ADVERTISEMENT

ಹಂತಕರ ಪರ ಇರುವ ಪ್ರಧಾನಿ: ಸೂಳಿಬಾವಿ

ಗಾಂಧಿಯಿಂದ ಗೌರಿ ಹತ್ಯೆವರೆಗೆ ಪ್ರತಿಭಟನಾ ರ‍್ಯಾ್ಲಿಯಲ್ಲಿ ಆರೋಪ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2017, 9:43 IST
Last Updated 3 ಅಕ್ಟೋಬರ್ 2017, 9:43 IST

ಕೊಪ್ಪಳ: ವಿಚಾರವಾದಿಗಳ ಹತ್ಯೆ ಸಂಬಂಧಿಸಿದಂತೆ ಪ್ರಧಾನಿಯ ಮೌನ ಗಮನಿಸಿದರೆ ಅವರು ಹಂತಕರ ಪರವಾಗಿದ್ದಾರೆ ಎಂದೇ ಅರ್ಥೈಸಬೇಕಾಗಿದೆ ಎಂದು ಲಡಾಯಿ ಪ್ರಕಾಶನದ ಮುಖ್ಯಸ್ಥ ಬಸವರಾಜ ಸೂಳಿಬಾವಿ ಕಿಡಿಕಾರಿದರು.

ನಗರದಲ್ಲಿ ಸೋಮವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಹಮ್ಮಿಕೊಂಡ ಗಾಂಧಿಯಿಂದ ಗೌರಿಹತ್ಯೆವರೆಗೆ... ಪ್ರತಿಭಟನಾ ರ‍್ಯಾಲಿ ಬಳಿಕ ಹಮ್ಮಿಕೊಂಡ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

'ಹಂತಕರ ವಿರುದ್ಧ ಮಾತನಾಡಿದರೆ ಅವರನ್ನು ಪತ್ತೆಹಚ್ಚಿ ಶಿಕ್ಷೆಗೆ ಗುರಿಪಡಿಸಬೇಕಾಗುತ್ತದೆ. ಅಂಥವರೇ ಅವರನ್ನು ಪ್ರಧಾನಿಯ ಸ್ಥಾನದಲ್ಲಿ ಕೂರಿಸಿದ್ದಾರೆ. ಹಾಗಾಗಿ ಆ ಸಂದರ್ಭವನ್ನು ನಿವಾರಿಸುವ ಸಲುವಾಗಿ ಪ್ರಧಾನಿ ಮಾತನಾಡುತ್ತಿಲ್ಲ. ಇಲ್ಲವಾದರೆ ಸಣ್ಣಪುಟ್ಟ ವಿಷಯಗಳಿಗೂ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ಇಂಥ ಗಂಭೀರ ವಿಚಾರದಲ್ಲೇಕೆ ಮೌನವಾಗಿದ್ದಾರೆ' ಎಂದು ಪ್ರಶ್ನಿಸಿದರು.

ADVERTISEMENT

‘ಇಂಥ ಸಂದರ್ಭದಲ್ಲಿ ಜನಸಾಮಾನ್ಯರು ಮೌನವಾಗಿರ ಬಾರದು. ಸ್ವಾತಂತ್ರ್ಯಾನಂತರ 70 ವರ್ಷಗಳ ಕಾಲ ಆಡಳಿತ ನಡೆಸಿದ ವಿವಿಧ ಪಕ್ಷಗಳ ಸರ್ಕಾರಗಳು ಕೊಲ್ಲುವ ಮನಸ್ಸುಗಳನ್ನು ಹತ್ತಿಕ್ಕುವ ಪ್ರಯತ್ನ ಮಾಡಲಿಲ್ಲ. ಅಂಥ ಶಕ್ತಿಗಳನ್ನು ಬೇರು ಸಹಿತ ಕಿತ್ತೊಗೆಯುವ ಪ್ರಯತ್ನ ನಡೆದಿದ್ದರೆ ಎಂ.ಎಂ. ಕಲಬುರ್ಗಿ, ಗೋವಿಂದರಾವ್‌ ಪಾನ್ಸರೆ, ದಾಬೋಲ್ಕರ್‌, ಗೌರಿ ಲಂಕೇಶ್‌ ಹತ್ಯೆಗಳು ನಡೆಯುತ್ತಿರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಸಿಪಿಐ ಮುಖಂಡ ರುದ್ರೇಶ್‌ ಮಾತನಾಡಿ, 'ಜಗತ್ತಿನಲ್ಲಿ ಸತ್ಯ ಮಾತನಾಡಿದವರನ್ನೇ ಹತ್ಯೆ ಮಾಡಿದ ಉದಾಹರಣೆಗಳು ಇವೆ.  ಪ್ರತಿ ಹತ್ಯೆಯ ನಂತರ ಹೊಸ ಚಳವಳಿ ಹುಟ್ಟಿ ಗಟ್ಟಿಯಾಗಿದೆ. ರಾಜಕೀಯ ಪಕ್ಷಗಳು ಇಂಥ ಹತ್ಯೆಗಳನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುವ ಅಪಾಯವೂ ಇದೆ. ಇಂಥವರ ವಿರುದ್ಧ ಎಚ್ಚರ ದಿಂದಿರಬೇಕು' ಎಂದು ಹೇಳಿದರು.

ಹಿರಿಯ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರು, ಡಾ.ವಿ.ಬಿ.ರಡ್ಡೇರ, ಸಾವಿತ್ರಿ ಮುಜುಂದಾರ್‌, ಹೋರಾಟಗಾರ ಜೆ. ಭಾರಾದ್ವಾಜ್‌, ಡಿ.ಎಚ್‌.ಪೂಜಾರ್‌, ವಿಠ್ಠಪ್ಪ ಗೋರಂಟ್ಲಿ, ಸಿರಾಜ್‌ ಬಿಸರಳ್ಳಿ, ಪಂಪಾಪತಿ, ಪಿ.ಪೀರ್‌ಬಾಷಾ, ಆರತಿ ತಿಪ್ಪಣ್ಣ, ಸಿರಾಜ್‌ ಸಿದ್ದಾಪುರ, ವಿ.ಆಶಾ, ನಜೀರ್‌ಸಾಬ್‌ ಮೂಲಿಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.