ADVERTISEMENT

ಹುಲಗಿ ಪರಿಸರ ಸ್ವಚ್ಛತೆಗೆ ಸವಾಲು

ಪ್ರಸಿದ್ಧ ಧಾರ್ಮಿಕ ಕ್ಷೇತ್ರದಲ್ಲಿ ನೊಣ, ಸೊಳ್ಳೆಗಳ ಕಾಟ

ಡಾ.ಸಿದ್ದನಗೌಡ ಪಾಟೀಲ
Published 5 ಜೂನ್ 2018, 11:20 IST
Last Updated 5 ಜೂನ್ 2018, 11:20 IST
ಕೊಪ್ಪಳ ತಾಲ್ಲೂಕಿನ ಹುಲಿಗೆಮ್ಮ ದೇವಿ ದೇವಸ್ಥಾನದ ಆವರಣ
ಕೊಪ್ಪಳ ತಾಲ್ಲೂಕಿನ ಹುಲಿಗೆಮ್ಮ ದೇವಿ ದೇವಸ್ಥಾನದ ಆವರಣ   

ಕೊಪ್ಪಳ: ಪುರಾಣ ಪ್ರಸಿದ್ಧ, ಐತಿಹಾಸಿಕ ಶಕ್ತಿಪೀಠಗಳಲ್ಲಿ ಒಂದಾದ ತಾಲ್ಲೂಕಿನ ಮುನಿರಾಬಾದ್ ಸಮೀಪದ ಹುಲಗಿ ಕ್ಷೇತ್ರದ ಹುಲಿಗೆಮ್ಮದೇವಿ ರಾಜ್ಯವಲ್ಲದೆ, ನೆರೆಯ ರಾಜ್ಯಗಳಲ್ಲಿಯೂ ಲಕ್ಷಾಂತರ ಭಕ್ತರ ಕುಲದೈವವಾಗಿದ್ದಾಳೆ. ಆದರೆ, ಧಾರ್ಮಿಕ ಶ್ರದ್ಧೆ ಇದ್ದಷ್ಟೇ ಸ್ವಚ್ಛತೆಯ ಕಾಳಜಿ ಇಲ್ಲದಿರುವುದು ವಿಪರ್ಯಾಸ.

ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ದೇವಸ್ಥಾನಕ್ಕೆ ಅಗತ್ಯಕ್ಕೆ ತಕ್ಕಂತೆ ಆದಾಯವೂ ಇದೆ. ಆದರೆ, ಆಡಳಿತ ಮಂಡಳಿ ಕೂಡ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದ ಪರಿಣಾಮ ಕ್ಷೇತ್ರಕ್ಕೆ ಹೋದರೆ ಅಲ್ಲಿಯ ಮಾಲಿನ್ಯ, ಗಲೀಜು ವಾತಾವರಣ ದರ್ಶನಕ್ಕೆ ಬಂದವರ ಮುಖದಲ್ಲಿ ಜುಗುಪ್ಸೆ ಮೂಡಿಸುವುದು ಸುಳ್ಳಲ್ಲ.

ಗಂಗಾ ಸ್ನಾನ, ತುಂಗಾ ಪಾನ ಎಂಬುದು ವೇದಕಾಲದಿಂದಲೂ ಪ್ರಸಿದ್ಧ ಉಕ್ತಿ. ತುಂಗೆ ಇಲ್ಲಿ ಪಾನಕ್ಕಿಲ್ಲ. ತ್ಯಾಜ್ಯಗಳಿಂದ ತುಂಬಿ ನೊಣ, ಸೊಳ್ಳೆಗಳ ಆಗರವಾಗಿದೆ. ಸ್ಥಳೀಯ ಆಡಳಿತಕ್ಕೂ ಇದು ಸವಾಲಾಗಿ ಪರಿಣಮಿಸಿದ್ದು, ಬೆರಳಣಿಕೆಯ ಸಿಬ್ಬಂದಿಯಿಂದ ಸ್ವಚ್ಛ ಮಾಡಿಸುವದಂತೂ ಸಾಧ್ಯವಿಲ್ಲ. ತುಂಗಭದ್ರೆಗೆ ಮುನಿರಾಬಾದ ಸಮೀಪ ಕಟ್ಟಿರುವ ಡ್ಯಾಂನಿಂದ ದಾಖಲೆ ಪ್ರಮಾಣದ ನೀರನ್ನು ಹರಿಯಲು ಬಿಟ್ಟರೆ ಮಾತ್ರ ಪ್ರವಾಹದಿಂದ ಇಲ್ಲಿನ ಗಲೀಜು ತೊಳೆದುಕೊಂಡು ಹೋಗುವುದು ಮಾತ್ರ ಸಾಧ್ಯವಿದೆ ಎಂಬುವುದು ಸ್ಥಳೀಯರ ಅಭಿಪ್ರಾಯ.

ADVERTISEMENT

ಸಣ್ಣ ವ್ಯಾಪಾರಸ್ಥರಿಗೆ ನಿತ್ಯ ಕಿರುಕುಳ: ದೇವಸ್ಥಾನಕ್ಕೆ ಬರುವ ಭಕ್ತರು ಹರಕೆ ಹೊರುವುದರಿಂದ ಅವರ ಧಾರ್ಮಿಕ ಕ್ರಿಯೆಗಳು ಹಲವಾರು. ಚಿತ್ರ, ವಿಚಿತ್ರ ಕೂಡ, ತೊಟ್ಬ ಬಟ್ಟೆಯನ್ನು ನದಿಪಾತ್ರದಲ್ಲಿಯೇ ಕಳಚಿ ಸ್ನಾನ ಮಾಡಿದರೆ ಪೀಡೆ ಹೋಗುತ್ತದೆ ಎಂಬ ನಂಬಿಕೆ ಇದೆ. ಹೊಸ ಬಟ್ಟೆ ಧರಿಸಿ ದೇವರ ದರ್ಶನಕ್ಕೆ ತೆರಳುವ ಭಕ್ತರು, ಇಲ್ಲಿರುವ ಬಟ್ಟೆ ಕಸದ ರಾಶಿಯಾಗಿ ಮಾರ್ಪಟ್ಟು ಪೀಡೆಯಾಗಿ ಸುತ್ತಲಿನ ಪರಿಸರವನ್ನು ಸುತ್ತಿಕೊಳ್ಳುತ್ತಿರುವುದು ಕೂಡ ವಿಪರ್ಯಾಸ.

ನದಿಯ ಸ್ನಾನ ಘಟ್ಟಕ್ಕೆ ತೆರಳುವ ಎಡ, ಬಲ ಹಾದಿಯಲ್ಲಿ ಸಣ್ಣ-ಪುಟ್ಟ ವ್ಯಾಪಾರಸ್ಥರು, ಶಾಂಪೂ, ಸಾಬೂನು, ತೈಲ, ಮುಂತಾದ ಪೂಜಾ ಸಾಮಗ್ರಿಗಳನ್ನು ಮಾರುತ್ತಾರೆ. ಅವರಿಂದ ಕೊಂಡುಕೊಂಡ ವಸ್ತುಗಳನ್ನು ಅಲ್ಲಿಯೇ ಬಿಸಾಡುವುದರಿಂದ ಈ ಪರಿಸರ ಇಷ್ಟು ಗಲೀಜು ಆಗುತ್ತದೆ ಎಂಬುವುದು ದೇವಸ್ಥಾನ ಆಡಳಿತ ಮಂಡಳಿ ವಾದ, ಹೀಗಾಗಿ ಅವರನ್ನು ಒಕ್ಕಲೆಬ್ಬಿಸುವುದು, ಸ್ವಲ್ಪ ದಿನವಾದ ಮೇಲೆ ಮತ್ತೆ ಅಂಗಡಿಗಳು ಅದೇ ಜಾಗದಲ್ಲಿ ಪ್ರತ್ಯಕ್ಷವಾಗುವುದು ನಡದೇ ಇದೆ.

ಸ್ನಾನಕ್ಕೆ ಬರುವ ಭಕ್ತರ ಆಭರಣ ಕಳ್ಳತನ ಮಾಡುವವರು ಇಲ್ಲಿದ್ದಾರೆ. ಅನೇಕ ಅಕ್ರಮಗಳನ್ನು ನಡೆಸುವವರು ಇಲ್ಲಿದ್ದಾರೆ. ಗಲೀಜು ಮಾಡುವವರು ಸಾವಿರ ಸಂಖ್ಯೆಯಲ್ಲಿ ಇದ್ದಾರೆ. ಅದನ್ನೆಲ್ಲವನ್ನು ಕಂಡರೂ ಸಿಬ್ಬಂದಿ ನಮ್ಮನ್ನೇ ಗುರಿಯಾಗಿಸಿಕೊಂಡು ತುತ್ತು ಅನ್ನಕ್ಕೆ ಕಲ್ಲು ಹಾಕುತ್ತಾರೆ ಎಂದು ವ್ಯಾಪಾರಿ ಯಮನೂರಪ್ಪ ಅಸಮಾಧಾನ ವ್ಯಕ್ತಪಡಿಸುತ್ತಾರೆ.

'ಜನರು ಹೊಲಸು ಮಾಡುತ್ತಾರೆ, ಅವರಿಗೆ ತಿಳಿವಳಿಕೆ ಇಲ್ಲ. ಆದರೆ, ದೇವಿಯ ಹೆಸರಿನಲ್ಲಿ ಲಕ್ಷಾಂತರ ಆದಾಯ ಬರುತ್ತದೆ. ಆ ದುಡ್ಡಿನಿಂದಲಾದರೂ ನಿರಂತರ ಸ್ವಚ್ಛತೆಗೆ ನೌಕರರನ್ನು ಏಕೆ ನೇಮಿಸಬಾರದು' ಎಂದು ಕೇಳುತ್ತಾರೆ ಸ್ಥಳೀಯ ಯುವಕ ಹರೀಶ.

ದೇವಿಯ ಹೆಸರಿನಲ್ಲಿ ಕವಡೆ ಸರವನ್ನು ನದಿಗೆ ಎಸೆದು ಹೊಸದನ್ನು ಕೊಂಡುಕೊಳ್ಳುತ್ತಾರೆ. ಆದರೆ, ಕವಡೆ ಕಾಯಿಗಳು ನೀರಿನಲ್ಲಿ ಕೊಳೆಯುವುದಿಲ್ಲ. ತ್ಯಾಜ್ಯವಾಗಿ ನದಿಯ ಪರಿಸರವನ್ನು ಕಲ್ಮಶಗೊಳಿಸಿವೆ. ಬೇಡದ ದೇವರ ಚಿತ್ರಪಟಗಳನ್ನು ಎಸೆಯುವುದರಿಂದ ಗ್ಲಾಸ್, ಫ್ರೇಮು, ಮುಂತಾದವು ಹೇರಳವಾಗಿ ದೊರೆಯುತ್ತವೆ. ಶ್ರದ್ಧಾಕೇಂದ್ರಗಳನ್ನು, ಕುಡಿಯಲು ಬಳಸುವ ನದಿಯ ನೀರನ್ನು ಈ ರೀತಿ ಮಾಡಿದರೆ ಪರಿಸರ ಹೇಗೆ ಕಾಪಾಡಿದಂತೆ ಆಗುತ್ತದೆ ಎಂದು ಪ್ರಶ್ನಿಸುತ್ತಾರೆ ಬೆಂಗಳೂರಿನಿಂದ ಬಂದ ಭಕ್ತ ದಯಾನಂದ.

ಶೌಚಾಲಯ ಸಮಸ್ಯೆ: ಕ್ಷೇತ್ರದಲ್ಲಿ ಶೌಚಾಲಯದ ಸಮಸ್ಯೆ ವಿಪರೀತವಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಬರುವ ಭಕ್ತರಿಗೆ ಉತ್ತಮ ಶೌಚಾಲಯಗಳು ಇಲ್ಲ. ಇದ್ದರೂ ನೀರು, ಸ್ವಚ್ಛತೆಯ ಕೊರತೆ ಇದೆ. ಇದರಿಂದ ಬಯಲನ್ನೇ ಆಶ್ರಯಿಸುತ್ತಾರೆ. ಅಲ್ಲದೆ ಸ್ನಾನಕ್ಕೆ ಬರುವ ಮಹಿಳೆಯರು ವಸ್ತ್ರಗಳನ್ನು ಬದಲಾಯಿಸಲು ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿದ್ದಾರೆ. ಅವುಗಳಿಗೆ ಬಾಗಿಲುಗಳಿಲ್ಲ. ಹೋಗಲು ದಾರಿಯೂ ಇಲ್ಲ.

ಪರಿಸರದಿನದಂದು ವಿವಿಧ ಸಂಘಟನೆಗಳು ಮತ್ತು ಸರ್ಕಾರಿ ಇಲಾಖೆಗಳು ಇಲ್ಲಿ ಸಂಪ್ರದಾಯದಂತೆ ಸ್ವಚ್ಛತಾ ಆಂದೋಲನವನ್ನು ನಡೆಸುತ್ತವೆ. ಮತ್ತೆ ಇತ್ತ ಕಡೆ ಸುಳಿಯುವುದು ಕಡಿಮೆ. ನದಿ, ಗುಡ್ಡ, ದೇಗುಲ ಎಲ್ಲ ಪ್ರೇಕ್ಷಣೀಯ ದೃಶ್ಯ ಸುತ್ತಲಿದ್ದರೂ ಅವುಗಳನ್ನು ಮಾಲಿನ್ಯ ರಹಿತವಾಗಿ ಇಡಬೇಕಾದ ಇಚ್ಛಾಶಕ್ತಿಯ ಕೊರತೆ ಇದೆ. ಸ್ವಚ್ಛತೆಯೇ ದೇವರು ಎಂಬ ಪರಿಕಲ್ಪನೆ ಬಂದರೆ ಸ್ಥಳದ ಮಹಿಮೆ ಇನ್ನೂ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ.

ಕ್ರಿಮಿನಾಶಕಕ್ಕೂ ಸಾಯದ ನೊಣಗಳು

ಕ್ಷೇತ್ರದಲ್ಲಿ ಎಲ್ಲಿ ಕುಳಿತರೂ ನೊಣಗಳ ಕಾಟ ತಪ್ಪಿದ್ದಲ್ಲ. ಕ್ರಿಮಿನಾಶಕಗಳನ್ನು ಮೇಲಿಂದ ಮೇಲೆ ಸಿಂಪಡಿಸಿದರೂ ನೊಣಗಳು ಅದನ್ನೇ ತಿಂದು, ಜೀರ್ಣಿಸಿಕೊಂಡು ಮತ್ತೆ ಹೆಚ್ಚಿನ ಸಂಖ್ಯೆಯಲ್ಲಿ ದಾಂಗುಡಿಯಿಡುತ್ತಿರುವುದು ತಲೆ ನೋವಾಗಿ ಪರಿಣಿಮಿಸಿದೆ.

ಪರ ಊರಿನಿಂದ ಬರುವ ಭಕ್ತರು ಊಟಕ್ಕೆ ತರುವ ಬುತ್ತಿಯನ್ನು ಬಿಚ್ಚಿದರೆ ಸಾಕು, ಅಸಂಖ್ಯ ನೊಣಗಳು ದಾಳಿ ಮಾಡುತ್ತವೆ. ಕೈಯಲ್ಲಿ ಬೀಸಣಿಕೆ ತರ ಬಟ್ಟೆಗಳನ್ನು ಬೀಸಿಕೊಂಡು ಊಟ ಮಾಡಬೇಕಾದ ಪರಿಸ್ಥಿತಿ ಇಲ್ಲಿದೆ.

ಇನ್ನೂ ಕೆಲವು ಭಕ್ತರು ದೇವಿಗೆ ಬೇಟೆಯ ಹೆಸರಿನಲ್ಲಿ ಮಾಂಸದ ನೈವೇದ್ಯ ಮಾಡುತ್ತಾರೆ. ಎಲೆಯಲ್ಲಿ ಮಡಿಯ ಮಾಂಸದೂಟವನ್ನು ಇಟ್ಟು ನದಿಗೆ ಬಿಡುವುದು ಇದೆ. ಅದಕ್ಕಾಗಿ ಹಂದಿ, ನಾಯಿಗಳು ಬೆನ್ನು ಹತ್ತುತ್ತವೆ. ಅಲ್ಲದೆ ಅವುಗಳ ಮೇಲೆ ಹದ್ದು, ಇನ್ನಿತರ ಪಕ್ಷಿಗಳು ಹಾರಾಡುತ್ತವೆ. ನಂತರ ಪ್ರಸಾದ ರೂಪದಲ್ಲಿ ಬೇಟೆಯನ್ನು ಸೇವಿಸುವ ಭಕ್ತರು, ಪ್ಲಾಸ್ಟಿಕ್, ತಟ್ಟೆ, ಲೋಟವನ್ನು ಇದ್ದ ಸ್ಥಳದಲ್ಲಿಯೇ ಬಿಸಾಡಿ ಹೋಗುವುದುಂಟು. ಇದರಿಂದ ಇಲ್ಲಿ ಅಧ್ವಾನ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

**
ಅಗಸ ನೀರೊಳಗಿದ್ದೂ ಬಾಯಾರಿ ಸತ್ತ... ಎಂಬಂತೆ ಪಕ್ಕದಲ್ಲಿ ನದಿಯಿದ್ದರೂ ಕುಡಿಯುವ ನೀರಿಗೆ ಪರದಾಡಬೇಕಾಗಿದೆ. ಬಾಟಲಿ ನೀರಿಗೆ ಮೊರೆ ಹೋಗಬೇಕಾಗಿದೆ
ಪ್ರದೀಪ, ಪ್ರವಾಸಿ 
**

ಜೂನ್ 7ರಂದು ನದಿ ಹಾಗೂ ದೇವಸ್ಥಾನದ ಪರಿಸರ ಸ್ವಚ್ಛಗೊಳಿಸಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ನಿರಂತರ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು
ಸಿ.ಎಸ್.ಚಂದ್ರಮೌಳಿ, ‌ಸಿಇಒ, ಹುಲಿಗಿ ದೇವಸ್ಥಾನ ಮಂಡಳಿ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.