ADVERTISEMENT

ವಿಶ್ವಕ್ಕೆ ಭಾರತ ನೀಡಿದ ಕೊಡುಗೆ ಯೋಗ

ಶಾಸಕ ಅಮರೇಗೌಡ ಬಯ್ಯಾಪುರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2018, 10:43 IST
Last Updated 11 ಜೂನ್ 2018, 10:43 IST

ಕುಷ್ಟಗಿ: ವಿಶಾಲ ತಳಹದಿಯ ಮೇಲೆ ರೂಪುಗೊಂಡಿರುವ ಯೋಗ ಭಾರತದ ನಾಗರಿಕತೆಯನ್ನು ಪ್ರತಿಬಿಂಬಿಸುತ್ತಿದೆ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಹೇಳಿದರು.

ಭಾನುವಾರ ಇಲ್ಲಿಯ ಪತಂಜಲಿ ಯೋಗ ಸಮಿತಿ ಬುತ್ತಿಬಸವೇಶ್ವರ ದೇವಸ್ಥಾನದಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ಯೋಗ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿ, ಯೋಗ ಭಾರತ ಜಗತ್ತಿಗೆ ನೀಡಿದ ಕೊಡುಗೆಯಾಗಿದೆ ಎಂದರು.

ಮನಸ್ಸಿನಲ್ಲಿ ಪ್ರಸನ್ನ, ಶಾಂತ ಚಿತ್ತ ಮೂಡಿಸುವುದರ ಜೊತೆಗೆ ಆರೋಗ್ಯ ವನ್ನು ವೃದ್ಧಿಸಿ ವ್ಯಕ್ತಿಯಲ್ಲಿ ಸಂಸ್ಕಾರ ತರುತ್ತದೆ. ಯಾಂತ್ರಿಕ ಜಂಜಾಟದಲ್ಲಿ ದೇಹ ಮತ್ತು ಮನಸ್ಸು ಎರಡೂ ಶುದ್ಧಿಯಾಗಿರಬೇಕಾದರೆ ಯೋಗ ಅವಶ್ಯ. ಕಾಯಿಲೆಬಂದಾಗ ವಾಸಿಮಾಡಿಕೊಳ್ಳಲು ಹೆಣಗಾಡುವ ಬದಲು ರೋಗ ಬಾಧಿಸದಂತೆ ನೋಡಿಕೊಳ್ಳುವುದು ಜಾಣತನದ ಲಕ್ಷಣ ಎಂದು ಹೇಳಿದರು.

ADVERTISEMENT

ಶಿಬಿರ ಉದ್ಘಾಟಿಸಿದ ಮುದೇನೂರು ಮಠದ ನಿಯೋಜಿತ ಸ್ವಾಮೀಜಿ ಸಿದ್ದಲಿಂಗ ದೇವರು, ಭಾರತೀಯ ಮೂಲದ ಯೋಗ ಇತ್ತೀಚಿನ ದಿನಗಳಲ್ಲಿ ವಿಶ್ವವ್ಯಾಪಿಯಾಗುತ್ತಿದ್ದು ಇತರೆ ದೇಶಗಳಿಗೆ ಯೋಗದಲ್ಲಿನ ಮಹತ್ವ ಅರಿವಿಗೆ ಬರುತ್ತಿದೆ. ಒತ್ತಡ ರಹಿತ ಮನಸ್ಸಿನಿಂದ ರೋಗ ಬಾಧೆ ಹೆಚ್ಚುವುದಿಲ್ಲ, ಯೋಗ ಕೇವಲ ವ್ಯಾಯಾಮದಂತೆ ಎಂದು ಭಾವಿಸಬಾರದು ಎಂದರು.

ಪತಂಜಲಿ ಯೋಗ ಸಮಿತಿಯ ರಾಜ್ಯ ಸದಸ್ಯ ಡಾ.ಎಸ್.ಬಿ.ಹಂದ್ರಾಳ ಅವರು ಶಿಬಿರಾರ್ಥಿಗಳಿಗೆ ಯೋಗಭ್ಯಾಸ ಮತ್ತು ಆರೋಗ್ಯ ಕುರಿತ ಸಂಗತಿಗಳನ್ನು ವಿವರಿಸಿದರು.

ಪತಂಜಲಿ ಭಾರತ ಸ್ವಾಭಿಮಾನ ಟ್ರಸ್ಟ್ ವತಿಯಿಂದ ನೂತನ ಶಾಸಕ ಅಮರೇಗೌಡ ಬಯ್ಯಾಪುರ ಹಾಗೂ ಮುದೇನೂರು ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು. ಪತಂಜಲಿ ಯೋಗ ಸಮಿತಿ ಜಿಲ್ಲಾ ಪ್ರಭಾರಿ ವೀರೇಶ ಬಂಗಾರಶೆಟ್ಟರ್, ತಾಲ್ಲೂಕು ಪ್ರಭಾರಿ ಅಚಲಾರಾಂ, ಮಹಿಳಾ ಘಟಕದ ಪ್ರಭಾರಿ ಕುಸುಮಾ ಶ್ಯಾಟಿ, ಯುವ ಘಟಕದ ಪ್ರಭಾರಿ ಕುಮಾರ ಬಡಿಗೇರ, ಲತಾ ಸ್ಥಾವರಮಠ, ಭಾರತಿ ಶೆಟ್ಟಿ, ಶಿವಲೀಲಾ ದಾವಣಗೆರೆ ಮತ್ತು ಅನೇಕ ಶಿಬಿರಾರ್ಥಿಗಳು ಇದ್ದರು. ಕೆ.ಬಿ.ಸ್ಥಾವರಮಠ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.