ADVERTISEMENT

ಸಾರ್ವಜನಿಕ ಆಸ್ಪತ್ರೆಯಲ್ಲಿ ಮೂಲಸೌಲಭ್ಯ ಕೊರತೆ

ನೀರಿಗೆ ಪರದಾಟ; ಸ್ವಚ್ಛತೆ ಕಾಪಾಡದ ಸಾರ್ವಜನಿಕರು

​ಪ್ರಜಾವಾಣಿ ವಾರ್ತೆ
Published 25 ಮೇ 2017, 7:09 IST
Last Updated 25 ಮೇ 2017, 7:09 IST

ಕುಷ್ಟಗಿ: ತಜ್ಞ ವೈದರು, ಸಿಬ್ಬಂದಿ ಕೊರತೆ ಮತ್ತು ನೀರಿನ ಸಮಸ್ಯೆ ಸೇರಿದಂತೆ ಇಲ್ಲಿಯ ನೂರು ಹಾಸಿಗೆಯ ಸಾರ್ವಜನಿಕ ಆಸ್ಪತ್ರೆ ಮೂಲಸೌಲಭ್ಯದಿಂದ ವಂಚಿತವಾಗಿದೆ.

‘ನೂರು ಹಾಸಿಗೆ ಸಾಮರ್ಥ್ಯಕ್ಕೆ ಮೇಲ್ದರ್ಜೆಗೆ ಏರಿ ಆರೇಳು ವರ್ಷ ಕಳೆದರೂ ಆಸ್ಪತ್ರೆ ಹೆಸರಿಗೆ ಮಾತ್ರ ಎನ್ನುವಂತಾಗಿದೆ. ಈ ಬಗ್ಗೆ ಆರೋಗ್ಯ ಇಲಾಖೆ ಮತ್ತು ಚುನಾಯಿತ ಪ್ರತಿನಿಧಿಗಳು ಗಮನಹರಿಸದ ಕಾರಣ ಬಡವರು, ಜನಸಾಮಾನ್ಯರ ಪಾಲಿಗೆ ಇದ್ದೂ ಇಲ್ಲದಂತಾಗಿದೆ. ನೈರ್ಮಲ್ಯ ವ್ಯವಸ್ಥೆ ಹದಗೆಟ್ಟಿದೆ. ಚಿಕಿತ್ಸೆ ರೋಗಿಗಳಿಗಿಂತ ಮೊದಲು ಆಸ್ಪತ್ರೆಗೆ ದೊರೆಯಬೇಕಿದೆ’ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶುದ್ಧ ಕುಡಿಯುವ ನೀರು ಪೂರೈಕೆ ವ್ಯವಸ್ಥೆ ಇದ್ದರೂ ಸ್ಥಗಿತಗೊಂಡಿದೆ. ರೋಗಿಗಳ ಸಂಬಂಧಿಕರು ನೀರಿಗಾಗಿ ಅಲೆಯುವಂತಾಗಿದೆ. ನಿತ್ಯ ಬಳಕೆ ನೀರಿಗೂ ಪರದಾಟ ತಪ್ಪಿಲ್ಲ. ನೀರಿಲ್ಲದ ಕಾರಣ ಶೌಚಾಲಯ, ಸ್ನಾನದ ಕೊಠಡಿಗಳು ದುರ್ನಾತಕ್ಕೀಡಾಗಿ ರೋಗಗ್ರಸ್ತವಾಗಿವೆ’ ಎಂದು ರೋಗಿಗಳು ಅಳಲು ತೋಡಿಕೊಂಡರು.

‘ಆಸ್ಪತ್ರೆಯ ಒಳಗೆ ಮತ್ತು ಹೊರಗೆ ನೈರ್ಮಲ್ಯ ವ್ಯವಸ್ಥೆ ಹದಗೆಟ್ಟಿದೆ. ಬಹುತೇಕ ಕೊಠಡಿಗಳು ದುರ್ವಾಸನೆಯಿಂದ ಕೂಡಿವೆ. ಸೊಳ್ಳೆ, ನೊಣಗಳ ಕಾಟ ಮಿತಿಮೀರಿದೆ. ಇಂಥ ಪರಿಸ್ಥಿತಿಯಲ್ಲಿ ರೋಗಿಗಳು, ಬಾಣಂತಿಯರು ನರಕಯಾತನೆ ಅನುಭವಿಸುವಂತಾಗಿದೆ’ ಎಂದು ಆಸ್ಪತ್ರೆಗೆ ಬಂದಿದ್ದ ಬಸವರಾಜ ಉಪ್ಪಲದಡ್ಡಿ, ಪ್ರಕಾಶ ಮನ್ನಾಪುರ ವಿವರಿಸಿದರು.

‘ಅಲ್ಲದೆ ಹೊರಗಿನಿಂದ ಬರುವ ಜನರು ಎಲೆ, ಅಡಿಕೆ, ಗುಟ್ಕಾ ತಿಂದು ಆಸ್ಪತ್ರೆಯ ಒಳಗೆ ಮೂಲೆ, ಕಿಟಕಿ, ಬಾಗಿಲು ಹೀಗೆ ಎಲ್ಲೆಂದರಲ್ಲಿ ಉಗುಳುತ್ತಿರುವುದರಿಂದ ಇಡೀ ವಾತಾವರಣ ಮಲೀನವಾಗಿದೆ’ ಎಂದು ಹೇಳಿದರು.

ಸಿಬ್ಬಂದಿ ಕೊರತೆ: ನೂರು ಹಾಸಿಗೆ ಆಸ್ಪತ್ರೆಯಾಗಿದ್ದರೂ ಅಗತ್ಯ ಸಿಬ್ಬಂದಿ ಇಲ್ಲ. ತಜ್ಞ ವೈದ್ಯರು ಇಲ್ಲದ ಕಾರಣ ರೋಗಿಗಳನ್ನು ಬಾಗಲಕೋಟೆ, ಹುಬ್ಬಳ್ಳಿ, ಕೊಪ್ಪಳ ನಗರಗಳಿಗೆ ಕಳುಹಿಸಲಾಗುತ್ತಿದೆ. ಸ್ವಚ್ಛತೆ ಕಾಪಾಡಲು ಡಿ ದರ್ಜೆ ನೌಕರರೂ ಇಲ್ಲ.

ಈ ಕುರಿತು ವಿವರಿಸಿದ ಆಡಳಿತ ವೈದ್ಯಾಧಿಕಾರಿ ಡಾ.ಚಂದ್ರಕಾಂತ ಮಂತ್ರಿ ಮಾತನಾಡಿ, ‘ನೀರಿನ ಸಮಸ್ಯೆಗೆ ಶೀಘ್ರದಲ್ಲಿ ಪರಿಹಾರ ಕಂಡುಕೊಳ್ಳುತ್ತೇವೆ. ಡಿ ದರ್ಜೆ ನೌಕರರನ್ನು ಹೊರಗುತ್ತಿಗೆ ಮೂಲಕ ನೇಮಿಸಿಕೊಳ್ಳಲು ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಹೇಳಿದರು.

*
ತಜ್ಞ ವೈದ್ಯರು, ಸಿಬ್ಬಂದಿ ಕೊರತೆ ಇದೆ. ರೋಗಿಗಳಿಗೆ ಕೆಲವೆ ಸಿಬ್ಬಂದಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ವೈದ್ಯರ ನೇಮಕಕ್ಕಾಗಿ ಸರ್ಕಾರಕ್ಕೆ  ಪತ್ರ ಬರೆಯಲಾಗಿದೆ.
ಡಾ.ಆನಂದ ಗೋಟೂರು,
ತಾಲ್ಲೂಕು ಆರೋಗ್ಯ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT