ADVERTISEMENT

ಹೋಳಿ: ಲಂಬಾಣಿಗರ ನೃತ್ಯ ಸಂಭ್ರಮ

ಶರತ್‌ ಹೆಗ್ಡೆ
Published 5 ಮಾರ್ಚ್ 2015, 8:16 IST
Last Updated 5 ಮಾರ್ಚ್ 2015, 8:16 IST

ಕೊಪ್ಪಳ: ಮಾರಿ ಸಗಾ ಸೇಲಿ
ಚುಲೇ ಪಾಚಾ ಡಾಗಳು
ಗಾಲ ಮೇಲ್ಗಿ ಟಾಳಟಾಲ
ಗೇರಿಯಾ ಬಲ್ಗಾ ಮೇಲ್ಗಿ...

ಹೀಗೆ ಸಾಲು ಸಾಲು ಹಾಡುಗಳು. ರಸಿಕತೆ, ಶೃಂಗಾರ, ತುಂಟತನದ ಅರ್ಥ, ಭಾವ ಹೊಂದಿರುವ ಸಾಹಿತ್ಯ. ತಮ್ಮದೇ ಶೈಲಿಯಲ್ಲಿ ಹಾಡುತ್ತಾ ಹೆಜ್ಜೆಹಾಕುವ ಹೆಣ್ಣುಮಕ್ಕಳು. ಕೆಂಪು, ನೀಲಿ ಉಡುಗೆ ಕಸೂತಿ ಮಧ್ಯೆ ಫಳಫಳನೆ ಹೊಳೆಯುವ ಕನ್ನಡಿಯ ತುಣುಕುಗಳು. ಝಲ್ಗುಟ್ಟುವ ಗೆಜ್ಜೆ, ಘಲ್ಲೆನ್ನುವ ಬಳೆ, ಲಯಬದ್ದವಾದ ಹಲಗೆ ಬಡಿತದ ನಾದ...

ಇದು ತಾಲ್ಲೂಕಿನ ಬಹದ್ದೂರ್‌ ಬಂಡಿ ಗ್ರಾಮದಲ್ಲಿ ಕೋಟೆ ಕೆಳಗೆ ಕೂಪ­ಳ್‌­ಗಡ್‌ ಬಾದ್ದರ ಬಂಡಾ ಸೇವಾ ಟ್ರಸ್ಟ್‌, ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ ಆಶ್ರಯದಲ್ಲಿ ಬುಧವಾರ ರಾತ್ರಿ ನಡೆದ ರಾಷ್ಟ್ರೀಯ ಹೋಳಿ ಉತ್ಸವದ ಚಿತ್ರಣ.

ಲಂಬಾಣಿ ಸಮಾಜದ ಸಚಿವ ಪಿ.ಟಿ.­ಪರಮೇಶ್ವರ ನಾಯ್ಕ, ಶಾಸಕ ಶಿವ­ಮೂರ್ತಿ ನಾಯ್ಕ ಸೇರಿದಂತೆ ರಾಜ್ಯದ ಮೂಲೆ ಮೂಲೆಯಿಂದಲೂ ಕಲಾ ತಂಡ­ದವರು ಬಂದಿದ್ದರು. ಪ್ರತಿ ವರ್ಷ ಇಲ್ಲಿ ಹೋಳಿ ಉತ್ಸವ ನಡೆಯುತ್ತದೆ. ಒಂದೆಡೆ ವೇದಿಕೆಯಲ್ಲಿ ಕಲಾ ತಂಡಗಳ ಪ್ರದರ್ಶನ ನಡೆದರೆ ಅದೇ ವೇಳೆ ಮೈದಾನದಲ್ಲಿಯೂ ಲಂಬಾಣಿಗರು ಗುಂಪು ಗುಂಪಾಗಿ ಸೇರಿಕೊಂಡು ನೃತ್ಯ ಮಾಡು­ತ್ತಾರೆ. ಇಲ್ಲಿ ಹಾತಿರಾಮ್‌ ಬಾವಾಜಿ ಕಟ್ಟೆಯಿದೆ.

ಇಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆದ ಬಳಿಕ ಸಾಂಸ್ಕೃತಿಕ ಲೋಕ ಅನಾವರಣ­ಗೊಳ್ಳು­ತ್ತದೆ. ಅತ್ಯುತ್ತಮ ಪ್ರದರ್ಶನ ನೀಡಿದ ತಂಡಗಳಿಗೆ ಬಹುಮಾನವೂ ಇದೆ.ಹಬ್ಬದಲ್ಲಿ ಲೆಂಗಿ, ನಂಗಾರಾ, ಸಗಾಯಿ, ವಳಂಗ್‌ ಹೆಸರಿನ ಮೌಖಿಕ ಸಾಹಿತ್ಯ ಗಾಯನ ನಡೆಯಿತು. ತಡರಾತ್ರಿ ಕಾಮದಹನ ಮಾಡಲಾಗು­ತ್ತದೆ.

ಬಹದ್ದೂರ್‌ ಬಂಡಿ ಕೋಟೆ: ಬೆಳಗಾವಿಯ ಸುಬೇದಾರ ಬಾಜಿರಾಯ ಕೊಪ್ಪಳ ಸಮೀಪದ ಗುಂಟಾಪುರ (ಬಹದ್ದೂರ್‌ ಬಂಡಿಯ ಮೊದಲ ಹೆಸರು)ಕ್ಕೆ ಬಂದು ಹಿಜರಿ ಶಕೆ 1076 ರಲ್ಲಿ ಕೋಟೆ ಕಟ್ಟಿಸಿದರು.ಕೋಟೆ­ಯೊಳಗೆ ಮಹಾದೇವರ ಗುಡಿಯಿದೆ. ತಂಡದ ನಾಯಕರಾದ ರಾಜೂಜಿ ನಾಯ್ಕ, ಲಷ್ಕರಿ ನಾಯ್ಕ ಅವರು ಗೊಸಾಯಿ ಬಾವ ಇವರನ್ನು ಕೋಟೆ ಕಾವಲಿಗೆ ನೇಮಕ ಮಾಡಿದರು. ಬಳಿಕ ಟಿಪ್ಪು ಸುಲ್ತಾನ್‌ ಈ ಕೋಟೆ ವಶಪಡಿಸಿ­ಕೊಂಡು ಹೆಸರು ಬದಲಾಯಿಸಿದ. ನಂತರ ಬ್ರಿಟಿಷರ ವಶಕ್ಕೂ ಹೋಯಿತು.

ರಾಜೂಜಿ ಹಾಗೂ ಲಷ್ಕರಿ ನಾಯ್ಕ ಅವರಿಗೆ ಬಾಜೀರಾಯರು ಇಲ್ಲಿನ 400 ಎಕರೆ ಜಮೀನನ್ನು ಬಹುಮಾನವಾಗಿ ಕೊಟ್ಟಿದ್ದರು. ಪ್ರತಿ ವರ್ಷ ಇಲ್ಲಿ ಲಂಬಾಣಿ ಜನರು ಹೋಳಿ ಆಚರಿಸು­ತ್ತಾರೆ. ಈ ಬಾವಾಜಿ ಗುರುವಿನ ಕಟ್ಟಿ­ಯಲ್ಲಿ ಗುರು ಹಾತಿರಾಮ ಬಾವಜಿಯ­ವರು 41 ದಿನ ಉಪವಾಸ ಮಾಡಿದ್ದರು. ಬಳಿಕ ತಿರುಪತಿಯಲ್ಲಿ  ನೆಲೆಸಿದರು ಎಂದು ಇತಿಹಾಸಕಾರರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.