ADVERTISEMENT

ಪೊಲೀಸ್‌ ಬಲ ಬಳಸಿ ಮೊಕದ್ದಮೆ: ಜೋಷಿ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2018, 8:57 IST
Last Updated 1 ಫೆಬ್ರುವರಿ 2018, 8:57 IST

ಕೊಪ್ಪಳ: ‘ಪೊಲೀಸ್‌ ಬಲ ಬಳಸಿ ರಾಜಕೀಯ ವಿರೋಧಿಗಳನ್ನು ಹತ್ತಿಕ್ಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದ್ದು, ಬಿಜೆಪಿ ಪದಾಧಿಕಾರಿಗಳ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸುತ್ತಿದೆ’ ಎಂದು ಸಂಸದ ಪ್ರಹ್ಲಾದ ಜೋಷಿ ಆಪಾದಿಸಿದರು. ‘ಈ ಬಗ್ಗೆ ನಾವು ಪೊಲೀಸ್‌ ದೂರು ಪ್ರಾಧಿಕಾರಕ್ಕೂ ದೂರು ನೀಡುತ್ತೇವೆ’ ಎಂದು ಇಲ್ಲಿ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

‘ಅಮಿತ್‌ ಶಾ ಜೈಲಿಗೆ ಹೋಗಿ ಬಂದವರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪದೇಪದೇ ಹೇಳುತ್ತಿದ್ದಾರೆ. ಅಮಿತ್‌ ಶಾ ಅವರು ಸುಳ್ಳು ಆರೋಪದ ಮೇಲೆ ಜೈಲಿಗೆ ಹೋಗಿಬಂದವರು. ನಕಲಿ ಎನ್‌ಕೌಂಟರ್‌ ಸಂಬಂಧಿತ ಪ್ರಕರಣದಲ್ಲಿ ಅವರ ಹೆಸರನ್ನು ಸಿಲುಕಿಸಲಾಯಿತು. ಈಗ ಸಿಬಿಐ ದೋಷಮುಕ್ತಗೊಳಿಸಿದೆ. ಸಿದ್ದರಾಮಯ್ಯ ಅವರು ಓಟ್‌ ಬ್ಯಾಂಕ್‌ ವೃದ್ಧಿಸುವ ನೆಪದಲ್ಲಿ ಪಾಕಿಸ್ತಾನ ಪರ ಓಲೈಕೆ ಮನೋಭಾವ ಪ್ರದರ್ಶಿಸುತ್ತಿದ್ದಾರೆ’ ಎಂದು ದೂರಿದರು.

‘ವಾಟಾಳ್‌ ನಾಗರಾಜ್‌ ಕಾಂಗ್ರೆಸ್‌ ಏಜೆಂಟ್‌. ಅಮಿತ್‌ ಶಾ ಬರುವ ದಿನವೇ ರಾಜ್ಯ ಬಂದ್‌ಗೆ ಕರೆ ನೀಡಿದ್ದರು. ಮಹದಾಯಿ ನದಿಯ ಹರಿವು ಬಗ್ಗೆ ಗೊತ್ತಿಲ್ಲದ ವಾಟಾಳ್ ಬಂದ್‌ ಕರೆ ಕೊಟ್ಟಿದ್ದರು. ಇದಕ್ಕೆ ರಾಜ್ಯ ಸರ್ಕಾರವೇ ಪ್ರಾಯೋಜಕತ್ವ ನೀಡಿತ್ತು’ ಎಂದು ಆರೋಪಿಸಿದರು.

ADVERTISEMENT

ಹೊಸಪೇಟೆ ಶಾಸಕ ಆನಂದ್‌ ಸಿಂಗ್‌ ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿದ ಜೋಷಿ, 'ಇದುವರೆಗೆ ಬಿಜೆಪಿಯಲ್ಲಿದ್ದವರೆಲ್ಲಾ ಜೈಲಿಗೆ ಹೋದವರು ಎಂದು ಸಿದ್ದರಾಮಯ್ಯ ಅಣಕಿಸುತ್ತಿದ್ದರು. ಈಗ ಆನಂದ್‌ ಸಿಂಗ್‌ ಅವರನ್ನು ಕರೆದುಕೊಂಡಿದ್ದಾರೆ. ಇನ್ನಾದರೂ ಅವರು ಪರಿವರ್ತನೆ ಆಗಬಹುದು' ಎಂದು ಲೇವಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.