರಾಜ ತಂಗಡಗಿ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2017, 6:57 IST
Last Updated 7 ಮಾರ್ಚ್ 2017, 6:57 IST
ಕನಕಗಿರಿ ಎಪಿಎಂಸಿ ಆವರಣದಲ್ಲಿ ಸೋಮವಾರ ನಡೆದ ಶ್ರೀ ಸಂತ ಸೇವಾಲಾಲ್‌  ಮಹಾರಾಜರ 278ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶಾಸಕ ಶಿವರಾಜ ತಂಗಡಗಿ ಮಾತನಾಡಿದರು
ಕನಕಗಿರಿ ಎಪಿಎಂಸಿ ಆವರಣದಲ್ಲಿ ಸೋಮವಾರ ನಡೆದ ಶ್ರೀ ಸಂತ ಸೇವಾಲಾಲ್‌ ಮಹಾರಾಜರ 278ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶಾಸಕ ಶಿವರಾಜ ತಂಗಡಗಿ ಮಾತನಾಡಿದರು   
ಕನಕಗಿರಿ: ಲಂಬಾಣಿ ಜನರು ತಮ್ಮ ಹಕ್ಕು ಪಡೆಯಲು ಒಗ್ಗೂಡಿ ಹೋರಾಡುವ  ಅಗತ್ಯವಿದೆ ಎಂದು ಶಾಸಕ ಶಿವರಾಜ ತಂಗಡಗಿ ಹೇಳಿದರು.
 
ಅಖಿಲ ಭಾರತ ಬಂಜಾರ ಸೇವಾ ಸಂಘ  ಸೋಮವಾರ ಇಲ್ಲಿ ಆಯೋಜಿಸಿದ್ದ  ಸಂತ ಸೇವಾಲಾಲ್‌  ಮಹಾರಾಜರ 278ನೇ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.
 ಬಂಜಾರ,  ಭೋವಿ, ಚೆಲುವಾದಿ ಇತರೆ ವರ್ಗದ ಜನರಿಗೆ  ನ್ಯಾ. ಸದಾಶಿವ ಆಯೋಗ ವರದಿ ಜಾರಿಗೆ ಆಗುವುದರಿಂದ ಸಾಕಷ್ಟು ಅನ್ಯಾಯವಾಗಲಿದೆ.  ಅನ್ಯಾಯದ ವಿರುದ್ಧ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದರು. 
 
ಬಂಜಾರ ಅಭಿವೃದ್ಧಿ ನಿಗಮಕ್ಕೆ ₹1000 ಕೋಟಿ  ಹಣ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಲಾಗುವುದು, ಕನಕಗಿರಿ ಪಟ್ಟಣದಲ್ಲಿ ವಸತಿ ನಿಲಯ ಹಾಗೂ ಶಿಕ್ಷಣ ಸಂಸ್ಥೆ ಸ್ಥಾಪಿಸಲು 2 ಎಕರೆ ಭೂಮಿ ನೀಡಲು ಯತ್ನಿಸಲಾಗುವುದು ಎಂದರು.
 
ಮಾಜಿ ಶಾಸಕ ಹಾಗೂ ಬಂಜಾರ ಸಮಾಜದ ಹಿರಿಯ ಮುಖಂಡ ಮನೋಹರ ಐನಾಪುರ ಮಾತನಾಡಿ ನ್ಯಾ. ಸದಾಶಿವ ಆಯೋಗ ವರದಿ ಜಾರಿಗೆ ಆಗುವುದು ಅಸಾಧ್ಯದ ವಿಷಯ, ರಾಜಕಾರಣಿಗಳು  ಪಿತೂರಿ ಮಾಡುವ ಮೂಲಕ ಜನಾಂಗದವರಲ್ಲಿ ಆತಂಕದ ಭಾವನೆ ಮೂಡಿಸಿದ್ದಾರೆ, ಲಂಬಾಣಿಗರನ್ನು ಮೀಸಲಾತಿ ಪಟ್ಟಿಯಿಂದ ಕೈ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. 
 
ಬಿಜೆಪಿ ಎಸ್‌ಸಿ ಮೋರ್ಚಾ ಮಾಜಿ ಪ್ರಧಾನ ಕಾರ್ಯದರ್ಶಿ ಬಸವರಾಜ ದಢೇಸೂಗರು ಮಾತನಾಡಿ , ಬಡವರ ಕಣ್ಣೀರು ಒರೆಸುವ ಕೆಲಸವನ್ನು ಜನಪ್ರತಿನಿಧಿಗಳು ಮಾಡಬೇಕೆಂದು  ಹೇಳಿದರು. ಕಲ್ಮಠದ ಡಾ. ಚನ್ನಮಲ್ಲಸ್ವಾಮಿ, ಕುಮಾರ ಮಹಾರಾಜರು, ಶಿವ ಪ್ರಕಾಶ ಮಹಾರಾಜ, ಗೋಸಾಯಿ ಬಾಬಾ, ಸಾನ್ನಿಧ್ಯ ವಹಿಸಿದ್ದರು.
 
ಕನಕಗಿರಿ ಕ್ಷೇತ್ರದ ಬಂಜಾರ ಸಮಾಜದ ಅಧ್ಯಕ್ಷ ತಾರು ವಾಲೂ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.  ಬಂಜಾರ ಸಮಾಜದ ಜಿಲ್ಲಾಧ್ಯಕ್ಷ ಭರತ್ ನಾಯ್ಕ, ತಾಲ್ಲೂಕು ಅಧ್ಯಕ್ಷ ಲಕ್ಷ್ಮಣ ನಾಯ್ಕ,  ಲಸ್ಕರಿ ನಾಯ್ಕ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲಕ್ಷ್ಮವ್ವ ಸಿದ್ದಪ್ಪ ನೀರ್ಲೂಟಿ, ಸದಸ್ಯರಾದ ಅಮರೇಶ ಗೋನಾಳ, ವಿಶ್ವನಾಥರೆಡ್ಡಿ ಹೊಸಮನಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಸಂತಗೌಡ, ಉಪಾಧ್ಯಕ್ಷ ಗವಿಸಿದ್ದಪ್ಪ, ಸದಸ್ಯರಾದ ಪರಸಪ್ಪ, ಶಿವಮ್ಮ ಚವ್ಹಾಣ, ಎಪಿಎಂಸಿ ಅಧ್ಯಕ್ಷ ಸಿ. ದುರ್ಗಾರಾವ್, ಸದಸ್ಯ ದೇವಪ್ಪ ತೋಳದ, ಪ್ರಮುಖರಾದ ಡಾ. ಅರವಟಗಿಮಠ, ರಮೇಶ ನಾಯಕ, ಗಂಗಾಧರಸ್ವಾಮಿ, ಮಹಾಂತೇಶ ಸಜ್ಜನ್, ವೀರೇಶ ಸಮಗಂಡಿ, ಪಾಂಡುರಂಗ ರಾಠೋಡ್, ದುರ್ಗಮ್ಮ,  ಅಶ್ವಿನಿ ದೇಸಾಯಿ, ರಾಮಮೋಹನ, ಹನುಮೇಶ ಚವ್ಹಾಣ, ವಿಷಯ ಪರಿವೀಕ್ಷಕ ಆರ್‌. ಟಿ. ನಾಯಕ್, ಭಾಸ್ಕರ ನಾಯಕ  ಇದ್ದರು.
 
* ವಿದ್ಯಾವಂತರಿಂದ ಲಂಬಾಣಿ ಸಂಸ್ಕೃತಿ ಮರೆಯಾಗುತ್ತಿದೆ, ವೇಷಭೂಷಣದ ಬಗ್ಗೆ ಗೇಲಿ ಮಾಡಿದರೂ ತಲೆ ಕೆಡಿಸಿಕೊಳ್ಳಬೇಡಿ,  ಅಭಿಮಾನ ಪಡಿರಿ.
ಡಾ. ಚನ್ನಮಲ್ಲಸ್ವಾಮಿ, ಕಲ್ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.