ADVERTISEMENT

‘ಹಂಚಿ ಉಂಡಾಗ ನೈಜ ಸುಖ’

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2017, 6:37 IST
Last Updated 4 ಸೆಪ್ಟೆಂಬರ್ 2017, 6:37 IST

ಮುನಿರಾಬಾದ್‌: ಮನುಷ್ಯ ತನ್ನ ಜೀವನ ಹೊರೆಯುವ ಜೊತೆಗೆ ಇನ್ನೊಬ್ಬರಿಗೆ ಹಂಚಿ ಉಂಡಾಗ ಸಿಗುವ ನೆಮ್ಮದಿಯೇ ನಿಜವಾದ ಸುಖ ಎಂದು ಗದಗ ಜಿಲ್ಲೆ ಬಳಗಾನೂರು ಮಠದ (ಚಿಕ್ಕೇನಕೊಪ್ಪ)ಶಿವಶಾಂತವೀರ ಶರಣರು ನುಡಿದರು.

ಸಮೀಪದ ಬೇವಿನಹಳ್ಳಿ ಗ್ರಾಮದಲ್ಲಿ ಬಸವನಗೌಡ ಪಾಟೀಲ್‌ರ ತೋಟದ ಮನೆಯಲ್ಲಿ ದಿ.ವೀರನಗೌಡರ ಸ್ಮರಣಾರ್ಥ ಈಚೆಗೆ ನಡೆದ ಅವರ 189ನೇ ಹಾಗೂ ಹೆಬ್ಬಾಳ ಮಠದ ನಾಗಭೂಷಣ ಶಿವಾಚಾರ್ಯರ 39ನೇ ನಾಣ್ಯ ತುಲಾಭಾರ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.

'ಜಗತ್ತನ್ನಾಳಿದ ಯಾವ ರಾಜನೂ ಸದ್ಯ ಬದುಕಿಲ್ಲ. ಶರೀರ ಇದ್ದಾಗ ಅದರ ಸದ್ಬಳಕೆ ಮಾಡಿಕೊಳ್ಳಬೇಕು. ಕೆಳಕ್ಕೆ ಬೀಳುವ ಅಥವಾ ಬಿದ್ದವನನ್ನು ಎತ್ತಿ ಹಿಡಿಯುವ, ಆಶ್ರಯ ನೀಡುವುದೇ ನಿಜವಾದ ಧರ್ಮ. ಕಾಯಕ ಮತ್ತು ದಾಸೋಹದಿಂದ ಪ್ರತಿಯೊಬ್ಬರ ಜೀವನ ಸಾರ್ಥಕವಾಗುತ್ತದೆ. ಮಕ್ಕಳಿಗೆ ಸಿನಿಮಾ, ಧಾರಾವಾಹಿಯ ಹಾಡುಗಳನ್ನು ಹೇಳಿಸುವ ಬದಲು ವಚನ, ಭಕ್ತಿ, ಭಾವಗೀತೆಗಳನ್ನು ಹಾಡಲು ಪ್ರೇರೇಪಿಸಿ' ಎಂದು ಕಿವಿಮಾತು ಹೇಳಿದರು.

ADVERTISEMENT

ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, 'ದಾನ ನೀಡುವ ಗುಣಉಳ್ಳವರಿಗೆ ಸಂಪತ್ತಿಗೆ ಬರವಿಲ್ಲ. ತಾನು ದುಡಿದುದರಲ್ಲಿ ಒಂದಂಶವನ್ನು ಸಮಾಜ ಸೇವೆಗೆ ಬಳಸುತ್ತಿರುವ ಬಸವನಗೌಡ ಪಾಟೀಲ್‌ ಅವರ ಕಾರ್ಯ ಇನ್ನೊಬ್ಬರಿಗೆ ಮಾದರಿ ಎಂದರು. ಇಬ್ಬರೂ ಸ್ವಾಮೀಜಿಗಳಿಗೆ ಪ್ರತ್ಯೇಕ ತುಲಾಭಾರ ನಡೆಯಿತು.

ಪ್ರಾಸ್ತಾವಿಕ ಮಾತನಾಡಿದ ಬಸವನಗೌಡ ಪಾಟೀಲ್‌, ತುಲಾಭಾರದ ಹಣ ಚಿಕ್ಕೇನಕೊಪ್ಪ ಶರಣರ ಹುಬ್ಬಳ್ಳಿಯ ನವನಗರದಲ್ಲಿನ ಅಂಧ, ಅನಾಥ ಆಶ್ರಮದಲ್ಲಿನ ಮಕ್ಕಳ ಕಲ್ಯಾಣ ಕಾರ್ಯಕ್ಕೆ ವಿನಿಯೋಗಿಸಲಾಗುತ್ತಿದೆ' ಎಂದರು.

ಪಂಡಿತ ಪುಟ್ಟರಾಜ ಕವಿ ಗವಾಯಿಗಳ 7ನೇ ಪುಣ್ಯಸ್ಮರಣೆ ಅಂಗವಾಗಿ ಗವಾಯಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಗವಿಸಿದ್ದೇಶ್ವರ ಸಂಗೀತ ಪಾಠಶಾಲೆಯ ವೀರೇಶ್‌ ಹಿಟ್ನಾಳ, ಶಕುಂತಲಾ ಭಾಗ್ಯನಗರ ಸಂಗಡಿಗರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಗಣ್ಯರಾದ ಅಮರೇ ಗೌಡಪಾಟೀಲ, ಗಿರೀಶ ಹಿರೇಮಠ, ಶಿವಲಿಂಗಯ್ಯ ಶಾಸ್ತ್ರಿ, ಬೆಳ್ಳೆಪ್ಪ ಆರ್‌.ಮಡ್ಡಿ, ಕಾಶಯ್ಯಸ್ವಾಮಿ, ಜೆ.ಬಿ.ಶರಣಪ್ಪ, ಉಧವ್‌ ಕುಲಕರ್ಣಿ, ಮೂರ್ತೆಪ್ಪ ಗಿಣಿಗೇರಿ, ಚಿದಾನಂದಗೌಡ, ಮಲ್ಲನ ಗೌಡ, ಚನ್ನಬಸಪ್ಪ, ಶೇಖಪ್ಪ, ಶರಣಪ್ಪ, ಸೋಮಲಿಂಗಪ್ಪ ಕಾಮನೂರು ಸುತ್ತಲಿನ ಗ್ರಾಮದ ಗಣ್ಯರು ಇದ್ದರು. ಶಿವಲಿಂಗಯ್ಯ ಶಾಸ್ತ್ರಿ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.