ADVERTISEMENT

13ರಂದು ಶೌಚಾಲಯ ಜಾಗೃತಿ ಕಾರ್ಯಾಗಾರ

ಬಯಲುಶೌಚಮುಕ್ತ ಜಿಲ್ಲೆ ಘೋಷಣೆಯತ್ತ ಗುರಿ

​ಪ್ರಜಾವಾಣಿ ವಾರ್ತೆ
Published 11 ಜುಲೈ 2017, 7:48 IST
Last Updated 11 ಜುಲೈ 2017, 7:48 IST

ಕೊಪ್ಪಳ: ಶೌಚಾಲಯ ನಿರ್ಮಾಣದಲ್ಲಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಪೈಕಿ ಕೊಪ್ಪಳ ಜಿಲ್ಲೆ ಹೆಚ್ಚು ಪ್ರಗತಿ ಸಾಧಿಸಿದೆ. ಈ ನಿಟ್ಟಿನಲ್ಲಿ ಜುಲೈ 13ರಂದು ಬೆಳಿಗ್ಗೆ 10ಕ್ಕೆ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಮಹಿಳೆಯರಿಗಾಗಿ ಜಾಗೃತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು ಎಂದು ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯ ಭೌತಿಕ ಕಾಮಗಾರಿಗಳ ಪರಿಶೀಲನಾ ಸಮಿತಿಯ ಅಧ್ಯಕ್ಷ ನಂಜಯ್ಯನಮಠ ಎಸ್.ಜಿ. ಅವರು ಹೇಳಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಭೌತಿಕ ಕಾಮಗಾರಿಗಳ ಪರಿಶೀಲನೆ ಕುರಿತು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಜನಜಾಗೃತಿ ಮೂಡಿಸಿದ ಪರಿಣಾಮವಾಗಿ ಶೇ 70ರಷ್ಟು ಶೌಚಾಲಯಗಳು ನಿರ್ಮಾಣಗೊಂಡಿವೆ. ಉಳಿದ ಶೇ 30ರಷ್ಟು ಶೌಚಾಲಯಗಳು ಶೀಘ್ರ ನಿರ್ಮಾಣವಾಗಬೇಕಿದೆ. ಜಿಲ್ಲೆಯ ಎಲ್ಲಾ ಗ್ರಾಮ, ಪಟ್ಟಣಗಳ ಮನೆ-ಮನೆಯಲ್ಲಿ ಶೌಚಾಲಯ ನಿರ್ಮಾಣಗೊಂಡು ಅಕ್ಟೋಬರ್ 2ರ ಒಳಗೆ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸುವ ಆಶಯವನ್ನು ಸರ್ಕಾರ ಹೊಂದಿದೆ’ ಎಂದರು.

ADVERTISEMENT

‘ಶೌಚಾಲಯ ನಿರ್ಮಾಣದ ಕುರಿತು ಮಹಿಳೆಯರಿಗೆ ಮಹಿಳೆಯರಿಂದಲೇ ಜಾಗೃತಿ ಮೂಡಿಸುವುದು ಸೂಕ್ತ, ಈ ನಿಟ್ಟಿನಲ್ಲಿ ಜಿಲ್ಲೆಯ ಆಶಾ ಕಾರ್ಯಕರ್ತರು, ಅಂಗನವಾಡಿ  ಮೇಲ್ವಿಚಾರಕಿಯರು, ಆಶಾ ಕಾರ್ಯಕರ್ತೆಯರು, ಸಂಜೀವಿನಿ ಯೋಜನೆ ಗ್ರಾಮ ಪಂಚಾಯಿತಿ, ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರು, ಸದಸ್ಯರನ್ನು ಒಗ್ಗೂಡಿಸಿ ಜಾಗೃತಿ ಕಾರ್ಯಾಗಾರವನ್ನು ಆಯೋಜಿಸಲಾಗುತ್ತಿದೆ.

ಅ. 2ರಂದು ರಾಜ್ಯದ ಸುಮಾರು 10ರಿಂದ 12ಜಿಲ್ಲೆಗಳನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಗಳನ್ನಾಗಿ ಘೋಷಿಸುವ ಆಶಯವನ್ನು ಸರ್ಕಾರ ಹೊಂದಿದೆ’ ಎಂದರು. ‘ನದಿಯಲ್ಲಿ ನೀರಿನ ಕೊರತೆ ಇದೆ. ಹೀಗಾಗಿ ಪೂರ್ಣಗೊಂಡಿರುವ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ ಅಡಿ ನೀರು ಪೂರೈಕೆ ಪ್ರಾರಂಭಿಸಲು ಅಡ್ಡಿಯಾಗಿದೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆ ಹಾಗೂ ಬಹುಗ್ರಾಮ ಕುಡಿಯುವ ನೀರು ಯೋಜನೆಗಳ ಅಡಿ ಜಿಲ್ಲೆಯ ವಿವಿಧ ಗ್ರಾಮಗಳ ಕೆರೆಗಳ ಹಾಗೂ ಕೊಳವೆಬಾವಿಗಳ ಅಭಿವೃದ್ಧಿ, ಟ್ಯಾಂಕರ್‌ ಮೂಲಕ ನೀರು ಪೂರೈಕೆ, ಖಾಸಗಿ ಕೊಳವೆಬಾವಿಗಳಿಂದ ನೀರು ಪೂರೈಕೆ ಮಾಡಬೇಕು’ ಎಂದು ಅವರು ಸೂಚಿಸಿದರು. 

ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ರವಿ ಬಸರಿಹಳ್ಳಿ ಮಾತನಾಡಿ, ‘ಜಿಲ್ಲೆಯಲ್ಲಿ 2,19,916 ಬೇಸ್‌ಲೈನ್ ಪ್ರಕಾರ ಕುಟುಂಬಗಳಿದ್ದು, 1,54,054 ಶೌಚಾಲಯ ಹೊಂದಿದ ಕುಟುಂಬಗಳಾಗಿವೆ.

ಇನ್ನೂ 65,862 ಕುಟುಂಬಗಳು ಶೌಚಾಲಯ ಹೊಂದಬೇಕಿದೆ.  ಜಿಲ್ಲೆಯಲ್ಲಿ 28 ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳಿವೆ.  ಬೇಸ್‌ಲೈನ್‌ ಸಮೀಕ್ಷೆ ಪ್ರಕಾರ ತಾಲ್ಲೂಕುಗಳಿಗೆ ನೀಡಿದ ಗುರಿ ಸಾಧಿಸಿದ ಪ್ರಗತಿಯಲ್ಲಿ ಗಂಗಾವತಿ ಮೊದಲನೆ, ಕೊಪ್ಪಳ ಎರಡನೇ, ಕುಷ್ಟಗಿ ಮೂರನೇ ಹಾಗೂ ಯಲಬುರ್ಗಾ ಕೊನೆಯ ಸ್ಥಾನದಲ್ಲಿದೆ ಎಂದು ವಿವರಿಸಿದರು. 

ಸಮಿತಿಯ ಸದಸ್ಯ ಟಿ. ಜನಾರ್ದನ ಹುಲಿಗಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟರಾಜಾ, ಜಿ.ಪಂ. ಹಂಗಾಮಿ ಅಧ್ಯಕ್ಷೆ ಲಕ್ಷ್ಮಮ್ಮ ಎಸ್. ನೀರಲೂಟಿ, ಉಪಕಾರ್ಯದರ್ಶಿ ಎನ್.ಕೆ. ತೊರವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.