ADVERTISEMENT

ಜಿಲ್ಲೆಯ ಮೊದಲ ದಾಳಿಂಬೆ, ದ್ರಾಕ್ಷಿ ಮೇಳ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2018, 10:00 IST
Last Updated 19 ಫೆಬ್ರುವರಿ 2018, 10:00 IST

ಕೊಪ್ಪಳ: ಜಿಲ್ಲೆಯಲ್ಲಿ ಮೊದಲ ಬಾರಿಗೆ ಐದು ದಿನಗಳ ದ್ರಾಕ್ಷಿ ಮತ್ತು ದಾಳಿಂಬೆ ಮೇಳ ಆಯೋಜಿಸುವ ಮೂಲಕ ತೋಟಗಾರಿಕೆ ಇಲಾಖೆ ಜಿಲ್ಲೆಯ ಹಣ್ಣು ಬೆಳೆಗಾರರಿಗೆ  ಮಾರಾಟ ವ್ಯವಸ್ಥೆ ಕಲ್ಪಿಸಿದ್ದು, ಸಾರ್ವಜನಿಕರಿಗೆ ನಿಗದಿತ ಬೆಲಯಲ್ಲಿ ಉತ್ತಮ ಹಣ್ಣು ದೊರಕುವಂತಾಗಿದೆ.

ಮಾವು ಮೇಳ, ಮಧು ಮೇಳ, ಸಸ್ಯ ಸಂತೆ, ಹಾಗೂ ಫಲಪುಷ್ಪ ಪ್ರದರ್ಶನ ನಡೆಸಿ ಯಶಸ್ಸು ಕಂಡಿರುವ ಇಲಾಖೆ ಈಗ ದ್ರಾಕ್ಷಿ ಮತ್ತು ದಾಳಿಂಬೆ ಮೇಳ ಆಯೋಜಿಸಿರುವುದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸಾರ್ವಜನಿಕರು, ಹಣ್ಣು ಪ್ರಿಯರು, ಸಂಶೋಧನ ವಿದ್ಯಾರ್ಥಿಗಳು, ಆಸಕ್ತ ರೈತರು ಮೇಳಕ್ಕೆ ಭೇಟಿ ನೀಡುತ್ತಿದ್ದಾರೆ.

ಜಿಲ್ಲೆಯ ಸಿಂಧೋಗಿ, ಅಳವಂಡಿ, ತಳಕಲ್‍, ವಟಪರವಿ ಸೇರಿದಂತೆ ವಿವಿಧ ಭಾಗಗಳಿಂದ ರೈತರು ತಾವು ಬೆಳೆದ ಹಣ್ಣುಗಳೊಂದಿಗೆ ಮಾರಾಟ ಮೇಳದಲ್ಲಿ ಭಾಗವಹಿಸಿದ್ದಾರೆ. ಮೇಳದಲ್ಲಿ ಪ್ರದರ್ಶಿಸಲಾದ ದ್ರಾಕ್ಷಿ ಬಳ್ಳಿ ಯತ್ತ ಎಲ್ಲರ ಚಿತ್ತ ಹರಿದಿದೆ. ಅಲ್ಲದೆ ವಿಜಯಪುರದ ಅಮೀರ್‍ ಸುಹೇಲ್‍ ತಂದಿದ್ದ ದಾಳಿಂಬೆ ಮತ್ತು ದ್ರಾಕ್ಷಿಯ ರಸ ತಯಾರಿಸುವ ಯಂತ್ರ ರೈತರನ್ನು ಹಾಗೂ ಸಾರ್ವಜನಿಕರನ್ನು ತನ್ನತ್ತ ಸೆಳೆಯುತ್ತಿದೆ.

ADVERTISEMENT

ಜಿಲ್ಲೆಯಿಂದ ಸುಮಾರು ರೈತರು ಮೇಳದಲ್ಲಿ ಪಾಲ್ಗೊಂಡಿದ್ದು, ಸರ್ಕಾರದಿಂದ 5 ದಿನದ ಈ ಮೇಳಕ್ಕೆ ಸುಮಾರು ₹ 3 ರಿಂದ 4 ಲಕ್ಷ ವ್ಯಯಿಸಲಾಗಿದೆ. ಜನರಿಂದ ಹೆಚ್ಚಿನ ಸ್ಪಂದನೆ ದೊರೆತರೆ ಇನ್ನೂ 5 ದಿನಗಳ ಕಾಲ ಮುಂದುವರೆಸಲಾಗುವುದು ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕೃಷ್ಣ ಉಕ್ಕುಂದ ಮಾಹಿತಿ ನೀಡಿದರು.

ಗಮನಸೆಳೆದ ಸಂಸ್ಕರಿತ ದಾಳಿಂಬೆ ಕಾಳು: ಮಾರಾಟ ಮಳಿಗೆಯಲ್ಲಿ ಬಳ್ಳಾರಿಯ ಐಗ್ರೋಮ್‍ ಕಂಪನಿ ಪ್ರದರ್ಶಿಸಿದ ಪ್ಯಾಕೇಜ್‍ ರೂಪ್ ದಾಳಿಂಬೆ ಕಾಳುಗಳ ಪೊಟ್ಟಣ ಸಾರ್ವಜನಿಕರನ್ನು ಸೆಳೆಯುತ್ತಿವೆ. ಕಂಪನಿಯಿಂದ ಉತ್ತಮವಾದ ದಾಳಿಂಬೆ ಹಣ್ಣುಗಳನ್ನು ಖರೀದಿಸಿ, ಅದರ ಕಾಳು ಬೇರ್ಪಡಿಸಿ, ಸಂಸ್ಕರಿಸಿ ಪ್ಲಾಸ್ಟಿಕ್‍ ಪೊಟ್ಟಣಗಳಲ್ಲಿ ಹಾಕಿ ಮಾರಾಟ ಮಾಡಲಾಗುತ್ತದೆ.

ಕಾಳು ಸಂಗ್ರಹಸಿಲಾದ ಬಾಕ್ಸ್‌ನಲ್ಲಿ 8 ಡಿಗ್ರಿಯಷ್ಟು ತಂಪು ಗಾಳಿ ತುಂಬಿಸಲಾಗಿರುತ್ತದೆ. ಇದರಿಂದ ಕಾಳು 21 ದಿನಗಳ ಕಾಲ ಉತ್ತಮ ಸ್ಥಿತಿಯಲ್ಲಿರುತ್ತದೆ. ಖರೀದಿಸಲಾಗುವ ಪ್ರತಿ ಪೊಟ್ಟಣದೊಂದಿಗೆ ಹೆಚ್ಚಿನ ರುಚಿಗಾಗಿ ಹಿಮಾಲಯನ್‍ ಉಪ್ಪುನ್ನು ನೀಡಲಾಗುತ್ತದೆ. ದೇಹಕ್ಕೆ ಬೇಕಾದ ಬಹಳಷ್ಟು ಪೋಷಕಾಂಶಗಳು ಈ ಉಪ್ಪಿನಲ್ಲಿ ಸಿಗುತ್ತವೆ. ಇದೇ ರೀತಿ ಪೈನಾಪಲ್‌, ಸೇಬು, ಪೇರಲ ಹೀಗೆ 8 ರೀತಿಯ ಹಣ್ಣುಗಳನ್ನು ಹೀಗೆ ಸಂಸ್ಕರಿಸಿ, ವಿದೇಶಗಳಿಗೆ ರಫ್ತು ಮಾಡಲಾಗುತ್ತದೆ ಎಂದು ಬಳ್ಳಾರಿ ಶ್ರೀನಿವಾಸ ರಾಜು ಹೇಳಿದರು.

ದಾಳಿಂಬೆಯ ಸಂಸ್ಕರಣೆಯಿಂದ ಹಣ್ಣನ್ನು  ಬಹಳ ದಿನಗಳವರೆಗೆ ರಕ್ಷಿಸಬಹುದಾಗಿದೆ. ಬೆಳೆಗಾರರಿಗೆ ಇದು ಉಪಯುಕ್ತ ಮಾರ್ಗವಾಗಿದೆ. ಈಗಾಗಲೇ ರಾಜ್ಯದಲ್ಲಿ ಕಂಪನಿಯ 500ಕ್ಕೂ ಹೆಚ್ಚು  ಶಾಖೆಗಳನ್ನು ತೆರೆಯಲಾಗಿದೆ. ದಾಳಿಂಬೆ ಕಾಳುಗಳ 200 ಗ್ರಾಂ.ನ ಒಂದು ಪೊಟ್ಟಣಕ್ಕೆ ₹ 99, 100 ಗ್ರಾಂಗೆ ₹ 50 ದರ ನಿಗದಿ ಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಅನಿಲ್‌ ಬಾಚನಹಳ್ಳಿ

ಮೇಳದಲ್ಲಿ ಕಂಡುಬಂದ ವಿವಿಧ ದ್ರಾಕ್ಷಿ, ದಾಳಿಂಬೆ ತಳಿಗಳು...

ದ್ರಾಕ್ಷಾರಸ(ವೈನ್‌) ತಯಾರಿಸಲು ವಿಶೇಷವಾಗಿ ಬೆಳೆಯಲಾಗುವ ದ್ರಾಕ್ಷಿ ತಳಿಗಳಾದ ಸಿಮ್‌ಲಾನಸ್ಕಿ ಚರನಿ, ಕಿಶ್ಮಿಸ್‌ ರೋಸಾವೀಸ್‌, ವೈಟ್‌ ಟೆಂಪ್ರೊನಿಲೋ, ಬ್ಲಾಕ್‌ ಕರಂಟ್‌, ಶಿರಾಜ, ಸಾವಿನ್‌, ಮೆಡಿಕಾ, ಬೆಂಗಳೂರು ನೀಲಿ, ರೆನಿನ್‌ ಬ್ಲ್ಯಾಂಕ್‌, ಕೆಂಬರ್‌ ನೆಟ್‌ಸಾವಿನಾನ್‌, ಗ್ರಿನೆಚ್‌ ನೊಯಾರ್‌ ಮತ್ತು ತಿನ್ನಲು ಹಾಗೂ ಮಣೂಕ ಮಾಡಲು(ಒಣದ್ರಾಕ್ಷಿ) ಬಳಸುವ ತಳಿಗಳಾದ ಸೋನಾಕಾ, ಸೂಪರ್‍ ಸೋನಾಕಾ, ಮಾಣಿಕ್‍ ಚಮನ್‍, ಥಾಮ್ಸನ್‌ ಸೀಡಲೆಸ್‌, ಪ್ಲೇಮ್‌ ಸೀಡಲೆಸ್‌, ರೆಡ್‌ ಗ್ಲೋಬ್‌, 2–ಎ ಕ್ಲೋನ್‌ ಸೇರಿದಂತೆ ಸುಮಾರು 20 ರಿಂದ 27 ತಳಿಗಳ ಪ್ರದರ್ಶಿಸಲಾಯಿತು. ಅಲ್ಲದೆ ಭಗ್ವಾ, ಮ್ರುಧುಲಾ, ರೂಬೀ, ಸ್ಪೇಷಲ್‌ ಭಗ್ವಾ, ಗಣೇಶ, ಜ್ಯೋತಿ ಹೀಗೆ 6 ರಿಂದ 7 ವಿವಿಧ ದಾಳಿಂಬೆ ತಳಿಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.