ADVERTISEMENT

‘ಸಂಪೂರ್ಣ ಸಾಕ್ಷರತೆ ರೂಪಿಸುವ ಗುರಿ’

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2015, 7:45 IST
Last Updated 5 ಮಾರ್ಚ್ 2015, 7:45 IST

ಕನಕಗಿರಿ: 2017ರ ಒಳಗೆ ಸಂಪೂರ್ಣ ಸಾಕ್ಷರತೆ ಹೊಂದಿದ ರಾಜ್ಯವನ್ನಾಗಿ ರೂಪಿ­ಸುವ ಗುರಿ ಹೊಂದಲಾಗಿದೆ ಎಂದು ಲೋಕ ಶಿಕ್ಷಣ ನಿರ್ದೇಶನಾಲಯ ಸಹಾಯಕ ನಿರ್ದೇಶಕಿ ವಿಜಯಮ್ಮ  ತಿಳಿಸಿದರು.

ಇಲ್ಲಿನ ಚಿದಾನಂದ ಮಠದಲ್ಲಿರುವ ಗ್ರಾಮ ಪಂಚಾಯಿತಿ ಮಾದರಿ ಲೋಕ ಶಿಕ್ಷಣ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿ ಮಾತನಾಡಿದ ಅವರು, ಅನಕ್ಷರತೆ ಹೋಗಲಾಡಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೋಟಿಗಟ್ಟಲೆ ಹಣ ವೆಚ್ಚ ಮಾಡುತ್ತಿದ್ದರೂ, ನಿರೀಕ್ಷಿತ ಪ್ರಮಾಣ­ದಲ್ಲಿ ಸಾಕ್ಷರತೆ ಸಾಧ್ಯವಾಗಿಲ್ಲ ಎಂದು ವಿಷಾದಿಸಿದರು.

ಪ್ರಸಕ್ತ ಸಾಲಿನಲ್ಲಿ ಕೊಪ್ಪಳ ಜಿಲ್ಲೆಯ 43 ಸಾವಿರ ಮಂದಿ ಸೇರಿದಂತೆ ರಾಜ್ಯದ 8 ಲಕ್ಷ ಜನರನ್ನು ನವ ಸಾಕ್ಷರರಾಗಿಸುವ ಗುರಿ ಇದೆ ಎಂದು ಹೇಳಿದರು.

ಲೋಕ ಶಿಕ್ಷಣ ಕೇಂದ್ರದಲ್ಲಿ ತರಬೇತಿ ಪಡೆದು ಮೂಲ ಸಾಕ್ಷರತೆ ಪರೀಕ್ಷೆ ಬರೆಯುವರಿಗೆ ಪ್ರಮಾಣ ಪತ್ರ ನೀಡಲಾಗಿದ್ದು, ಎಸ್ಸೆಸ್ಸೆಲ್ಸಿ ಒಳಗೊಂಡತೆ ಇತರೆ ಪರೀಕ್ಷೆಗಳನ್ನು ನೇರವಾಗಿ ಬರೆಯಲು ಅವಕಾಶ ನೀಡಲಾಗಿದೆ.  ಪರೀಕ್ಷೆಗಳನ್ನು ಮಾ. 15ರಂದು ನಿಗದಿ ಪಡಿಸಿಸಲಾಗಿದೆ ಎಂದು ಅವರು ತಿಳಿಸಿದರು.

ಲೋಕ ಶಿಕ್ಷಣ ನಿರ್ದೇಶನಾಲಯ­ದಲ್ಲಿ ಕೆಲಸ ಮಾಡುತ್ತಿರುವ ಪ್ರೇರಕರಿಗೆ ಕನಿಷ್ಠ ಮಾಸಿಕ ವೇತನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಕೇಂದ್ರ ಸರ್ಕಾರ ಹಂತ ಹಂತವಾಗಿ ಅನುದಾನ ಬಿಡುಗಡೆ ಮಾಡುತ್ತಿರುವುದ­ರಿಂದ ಪ್ರೇರಕರಿಗೆ ಆಯಾ ತಿಂಗಳ ವೇತನ ನೀಡಲು ಸಾಧ್ಯವಾಗಿಲ್ಲ ಎಂದರು.

ಪ್ರತಿಯೊಬ್ಬರು ಸ್ವಾವಲಂಬಿಯಾಗಿ ಜೀವನ ಸಾಗಿಸಲು ಲೋಕ ಶಿಕ್ಷಣ ಕೇಂದ್ರಗಳ ಮೂಲಕ ಕಂಪ್ಯೂಟರ್, ಹೊಲಿಗೆ ಸೇರಿದಂತೆ ಹಲವು ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.

ಲೋಕ ಶಿಕ್ಷಣ ನಿರ್ದೇಶನಾಲಯದ ಕಾರ್ಯಕ್ರಮ ಅಧಿಕಾರಿ ಸೋಮಶೇಖರ ತುಪ್ಪದ, ಜಿಲ್ಲಾ ಸಂಯೋಜಕಿ ಶಕೀಲಾಬಾನು ಕೊತ್ವಾಲ್, ಮಾದರಿ ಲೋಕ ಶಿಕ್ಷಣ ಕೇಂದ್ರದ ಕಾರ್ಯದರ್ಶಿ ಎಚ್.ಕೆ.ಚಂದ್ರಪ್ಪ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದಸ್ತಗಿರಸಾಬ ಬಡಿಗೇರ, ಮುಖ್ಯ ಪ್ರೇರಕ ಶಾಮೀದಸಾಬ ಲೈನದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.