ADVERTISEMENT

ಸರ್ಕಾರಿ ಶಾಲೆಯಲ್ಲಿ ಮಕ್ಕಳ ನಂದನವನ!

​ಪ್ರಜಾವಾಣಿ ವಾರ್ತೆ
Published 30 ಜುಲೈ 2014, 10:49 IST
Last Updated 30 ಜುಲೈ 2014, 10:49 IST
ಹೂವಿನ ಗಿಡಗಳ ಆರೈಕೆಯಲ್ಲಿ ನಿರತರಾದ ವಿದ್ಯಾರ್ಥಿಗಳು
ಹೂವಿನ ಗಿಡಗಳ ಆರೈಕೆಯಲ್ಲಿ ನಿರತರಾದ ವಿದ್ಯಾರ್ಥಿಗಳು   

ಕಾರಟಗಿ: ಸಮೀಪದ ಹೊಸ ಜೂರಟಗಿಯ ಸರ್ಕಾರಿ ಶಾಲೆ ಆವರಣ ನಂದನವನ ಎಂಬಂತಿದೆ.
ಹೊರಗಡೆಯಿಂದ ನೋಡಿದರೆ ಶಾಲಾ ಆವರಣ ಎಂಬ ಕಲ್ಪನೆ ಬಾರದೆ, ತೋಟ ಇರ­ಬಹುದು ಎಂದು ಯಾರಾದರೂ ಲೆಕ್ಕ ಹಾಕ­ಬಹುದು. ಶಾಲೆ ಮಹಾದ್ವಾರ ಪ್ರವೇಶಿಸಿದರೆ 2 ಬದಿಯಲ್ಲಿ ಗುಡ್ಡದಂತೆ ಬೆಳೆದಿರುವ ತೆಂಗಿನ ಮರಗಳು, ಒಳ ಹೋದಂತೆ ನೀರಲೆ, ಬಾಳೆ, ತರಾವರಿ ಹೂವಿನ ಗಿಡಗಳು, ವಿವಿಧ ನಮೂನೆ ತರಕಾರಿಗಳು ಕಾಣುತ್ತವೆ.

ಬಿಡುವಿನ ಸಮಯದಲ್ಲಿ ಶಿಕ್ಷಕರು, ವಿದ್ಯಾರ್ಥಿ­ಗಳು ತರಕಾರಿ, ಹೂವು, ಗಿಡಗಳನ್ನು ಪೋಷಿಸು­ತ್ತಾರೆ. ಇದೇ ಕಾರಣದಿಂದ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿದೆ.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಕೊಪ್ಪಳ ಜಿಲ್ಲಾ ಘಟಕ ಪರಿಸರ ಮಿತ್ರ ಶಾಲಾ ಕಾರ್ಯಕ್ರಮದಡಿ 2012– 13 ಸಾಲಿನಲ್ಲಿ ಜಿಲ್ಲಾ ಹಸಿರು ಶಾಲೆ ಪ್ರಶಸ್ತಿ ನೀಡಿ ಪುರಸ್ಕರಿಸಿದೆ.

ವಿದ್ಯಾರ್ಥಿಗಳಲ್ಲಿ ನಾಡಿನ, ದೇಶದ ಬಗೆಗೆ ಅಭಿಮಾನ ಮೂಡಿಸುವ ಅನೇಕ ಕಾರ್ಯಕ್ರಮಗಳು ಶಾಲೆಯಲ್ಲಿ ನಿರಂತರವಾಗಿ ನಡೆಯುತ್ತಿರುತ್ತವೆ. ಜೊತೆಗೆ ಪರಿಸರ, ಸ್ವಚ್ಛತೆಯ ಜಾಗೃತಿಯನ್ನು, ಜೀವನ ಪಾಠವನ್ನು ಶಿಕ್ಷಕರು ಅಚ್ಚುಕಟ್ಟಾಗಿ ಕಲಿಸುತ್ತಿದ್ದಾರೆ.

ಇಷ್ಟೆಲ್ಲಾ ಸಾಧನೆಯ ಶಾಲೆಗೆ ಸರ್ಕಾರ, ಶಿಕ್ಷಣ ಇಲಾಖೆ ಸೌಲಭ್ಯ ಒದಗಿಸದೆ ಇರುವುದು ದುರಂತವೆನ್ನಲೇಬೇಕು ಎಂದು ಗ್ರಾಮದ ಯುವಕರೊಬ್ಬರು ಪ್ರತಿಕ್ರಿಯಿಸಿದರು .

ಮುಖ್ಯಗುರು ತಿರುಪತಿ, ಶಿಕ್ಷಕ ವೀರನ­ಗೌಡರನ್ನು ಮಾತನಾಡಿಸಿದಾಗ, ಇತರ ಶಿಕ್ಷಕರ, ವಿದ್ಯಾರ್ಥಿಗಳ ಸಹಕಾರದೊಂದಿಗೆ ಹಿಂದಿನವರು ಶ್ರಮಿಸಿ ಬೆಳೆಸಿದ್ದಾರೆ. ಇದೇ ಕಾರಣಕ್ಕಾಗಿ ಶಾಲೆ ಅಚ್ಚುಕಟ್ಟಾಗಿರಲು ಸಾಧ್ಯವಾಗಿದೆ. ನಾವೂ ಹಿಂದಿನವರ ಮಾದರಿಯನ್ನು ಮುಂದು­ವರೆಸಿದ್ದೇವೆ ಎನ್ನುತ್ತಾರೆ.

ಸಾಧನೆಯ ಈ ಶಾಲೆ ಶಿಕ್ಷಕರ, ಬಿಸಿಯೂಟ ಸಿಬ್ಬಂದಿ, ಕೊಠಡಿಗಳ ಸಮಸ್ಯೆಗಳ ಸುಳಿಯಲ್ಲಿದೆ. ಶಿಕ್ಷಣ ಇಲಾಖೆ, ಜನಪ್ರತಿನಿಧಿಗಳು ಕೊರತೆ ಹೋಗಲಾಡಿಸಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.