ADVERTISEMENT

ಹೋರಾಡಿದವರೇ ತಡೆಯಾದರು!

ಭಾಗ್ಯನಗರ – ಕೊಪ್ಪಳ ರೈಲ್ವೆ ಮೇಲು ಸೇತುವೆ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2017, 6:03 IST
Last Updated 20 ಫೆಬ್ರುವರಿ 2017, 6:03 IST
ಹೋರಾಡಿದವರೇ ತಡೆಯಾದರು!
ಹೋರಾಡಿದವರೇ ತಡೆಯಾದರು!   

ಕೊಪ್ಪಳ: ಭಾಗ್ಯನಗರ ರೈಲ್ವೆ ಗೇಟ್‌ ಸಂಖ್ಯೆ–62ರ ಮೇಲು ಸೇತುವೆ ಕಾಮಗಾರಿ ಅರ್ಧ ಮುಗಿಯುತ್ತಿರುವಾಗ ಅದಕ್ಕಾಗಿ ಹೋರಾಡಿದವರು ಎಂದು ಹೇಳಿಕೊಂಡವರೇ ಸೇತುವೆ ರೂಪುರೇಷೆ ಬದಲಾವಣೆಗೆ ಒತ್ತಡ ಹೇರಿದ್ದಾರೆ. ಇದರಿಂದಾಗಿ ಕೇವಲ 15 ತಿಂಗಳೊಳಗೆ ಮುಗಿಯುವ ಗಡುವು ಹೊಂದಿದ್ದ ಕಾಮಗಾರಿ ನನೆಗುದಿಗೆ ಬೀಳುವ ಸಾಧ್ಯತೆ ಇದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಶೇ 50:50ರ ಅನುದಾನದಲ್ಲಿ ನಿರ್ಮಾಣಗೊಳ್ಳುವ ಈ ಸೇತುವೆ ಭಾಗ್ಯನಗರ – ಕೊಪ್ಪಳ ಮುಖ್ಯರಸ್ತೆ ರಾಷ್ಟ್ರೀಯ ಹೆದ್ದಾರಿ –63ನ್ನು ಸಂಪರ್ಕಿಸುತ್ತದೆ. ಈ ಸೇತುವೆ ನಿರ್ಮಿಸಬೇಕು ಎಂದು ಭಾಗ್ಯನಗರದ ನಿವಾಸಿಗಳು ಪಕ್ಷಬೇಧ ಮರೆತು ಹಲವಾರು ವರ್ಷ ಹೋರಾಡಿದ್ದರು. ಕೊನೆಗೂ ಸೇತುವೆ ಮಂಜೂರಾಯಿತು. 

ಸಂಸದ, ಶಾಸಕರಿಗೆ ಕಾಮಗಾರಿಯ ಸಂಪೂರ್ಣ ಮಾಹಿತಿ ನೀಡಿ ಕಾಮಗಾರಿಗೆ ಅವರಿಂದಲೆ ಚಾಲನೆ ಕೊಡಿಸಲಾಯಿತು. ಈಗ ಸೇತುವೆಯ 5 ಬೃಹತ್‌ ಆಧಾರ ಸ್ತಂಭಗಳು ನಿರ್ಮಾಣವಾಗಿವೆ. ಈ ಭಾಗದಲ್ಲಿ ದ್ವಿಮುಖ ರಸ್ತೆ ನಿರ್ಮಾಣಕ್ಕೆ ಸ್ಲ್ಯಾಬ್‌ ಅಳವಡಿಕೆ ಮಾತ್ರ ಬಾಕಿ ಉಳಿದಿದೆ. ಕೊಪ್ಪಳ ಭಾಗದಲ್ಲಿ ಪಿಲ್ಲರ್‌ ಅಳವಡಿಕೆಗೆ ಅಂದಿನ ‘ಹೋರಾಟಗಾರರೇ’ ತಮ್ಮ ಆಸ್ತಿ ಉಳಿಸುವ ಸಲುವಾಗಿ ಅಡ್ಡಿಯಾಗಿದ್ದಾರೆ ಎಂಬ ಆರೋಪ ಬಲವಾಗಿ ಕೇಳಿಬಂದಿದೆ.

ಅಪಘಾತದ ನೆಪ: ಈ ಸೇತುವೆ ಕೊಪ್ಪಳದ ಮುಖ್ಯರಸ್ತೆ ಸೇರುವುದರಿಂದ ಈ ವೃತ್ತದಲ್ಲಿ ಅಪಘಾತಗಳು ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ಈ ಸೇತುವೆಯ ಪಂಕ್ತಿ ಜೋಡಣೆ (ಅಲೈನ್‌ಮೆಂಟ್‌) ಪುನರ್‌ಪರಿಶೀಲಿಸಬೇಕು ಎಂದು ನಗರಸಭೆ ಅಧ್ಯಕ್ಷ ಮಹೇಂದ್ರ ಛೋಪ್ರಾ, ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಮೂಲಸೌಲಭ್ಯ ಅಭಿವೃದ್ಧಿ ಇಲಾಖೆ ಸಚಿವ ಆರ್‌.ವಿ. ದೇಶಪಾಂಡೆ ಅವರಿಗೆ ಪತ್ರ ಬರೆದರು.

ದೇಶಪಾಂಡೆ ಅವರು ಇಲಾಖೆಯ ಅಧೀನ ಕಾರ್ಯದರ್ಶಿ ರಾಬಿನ್‌ ವನರಾಜ್‌ ಮೂಲಕ ಕೊಪ್ಪಳ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರಿಗೆ ಇದೇ ಬದಲಾವಣೆ ಕುರಿತು ಪತ್ರ ಬರೆದರು. ಸಂಸದ ಸಂಗಣ್ಣ ಕರಡಿ ಅವರು ಈ ಹಂತದಲ್ಲಿ ಅಲೈನ್‌ಮೆಂಟ್‌ ಬದಲಾವಣೆ ಅಸಾಧ್ಯ. ಅದು ರೈಲ್ವೆ ಎಂಜಿನಿಯರ್‌ಗಳ ಪರಿಶೀಲನೆ ಮತ್ತು ವೈಜ್ಞಾನಿಕ ಯೋಜನೆಯಂತೆಯೇ ರೂಪಿತವಾಗಿದೆ. ಹಾಗಾಗಿ ಬದಲಾವಣೆ ಮಾಡಬಾರದು ಎಂದು ಮೂಲಸೌಲಭ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದರು. 

‘ಸೇತುವೆ ಕಾಮಗಾರಿಗೆ ವಾಣಿಜ್ಯ ಸಂಕೀರ್ಣ ತೆರವು  ಅನಿವಾರ್ಯ’
ಸೇತುವೆ ಅಂತ್ಯಗೊಳ್ಳುವ ರಾಷ್ಟ್ರೀಯ ಹೆದ್ದಾರಿ ಸಮೀಪ 6 ಮೀಟರ್‌ ಆಸುಪಾಸಿನಲ್ಲಿ ಉದ್ಯಮಿಯೊಬ್ಬರ ಆಸ್ತಿ ಇದೆ. ಸೇತುವೆ ಕಾಮಗಾರಿ ಸಂದರ್ಭ  ವಾಣಿಜ್ಯ ಸಂಕೀರ್ಣ ತೆರವು ಮಾಡಬೇಕು ಎಂದು ಪರಿಶೀಲನೆ ನಡೆಸಿದ ನೈಋತ್ಯ ರೈಲ್ವೆಯ ಕಾಮಗಾರಿ ವಿಭಾಗದ ಮುಖ್ಯ ಎಂಜಿನಿಯರ್‌ ವರದಿ ನೀಡಿದ್ದಾರೆ.

ಶಾಸಕರು ಹೇಳಿದಂತೆ ಈ ಹಂತದಲ್ಲಿ ಸೇತುವೆ ಅಲೈನ್‌ಮೆಂಟ್‌ನಲ್ಲಿ ಯಾವುದೇ ಬದಲಾವಣೆ ಅಸಾಧ್ಯ ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನು ಈ ಉದ್ಯಮಿಯ ಆಸ್ತಿಯ ಭೂಸ್ವಾಧೀನ ಆಗಬೇಕಾಗಿದೆ. ಒಂದು ವೇಳೆ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದರೆ ಭಾಗ್ಯನಗರಕ್ಕೆ ಮೇಲು ಸೇತುವೆ ಭಾಗ್ಯ ಕಾಣಲು ಅದೆಷ್ಟು ವರ್ಷಗಳು ಬೇಕಾಗುವುದೋ ಎಂಬುದು ಉಭಯ ಪಟ್ಟಣಗಳ ಮಧ್ಯೆ ಸಂಚರಿಸುವವರ ಆತಂಕ.

- ಅನಿಲ್‌ ಬಾಚನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT