ADVERTISEMENT

ಸರ್ಕಾರಿ ಜಮೀನು ಒತ್ತುವರಿ ತೆರವಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಜುಲೈ 2017, 6:51 IST
Last Updated 14 ಜುಲೈ 2017, 6:51 IST

ಕುಷ್ಟಗಿ: ‘ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡು  ಸಾಗುವಳಿ ಮಾಡುತ್ತಿರುವುದನ್ನು ತೆರವುಗೊಳಿಸಿ   ಒತ್ತುವರಿದಾರರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡುವಂತೆ  ಕಂದಾಯ ಇಲಾಖೆ ಅಧಿಕಾರಿಗಳು ನೀಡಿರುವ ಆದೇಶವನ್ನು ತಾವರಗೇರಾ ಹೋಬಳಿ ವ್ಯಾಪ್ತಿಯ  ಅಧಿಕಾರಿಗಳು ನಿರ್ಲಕ್ಷಿಸಿದ್ದಾರೆ’ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಆನಂದ ಭಂಡಾರಿ.

ಈ ಕುರಿತು ಬುಧವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆನಂದ ಭಂಡಾರಿ, ‘ನಾಡ ಕಚೇರಿ ಉಪ ತಹಶೀಲ್ದಾರ್‌ ಮತ್ತು ಕಂದಾಯ ನಿರೀಕ್ಷಕ ಇವರ ಮೇಲೆ ಶಿಸ್ತಿನ ಕ್ರಮ ಜರುಗಿಸಬೇಕು’ ಎಂದು  ಒತ್ತಾಯಿಸಿದರು.

ಆಗಿದ್ದೇನು?: ತಾಲ್ಲೂಕಿನ ಮೆಣೆಧಾಳ ಗ್ರಾಮದ 95ನೇ ಸರ್ವೆ ಸಂಖ್ಯೆಯಲ್ಲಿ ಸರ್ಕಾರಕ್ಕೆ ಸೇರಿದ 27 ಎಕರೆ, 16 ಗುಂಟೆ  ಜಮೀನು ಇದೆ. ಅದೇ ಗ್ರಾಮದ ಸಂಜೀವಪ್ಪ ತಿರುಕಪ್ಪ, ಹೊಳೆಯಪ್ಪ ಸೋಮಪ್ಪ, ಮಲ್ಲಮ್ಮ ಸಂಜೀವಪ್ಪ, ಕಳಕಪ್ಪ ಸೋಮಪ್ಪ, ಶಿವರಾಯಪ್ಪ ಅಂತಪ್ಪ, ಮಲ್ಲಮ್ಮ ಹನುಮಪ್ಪ ಮತ್ತು ಸೋಮಪ್ಪ ಸಿದ್ದಪ್ಪ ಎಂಬುವವರು ಆ ಜಮೀನನ್ನು ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡುತ್ತಿದ್ದಾರೆ.

ADVERTISEMENT

ಈ ಬಗ್ಗೆ 2014ರ ಸೆಪ್ಟೆಂಬರ್‌ 12ರಂದು ನಾಡ ಕಚೇರಿಯಿಂದ ತಿಳಿವಳಿಕೆ ನೀಡಿ ಒತ್ತುವರಿ ಮಾಡಿಕೊಂಡಿರುವ ಜಮೀನನ್ನು ತೆರವುಗೊಳಿಸುವಂತೆ ಸೂಚಿಸಲಾಗಿತ್ತು.
ಡಿಸಿ ಆದೇಶ: ‘ಈ ಕುರಿತು ಕಳೆದ ಜೂನ್‌ 8ರಂದು ಇಲ್ಲಿಯ ತಹಶೀಲ್ದಾರ್‌ಗೆ ಆದೇಶ ಹೊರಡಿಸಿದ ಜಿಲ್ಲಾಧಿಕಾರಿ, ಅನಧಿಕೃತ ಸಾಗುವಳಿಗೆ ಸಂಬಂಧಿಸಿದಂತೆ ನಮೂನೆ 50 ಮತ್ತು 53ರ ಅನ್ವಯ ಅರ್ಜಿ ಸಲ್ಲಿಸಿದ್ದರೆ ಅದರ ಪ್ರತಿಯನ್ನು ನೀಡಬೇಕು. ಒಂದು ವೇಳೆ ಫಲಾನುಭವಿಗಳು ಅರ್ಜಿ ಸಲ್ಲಿಸದಿದ್ದರೆ ಜಮೀನನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳುವಂತೆ’ ಸೂಚಿಸಿದ್ದರು.

‘ಈ ಬಗ್ಗೆ ಕಚೇರಿಯಿಂದ ಹಿಂದೆ ಅನೇಕ ನೋಟಿಸ್‌ ಜಾರಿ ಮಾಡಿದರೂ ಒತ್ತುವರಿದಾರರು ಅದಕ್ಕೆ ಸ್ಪಂದಿಸದ ಕಾರಣ ಸರ್ಕಾರದ ವತಿಯಿಂದ ಮೂರು ದಿನಗಳ ಒಳಗಾಗಿ ತೆರವುಗೊಳಿಸಿ ಅದಕ್ಕೆ ತಗಲುವ ಖರ್ಚನ್ನು ಭೂ ಕಂದಾಯ ರೂಪದಲ್ಲಿ ವಸೂಲಿ ಮಾಡಬೇಕು ಮತ್ತು ಅವರ ವಿರುದ್ಧ ಭೂ ಕಂದಾಯ ಕಾಯ್ದೆ ಕಲಂ 192(ಎ) ಅನ್ವಯ ಕ್ರಿಮಿನಲ್‌ ಪ್ರಕರಣ ದಾಖಲಿಸುವಂತೆ  ತಹಶೀಲ್ದಾರ್‌ ಜುಲೈ 3ರಂದು  ತಾವರಗೇರಾ ಹೋಬಳಿಯ ಕಂದಾಯ ನಿರೀಕ್ಷಕರಿಗೆ ಸೂಚಿಸಿದ್ದರು. ಅದೇ ರೀತಿ ತೆರವು ಕಾರ್ಯಾಚರಣೆಗೆ ಪೊಲೀಸ್‌ ರಕ್ಷಣೆ ಒಗದಿಸುವಂತೆ ತಾವರಗೇರಾ ಪೊಲೀಸ್‌ ಠಾಣೆಗೆ ಪತ್ರ ಬರೆದಿದ್ದರು.

‘ಆದರೆ, ಈವರೆಗೂ ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಸರ್ಕಾರಿ ಜಮೀನಿನ ಒತ್ತುವರಿ ತೆರವುಗೊಳಿಸುವಂತೆ ಸ್ವತಃ ಮೇಲಧಿಕಾರಿಗಳು ಸ್ಪಷ್ಟ ಆದೇಶ ನೀಡಿದ್ದರೂ ಅದರ ಬಗ್ಗೆ ತಾವರಗೇರಾ ಉಪತಹಶೀಲ್ದಾರ್‌ ಹಸನ್‌ಸಾಬ್‌ ಗುಳೇದಗುಡ್ಡ ಮತ್ತು ಕಂದಾಯ ನಿರೀಕ್ಷಕ ಎಂ.ಮಲ್ಲಿಕಾರ್ಜುನ ಕ್ರಮಕ್ಕೆ ಮುಂದಾಗಿಲ್ಲ. ಸರ್ಕಾರ ಭೂ ರಹಿತರಿಗೆ ಜಮೀನು ಹಂಚಿಕೆ ಮಾಡಿದ್ದರೂ ಅವರಿಗೆ ಜಮೀನು ನೀಡಿಲ್ಲ. ಅವರ ವಿರುದ್ಧ ಕ್ರಮ ಜರುಗಿಸುವಂತೆ ಆನಂದ ಭಂಡಾರಿ  ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದ್ದಾರೆ.

‘ನವಲಹಳ್ಳಿ ಯಲ್ಲಿ ಫಲಾನುಭವಿಗಳಿಗೆ ಮನೆ, ನಿವೇಶನ ಹಂಚಿಕೆ ಮಾಡುವ ಸಲುವಾಗಿ ಡಾ.ಅಂಬೇಡ್ಕರ್‌ ಅಭಿವೃದ್ಧಿ ನಿಗಮ 10 ಎಕರೆ ಜಮೀನು ಖರೀದಿ ಮಾಡಿತ್ತು. ಆದರೆ, ಈವರೆಗೂ ಹಂಚಿಕೆ ಪ್ರಕ್ರಿಯೆ ನಡೆದಿಲ್ಲ. ತಾವರಗೇರಾದಲ್ಲಿನ ಸರ್ವೆ ಸಂಖ್ಯೆ 55ರ ಜಮೀನನ್ನು ಭೂ ರಹಿತ ಕುಟುಂಬಗಳಿಗೆ ಉಳುಮೆಗಾಗಿ ಹಂಚಲಾಗಿತ್ತು. ಆದರೆ, ಉಳುಮೆ ಮಾಡದ ಫಲಾನುಭವಿಯೊಬ್ಬರು ಅದರಲ್ಲಿ ನಿವೇಶನಗಳನ್ನು ರಚಿಸಿ ಬೇರೆಯವರಿಗೆ ಮಾರಾಟ ಮಾಡುತ್ತಿದ್ದು, ಅವರ ವಿರುದ್ಧ ಕ್ರಮ ಕೈಗೊಂಡು ಭೂ ಮಂಜೂರಾತಿಯನ್ನು ರದ್ದುಪಡಿಸಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.