ADVERTISEMENT

ಹೊನಗಡ್ಡಿ ಗ್ರಾಮದಲ್ಲಿ ಅಭಿವೃದ್ಧಿ ಮರೀಚಿಕೆ

ಸಿ.ಸಿ ರಸ್ತೆ ಶುದ್ಧ ನೀರಿನ ಕೊರತೆ: ಉದ್ಯೋಗ ಖಾತ್ರಿ ಕೆಲಸವೂ ಸಿಗುತ್ತಿಲ್ಲ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2018, 10:02 IST
Last Updated 10 ಏಪ್ರಿಲ್ 2018, 10:02 IST

ತಾವರಗೇರಾ: ಸಮೀಪದ ಲಿಂಗದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನಗಡ್ಡಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿಲ್ಲ. ಕೂಲಿ ಕೆಲಸ ಸಿಗದೆ ಜನ ಗುಳೆ ಹೋಗುವುದು ಅನಿವಾರ್ಯವಾಗಿದೆ.

ಚರಂಡಿ ಇಲ್ಲದೆ ನೀರು ರಸ್ತೆಯಲ್ಲಿ ನಿಂತು ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಬಡ ಕುಟುಂಬಗಳಿಗೆ ವಸತಿ ಯೋಜನೆ ಸೌಲಭ್ಯ ಸಿಕ್ಕಿಲ್ಲ. ವೃದ್ಧರಿಗೆ, ವಿಧವೆಯರಿಗೆ ಮಾಶಾಸನ ಸಿಗುತ್ತಿಲ್ಲ. ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಸರ್ಕಾರದ ವಿವಿಧ ಯೋಜನೆಗಳು ಸಾರ್ವಜನಿಕರಿಗೆ ಮರೀಚಿಕೆಯಾಗಿವೆ.

ಗ್ರಾಮದಲ್ಲಿ ಕೂಲಿಮಾಡಿ ಜೀವನ ನಡೆಸುವ ಕುಟುಂಬಗಳೇ ಹೆಚ್ಚು. ಸರ್ಕಾರ ಗುಳೆ ತಪ್ಪಿಸಲು ಖಾತ್ರಿ ಯೋಜನೆ ಜಾರಿಗೆ ತಂದಿದೆ. ಆದರೆ, ಗ್ರಾಮದಲ್ಲಿ ಒಂದು ವರ್ಷದಲ್ಲಿ ಯೋಜನೆ ಅನುಷ್ಠಾನ ಅಷ್ಟಕಷ್ಟೆ. ಕೆಲವು ಕೂಲಿಕಾರರಿಗೆ ಇನ್ನೂ ಹಣ ಪಾವತಿಯಾಗಿಲ್ಲ. ಬಡ ಕುಟುಂಬಗಳು ಪಟ್ಟಣಗಳಿಗೆ ಗುಳೆ ಹೋಗಿವೆ.

ADVERTISEMENT

’ವಿಧವಾ, ವೃದ್ಧಾಪ್ಯ ವೇತನ ವಂಚಿತರ ಬಗ್ಗೆ ಅಧಿಕಾರಿಗಳು ಕಾಳಜಿ ವಹಿಸುತ್ತಿಲ್ಲ. ಗ್ರಾಮದಿಂದ ಲಾಯದುಣಸಿ ಗ್ರಾಮಕ್ಕೆ ಹೋಗುವ ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಕಾಮಗಾರಿ ಪೂರ್ಣಗೊಳಿಸಲು ಜನಪ್ರ ತಿನಿಧಿಗಳು ಸ್ಪಂದಿಸುತ್ತಿಲ್ಲ’ ಎನ್ನುತ್ತಾರೆ ಗ್ರಾಮದ ರೈತ ರುದ್ರಗೌಡ ಗೌಡ್ರ

ಕುಡಿವ ನೀರಿನ ಟ್ಯಾಂಕ್ ಸುತ್ತ ಸ್ವಚ್ಛತೆ ಇಲ್ಲ. ಮಹಿಳೆಯರು ರಸ್ತೆಯಲ್ಲಿಯೇ ಬಟ್ಟೆ ತೊಳೆಯುತ್ತಾರೆ. ರಸ್ತೆ ಪಕ್ಕದಲ್ಲಿ ನೀರು ನಿಂತು ಸೊಳ್ಳೆಗಳ ಸಂತತಿ ಹೆಚ್ಚಾಗಿದೆ. ಗ್ರಾಮ ಪಂಚಾಯಿತಿ ಚರಂಡಿ ನಿರ್ಮಿಸಿದರೆ ನೀರು ಹರಿಯಲಿದೆ.

‘ಜನ ಪ್ರತಿದಿನ ಕಲುಷಿತ ನೀರು ಸೇವನೆ ಮಾಡುವಂತಾಗಿದೆ. ಶುದ್ಧ ಕುಡಿವ ನೀರು ಪೂರೈಕೆ ಮಾಡುತ್ತಿಲ್ಲ. ನೀರಿನಲ್ಲಿ ಪ್ಲೋರೈಡ್ ಅಂಶ ಇರುವುದರಿಂದ ಸ್ಥಳೀಯರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ’ ಎನ್ನುತ್ತಾರೆ ಬಸವರಾಜ ಕಕ್ಕರ.

ಗ್ರಾಮದ ಕೆಲವು ಕುಟುಂಬಗಳು ವಸತಿ ಸೌಲಭ್ಯದಿಂದ ವಂಚಿತವಾಗಿವೆ. 5 ವರ್ಷದಿಂದ ಬಾಡಿಗೆ ಮನೆ ಮತ್ತು ಗುಡಿಸಲಲ್ಲಿ ವಾಸವಾಗಿವೆ. ಸರ್ಕಾರ ವಸತಿ ಯೋಜನೆಯಲ್ಲಿ ಮನೆ ಮಂಜೂರು ಮಾಡಿದರೆ ಬಡವರಿಗೆ ಅನುಕೂಲ. ಜನಪ್ರತಿನಿಧಿಗಳ ಕೈವಾಡ ಹಾಗೂ ಅಧಿಕಾರಿಗಳ ನಿಲಕ್ಷ್ಯದಿಂದ ಕುಟುಂಬಗಳಿಗೆ ಸೂರು ದೊರಕಿಲ್ಲ.

**

ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿಲ್ಲ. ಲಾಯದುಣಸಿ ರಸ್ತೆ ನಿರ್ಮಾಣ ಕಾಮಗಾರಿ ಮಂದಗತಿಯಲ್ಲಿ ಸಾಗಿದೆ. ಕೂಲಿಕಾರರಿಗೆ ಉದ್ಯೋಗ ಖಾತ್ರಿ ಕೆಲಸ ಸಿಗುತ್ತಿಲ್ಲ – ರಮೇಶ ಮ್ಯಾದ್ನೇರಿ,  ಹೊನಗಡ್ಡಿ ನಿವಾಸಿ.

**

–ಕೆ.ಶರಣಬಸವ ನವಲಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.