ADVERTISEMENT

ವಸತಿ ಫಲಾನುಭವಿ ಆಯ್ಕೆ: ತಾರತಮ್ಯಆರೋಪ

​ಪ್ರಜಾವಾಣಿ ವಾರ್ತೆ
Published 4 ಮೇ 2016, 11:34 IST
Last Updated 4 ಮೇ 2016, 11:34 IST

ಕುಕನೂರು:  ರಾಜ್ಯ ಸರ್ಕಾರದ ಬಸವ ವಸತಿ ಯೋಜನೆ ಫಲಾನುಭವಿಗಳ ಆಯ್ಕೆಯಲ್ಲಿ ತಾರತಮ್ಯ,ಪಕ್ಷಪಾತದ ಆರೋಪಗಳು ಕೇಳಿ ಬರುತ್ತಿದ್ದು, ವಿವಾದಕ್ಕೆ ಕಾರಣವಾಗಿದೆ. ಮಂಡಲಗಿರಿ ಗ್ರಾಮ ಪಂಚಾಯಿತಿಗೆ 2015-–16ನೇ ಸಾಲಿಗೆ 30 ಮನೆಗಳು ಮಂಜೂರಾಗಿವೆ.  ಪ್ರಭಾವ ಬಳಸಿ, ಹಣ ನೀಡಿದವರಿಗೆ ನೀಡಲಾಗುತ್ತಿದೆ. ಅರ್ಹ ವಸತಿ ರಹಿತರಿಗೆ ಮನೆ ಇಲ್ಲದಂತಾಗಿದೆ ಎಂದು  ನೊಂದ ಫಲಾನುಭವಿಗಳು ದೂರಿದ್ದಾರೆ.

ಗ್ರಾಮಸಭೆಯಲ್ಲಿ ನಡೆಯಬೇಕಾದ ಮನೆಗಳ ಆಯ್ಕೆ ಪ್ರಕ್ರಿಯೆ ಕೆಲ ಪ್ರಭಾವಿಗಳ ಒತ್ತಡದಿಂದಾಗಿ ಮೊದಲೇ ಆಯ್ಕೆಪಟ್ಟಿ ಸಿದ್ಧವಾಗಿರುತ್ತದೆ. ಗ್ರಾಮಸಭೆ ಆಯ್ಕೆ ಪ್ರಕ್ರಿಯೆ ನೆಪ ಮಾತ್ರಕ್ಕೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಗ್ರಾಮಸಭೆಯಲ್ಲಿ ಆಯ್ಕೆಯಾದ ಪಟ್ಟಿ ಅನುಮೋದನೆಗೊಳ್ಳುವಾಗ ಅದು ಬೇರೆಯಾಗಿರುತ್ತದೆ. ಬಡವರಿಗೆ ತಲುಪಬೇಕಾದ ಆಸರೆ ಮತ್ಯಾರಿಗೋ ತಲುಪುತ್ತಿವೆ ಎಂಬುದು ಗ್ರಾಮಸ್ಥರ ಅಳಲು.

ತಾರತಮ್ಯ ಅಪಾದನೆ:ಬಸವ ವಸತಿ ಫಲಾನುಭವಿ ಆಯ್ಕೆಯಲ್ಲಿ ಪಿಡಿಒ, ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರು ತಾರತಮ್ಯ ಮಾಡಿದ್ದಾರೆಂಬ ಆಪಾದನೆ ಕೇಳಿ ಬರುತ್ತಿದೆ. ಗ್ರಾಮ ಪಂಚಾಯಿತಿ ಆಡಳಿತಮಂಡಳಿ ಫಲಾನುಭವಿಗಳಿಂದ ಹಣ ಪಡೆದು ಮನೆ ಹಂಚಿಕೆ ಮಾಡಿದ್ದಾರೆ. ಗ್ರಾಮಸಭೆಯಲ್ಲಿ ಆಯ್ಕೆ ಆಗಿದ್ದು ಒಂದು , ಅಂತಿಮ ಪಟ್ಟಿಗೆ ಬಂದಿದ್ದು ಮತ್ತೊಂದು ಎಂಬುದು ಫಲಾನುಭವಿಗಳ ದೂರು.

ಪಿಡಿಒ, ಸದಸ್ಯರು ಒಂದು ಮನೆಗೆ ಹತ್ತು ಸಾವಿರ ರೂಪಾಯಿ ಹಣ ಪಡೆದಿದ್ದಾರೆ ಈ ಕುರಿತು ದಾಖಲೆಗಳಿದ್ದು ಅರ್ಹ ಮನೆ ವಂಚಿತ ಫಲಾನುಭವಿಯೊಬ್ಬರು ತಪ್ಪಿತಸ್ಥರಿಗೆ ಶಿಕ್ಷೆಗಾಗಿ ಜಿಲ್ಲಾಧಿಕಾರಿ ಕಚೇರಿ ಮತ್ತು ಲೋಕಾಯುಕ್ತ ಕಚೇರಿಗೆ ಅಲೆದಾಡುತ್ತಿದ್ದು ಹೋರಾಟ ನಡೆಸಲಾಗುತ್ತಿದೆ ಎಂದು ಬಸವರಾಜ ಅಡಗಿಮನಿ ತಿಳಿಸಿದ್ದಾರೆ.

   ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಹಾಗೂ   ಕಾರ್ಯದರ್ಶಿ  ಇವರ ಕೆಲವು ರಾಜಕಾರಣಿಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದು, ಬಡವರ ಸೂರು ದಿಕ್ಕುಪಾಲಾಗುತ್ತಿದೆ ಎನ್ನಲಾಗುತ್ತಿದೆ.

ಸರ್ಕಾರದ ಯೋಜನೆಯೊಂದು ಸರ್ಮಪಕವಾಗಿ ಅನುಷ್ಠಾನಗೊಳ್ಳದೇ ನಿರ್ವಸಿತರು, ನಿರ್ಗತಿಕರು, ಗುಡಿಸಲ ವಾಸಿಗಳ ಕನಸಿನ ಮನೆ ನನಸಾಗದೇ ಹೋಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.