ADVERTISEMENT

40 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2017, 9:09 IST
Last Updated 30 ನವೆಂಬರ್ 2017, 9:09 IST

ಕುಷ್ಟಗಿ: ತಾಲ್ಲೂಕಿನ ತಳುವಗೇರಾ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಮಧ್ಯಾಹ್ನದ ಬಿಸಿಯೂಟ ಸೇವಿಸಿದ ಸುಮಾರು 40 ವಿದ್ಯಾರ್ಥಿಗಳು ವಾಂತಿಯಿಂದ ಅಸ್ವಸ್ಥಗೊಂಡಿದ್ದಾರೆ.

ಸಂಜೆ ಶಾಲೆ ಬಿಟ್ಟ ನಂತರ ಕೆಲವು ಮಕ್ಕಳು ವಾಂತಿ ಮಾಡಿಕೊಂಡರು. ನಂತರ ಸಾಮೂಹಿಕವಾಗಿ ವಾಂತಿ ಮಾಡಿಕೊಳ್ಳಲಾರಂಭಿಸಿದರು. ಪಾಲಕರು ಮತ್ತು ಶಿಕ್ಷಕರು ಆ್ಯಂಬುಲೆನ್ಸ್‌ ಮೂಲಕ ಮಕ್ಕಳನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು.

ಮಕ್ಕಳಿಗೆ ಚಿಕಿತ್ಸೆ ನೀಡಲಾಗಿದ್ದು ಯಾವುದೆ ತೊಂದರೆ ಇಲ್ಲ, ಚೇತರಿಕೊಳ್ಳುತ್ತಿದ್ದಾರೆ ಎಂದು ವೈದ್ಯರಾದ ಡಾ.ಚಂದ್ರಕಾಂತ ಮಂತ್ರಿ, ಡಾ.ಕೆ.ಎಸ್‌.ರೆಡ್ಡಿ ತಿಳಿಸಿದರು.

ADVERTISEMENT

ಬಿಸಿಯೂಟಕ್ಕೆ ಪಲಾವ್‌ ಮತ್ತು ಹಾಲಿನ ಪುಡಿಯಿಂದ ತಯಾರಿಸಲಾಗಿದ್ದ ಮೊಸರನ್ನು ನೀಡಲಾಗಿತ್ತು. ಸುಮಾರು 250 ಮಕ್ಕಳು ಊಟ ಮಾಡಿದ್ದ, ಉಳಿದವರಲ್ಲಿ ತೊಂದರೆ ಕಾಣಿಸಿಲ್ಲ ಎಂದು ಶಾಲೆ ಮುಖ್ಯಶಿಕ್ಷಕಿ ಕಮಲಾಕ್ಷಿ ತಿಳಿಸಿದ್ದಾರೆ.

ಶಾಲೆಯಲ್ಲಿ ಸ್ವಚ್ಛತೆಗೆ ಗಮನಹರಿಸದಿರುವುದು ಮಕ್ಕಳು ಅಸ್ವಸ್ಥಗೊಳ್ಳಲು ಕಾರಣ ಎಂದು ಪಾಲಕರು ದೂರಿದರು. ಎಪಿಎಂಸಿ ಅಧ್ಯಕ್ಷ ಬಾಲಪ್ಪ ಚಾಕ್ರಿ, ಅಕ್ಷರ ದಾಸೋಹ ಯೋಜನೆ ತಾಲ್ಲೂಕಿನ ಸಹಾಯಕ ನಿರ್ದೇಶಕ ವಿ.ಬಿ.ಉಪ್ಪಿನ, ಕ್ಷೇತ್ರ ಶಿಕ್ಷಣಾಧಿಕಾರಿ (ಪ್ರಭಾರ) ಶ್ರೀಶೈಲ ಸೋಮನಕಟ್ಟಿ ಆಸ್ಪತ್ರೆಗೆ ಭೇಟಿ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.