ADVERTISEMENT

ಸೌಕರ್ಯ ವಂಚಿತ ಮುಸಲಾಪುರ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2017, 10:01 IST
Last Updated 14 ಫೆಬ್ರುವರಿ 2017, 10:01 IST
ಕನಗಿರಿಯ ಮುಸಲಾಪುರ ಗ್ರಾಮದಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆ, ಚರಂಡಿ ಇಲ್ಲದೆ ಗಲೀಜು ನೀರು ರಸ್ತೆಯಲ್ಲಿ ಹರಿಯುತ್ತಿರುವುದು
ಕನಗಿರಿಯ ಮುಸಲಾಪುರ ಗ್ರಾಮದಲ್ಲಿ ಸಿಮೆಂಟ್ ಕಾಂಕ್ರೀಟ್ ರಸ್ತೆ, ಚರಂಡಿ ಇಲ್ಲದೆ ಗಲೀಜು ನೀರು ರಸ್ತೆಯಲ್ಲಿ ಹರಿಯುತ್ತಿರುವುದು   
ಕನಕಗಿರಿ:  ಗ್ರಾಮ ಪಂಚಾಯಿತಿಯ ಕೇಂದ್ರ ಸ್ಥಾನ ಹೊಂದಿರುವ ಸಮೀಪದ ಮುಸಲಾಪುರ ಗ್ರಾಮ ಮೂಲ ಸೌಕರ್ಯಗಳಿಂದ ವಂಚಿತಗೊಂಡಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.  ಗ್ರಾಮ ಪಂಚಾಯಿತಿ ಆರು  ಸದಸ್ಯರಿದ್ದು, ಮೂರು ಸಾವಿರದಷ್ಟು ಜನಸಂಖ್ಯೆ ಇದೆ. ಗ್ರಾಮದ ಪರಿಶಿಷ್ಟ ಜಾತಿಯ ಭೋವಿ ಕಾಲೊನಿ ಬಿಟ್ಟರೆ ಉಳಿದ ಬೀದಿಗಳಲ್ಲಿ ಸಿಸಿ ರಸ್ತೆ, ಚರಂಡಿ ಕಾಮಗಾರಿ ಕಾಣುವುದು ಅಪರೂಪ.
 
2009-10ನೇ ಸಾಲಿನಲ್ಲಿ ಗ್ರಾಮವು ಸುವರ್ಣ ಗ್ರಾಮೋದಯ ಯೋಜನೆಗೆ ಆಯ್ಕೆಯಾಗಿದ್ದು, ₹1 ಕೋಟಿ ಅನುದಾನ ಬಿಡುಗಡೆಯಾದರೂ ಗ್ರಾಮ ಹೇಳಿಕೊಳ್ಳುವಷ್ಟು ಅಭಿವೃದ್ಧಿಯಾಗಿಲ್ಲ, ಕೆಲವು ರಸ್ತೆಗಳಲ್ಲಿ ಮಾತ್ರ ಸಿಮೆಂಟ್ ಕಾಂಕ್ರಿಟ್ ರಸ್ತೆ ಮಾಡಿದ್ದು ಬಿಟ್ಟರೆ ಸರ್ಕಾರದ ಅನುದಾನವನ್ನು ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಗುತ್ತಿಗೆದಾರರು ದುರ್ಬಳಕೆ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸುತ್ತಾರೆ. ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಸತಿ ನಿಲಯ ಮಂಜೂರಿಯಾಗಿ ದಶಕ ಕಳೆದಿದೆ. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ, ನಿವೇಶನ, ಅನುದಾನ ಬಿಡುಗಡೆಯಾಗಿದ್ದರೂ ಕಾಮಗಾರಿ ಆರಂಭಿಸುತ್ತಿಲ್ಲ  ಸೌಕರ್ಯಗಳ ಕೊರತೆ ಮಧ್ಯೆಯೇ ವಸತಿ ನಿಲಯದಲ್ಲಿ ತಂಗಬೇಕಾಗಿದೆ ಎಂದು  ವಿದ್ಯಾರ್ಥಿಗಳು ದೂರಿದರು. 
 
ಗ್ರಾಮದಲ್ಲಿ  ಆರ್ಯುವೇದ  ಆಸ್ಪತ್ರೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದರೂ ಎರಡು ಆಸ್ಪತ್ರೆಗಳಿಗೆ ವೈದ್ಯರಿಲ್ಲ. ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದರೂ, ಜನರಿಗೆ ನೀರು ದೊರೆಯುತ್ತಿಲ್ಲ.  ರಸ್ತೆಯಲ್ಲಿ ಹರಿದು ದುರ್ವಾಸನೆ ಬೀರುತ್ತಿದೆ. ಮತಯಾಚನೆಗೆ ಬರುವ ರಾಜಕಾರಣಿಗಳು ಮತ್ತೆ ಗ್ರಾಮಕ್ಕೆ ಬರುವುದಿಲ್ಲ ಎಂದು ಗೃಹಣಿ ದೇವಮ್ಮ ಹುಡೇದ ಆಕ್ರೋಶ ವ್ಯಕ್ತಪಡಿಸುತ್ತಾರೆ. ಬೀದಿ ದೀಪದ ವ್ಯವಸ್ಥೆ ಸಹ ಸಮರ್ಪಕವಾಗಿಲ್ಲಹೇಳಿದರು.
 
ಗ್ರಾಮ ಪಂಚಾಯಿತಿ ಆಡಳಿತ ಜನರಿಗೆ ನರೇಗಾ ಯೋಜನೆಯಲ್ಲಿ ಕೂಲಿ ಕಾಮಗಾರಿ ಆರಂಭಿಸದ ಕಾರಣ ನೂರಾರು ಜನ ಕೂಲಿಕಾರ್ಮಿಕರು ಗುಳೆ ಹೋಗಿದ್ದಾರೆ ಎಂದು ಶರಣಪ್ಪ ಎಂ ಕೊಳಜಿ ದೂರಿದರು. ಚುನಾವಣೆಯಲ್ಲಿ ಗ್ರಾಮಸ್ಥರು ಬಿಜೆಪಿಗೆ ಹೆಚ್ಚಿನ ಮತಗಳನ್ನು ನೀಡುತ್ತಿರುವುದರಿಂದ ಕಾಂಗ್ರೆಸ್ ನ ಶಾಸಕರು, ಸಂಸದರು ಹಾಗೂ ಕಾಂಗ್ರೆಸ್  ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಸದಸ್ಯರು ಗ್ರಾಮದ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿಲಎಂದರು. 
 
ಬಿಜೆಪಿಯ ಸಂಸದ ಕರಡಿ ಸಂಗಣ್ಣ ಹಾಗೂ ಮಾಜಿ ಸಂಸದ ಶಿವರಾಮಗೌಡ ಸೂಗೂರು ಅವರು  ಜನರ ಸಮಸ್ಯೆ ಕಡೆಗೆ ಗಮನ ಹರಿಸಿಲ್ಲ.  ಮಹಿಳೆಯರಿಗೆ ಶೌಚಾಲಯದ ವ್ಯವಸ್ಥೆ ಇಲ್ಲ, ಗ್ರಾಮದ ಶಾಲೆ, ಆಸ್ಪತ್ರೆ ಭಾಗ ಸೇರಿದಂತೆ ಎಲ್ಲೆಡೆ ತಿಪ್ಪೆಗುಂಡಿಗಳದೆ ಕಾರುಬಾರು,  ಸ್ವಚ್ಛತೆ ಎಂಬುದು ಇಲ್ಲಿ ಮರೀಚಿಕೆ ಎಂದು ಪಾರ್ವತಮ್ಮ ಪೂಜಾರ ತಿಳಿಸಿದರು.
-ಮೆಹಬೂಬಹುಸೇನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.