ADVERTISEMENT

9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆ

ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಇಂದಿನಿಂದ, ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 9:30 IST
Last Updated 24 ಮಾರ್ಚ್ 2017, 9:30 IST
ಕುಕನೂರು ಸಮೀಪದ ಹಿರೇವಂಕಲಕುಂಟಾ ಗ್ರಾಮದಲ್ಲಿ ನಡೆಯುವ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜುಗೊಂಡಿರುವ ವೇದಿಕೆಯನ್ನು ಕಸಾಪ ಜಿಲ್ಲಾ ಅಧ್ಯಕ್ಷ ರಾಜಶೇಖರ ಅಂಗಡಿ ಗುರುವಾರ ಪರಿಶೀಲಿಸಿದರು.   ಚಿತ್ರ: ಮಂಜುನಾಥ ಅಂಗಡಿ
ಕುಕನೂರು ಸಮೀಪದ ಹಿರೇವಂಕಲಕುಂಟಾ ಗ್ರಾಮದಲ್ಲಿ ನಡೆಯುವ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಸಜ್ಜುಗೊಂಡಿರುವ ವೇದಿಕೆಯನ್ನು ಕಸಾಪ ಜಿಲ್ಲಾ ಅಧ್ಯಕ್ಷ ರಾಜಶೇಖರ ಅಂಗಡಿ ಗುರುವಾರ ಪರಿಶೀಲಿಸಿದರು. ಚಿತ್ರ: ಮಂಜುನಾಥ ಅಂಗಡಿ   

ಯಲಬುರ್ಗಾ: ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ  ತಾಲ್ಲೂಕಿನ ಹಿರೇವಂಕಲಕುಂಟಾ ಗ್ರಾಮದಲ್ಲಿ ಮಾರ್ಚ್‌ 24ರಿಂದ ಎರಡು ದಿನ ನಡೆಯುವ ಜಿಲ್ಲಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಕಲ ಸಿದ್ಧತೆ ನಡೆದಿದ್ದು, ಸಮ್ಮೇಳನದ ಅಂಗವಾಗಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ದಿವಂಗತ ಅಂದಾನಯ್ಯ ಪುರಾಣಿಕ ವೇದಿಕೆ ನಿರ್ಮಿಸಲಾಗಿದೆ.

24ರಂದು ಬೆಳಿಗ್ಗೆ 7.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ರಾಯರೆಡ್ಡಿ ಧ್ವಜಾರೋಹಣ ನೆರವೇರಿಸಲಿದ್ದು, ಜಿಲ್ಲಾ ಕಸಾಪ ಅಧ್ಯಕ್ಷ ರಾಜಶೇಖರ ಅಂಗಡಿ ಪರಿಷತ್‌ ಧ್ವಜವನ್ನು ಹಾಗೂ ತಾಲ್ಲೂಕು ಕಸಾಪ ಅಧ್ಯಕ್ಷ ಲಕ್ಷ್ಮಣ ಹಿರೇಮನಿ ಕನ್ನಡ ಧ್ವಜಾರೋಹಣ ನೆರವೇರಿಸಲಿದ್ದಾರೆ.

ಬೆಳಿಗ್ಗೆ 8.45ಕ್ಕೆ ಸಮ್ಮೇಳನಾಧ್ಯಕ್ಷರಾದ ಹಿರಿಯ ಸಾಹಿತಿ ರಂ.ರಾ.ನಿಡಗುಂದಿ  ಅವರ ನೇತೃತ್ವದಲ್ಲಿ ಭುವನೇಶ್ವರಿ ಭಾವಚಿತ್ರದ ಮೆರವಣಿಗೆ ನಡೆಯಲಿದೆ.  ಮೆರವಣಿಗೆಗೆ ಜಿಲ್ಲಾ ಪಂಚಾಯಿತಿ ಸದಸ್ಯೆ ಹೊಳಿಯಮ್ಮ ಶರಣಗೌಡ ಪೊಲೀಸ್‌ಪಾಟೀಲ ಚಾಲನೆ ನೀಡುವರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ಗೌಡ್ರ, ಸದಸ್ಯ ರುದ್ರಪ್ಪ ಮರಕಟ್‌, ಶರಣಪ್ಪ ಬಳ್ಳಾರಿ, ದೇವಯ್ಯ ದೇವಿಂದ್ರಪ್ಪ ಗಾಣದಾಳ, ಮಂಜುನಾಥ ಬಸಪ್ಪ ಸಜ್ಜನ, ಗಾಳೆಪ್ಪ ಓಜನಹಳ್ಳಿ, ಮಲ್ಲಿಕಾರ್ಜುನ ಹರ್ಲಾಪುರ, ಸುಭಾಸ ಜಿರ್ಲಿ ಪಾಲ್ಗೊಳ್ಳುವರು.

ಬೆಳಿಗ್ಗೆ 10.30ಕ್ಕೆ ಅನ್ನದಾನಯ್ಯ ಪುರಾಣಿಕ ಮಹಾವೇದಿಕೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಮನು ಬಳಿಗಾರ ಸಮ್ಮೇಳನ ಉದ್ಘಾಟಿಸುವರು. ನಿಕಟಪೂರ್ವ ಅಧ್ಯಕ್ಷ ಡಾ.ಕೆ.ಬಿ. ಬ್ಯಾಳಿ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷರೂ ಆಗಿರುವ ಸಚಿವ ಬಸವರಾಜ ರಾಯರೆಡ್ಡಿ ಮಾತನಾಡುವರು.

ಸಂಸದ ಸಂಗಣ್ಣ ಕರಡಿ, ಸಮ್ಮೇಳನಾಧ್ಯಕ್ಷರ ನುಡಿ ಕೈಪಿಡಿ ಬಿಡುಗಡೆ ಮಾಡಲಿದ್ದಾರೆ. ಕೊಪ್ಪಳ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಸ್.ಬಿ. ನಾಗರಳ್ಳಿ ಸ್ಮರಣ ಸಂಚಿಕೆ ಬಿಡುಗಡೆ ಮಾಡುವರು. ಶಾಸಕ ಶಿವರಾಜ ತಂಗಡಗಿ ಕೃಷಿ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ.

ಕವಿ ಶರಣೇಗೌಡ ಯರದೊಡ್ಡಿ ಬರೆದ ‘ಸೃಷ್ಟಿಯ ರಹಸ್ಯಗಳು’,  ಕುರುವತ್ತಿಗೌಡ ಎಚ್‌. ಅವರ ‘ಪೃಥ್ವಿ ಪ್ರೇಮಿ’, ಸಾವಿತ್ರಿ ವಿರೂಪಾಕ್ಷಪ್ಪ ಅವರ ‘ಗುರು ಪುಟ್ಟರಾಜರ ಭಕ್ತಿ ಕುಸುಮ’, ‘ಶ್ರೀನಿವಾಸ ಚಿತ್ರಗಾರ ಹೀಗೆಂದ’ ಎಸ್‌.ವಿ.ಜಿ, ಎಸ್‌.ಎಸ್‌. ಮುಲ್ಲಾಪುರ ಸುಭಾಷಿತ ನುಡಿ ಮುತ್ತುಗಳು ಕೃತಿಯನ್ನು ಗದಗ ಜಿಲ್ಲಾ ಕಸಾಪ ಅಧ್ಯಕ್ಷ ಶರಣು ಗೋಗೇರಿ, ಬಾಗಲಕೋಟೆ ಕಸಾಪ ಅಧ್ಯಕ್ಷ ಶ್ರೀಶೈಲ ಕರಿಶಂಕರಿ, ಬಳ್ಳಾರಿಯ ಕಸಾಪ ಅಧ್ಯಕ್ಷ ಸಿದ್ಧರಾಮ ಕಲ್ಮಠ ಬಿಡುಗಡೆ ಮಾಡಲಿದ್ದಾರೆ.

ಜಿಲ್ಲಾಧಿಕಾರಿ ಎಂ.ಕನಕಗವಲ್ಲಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ತ್ಯಾಗರಾಜನ್‌, ನೌಕರರ ಸಂಘದ ಅಧ್ಯಕ್ಷ ನಾಗರಾಜ ಜುಮ್ಮಣ್ಣವರ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂ,  ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 1.15ಕ್ಕೆ ಪರಶುರಾಮ ಬಣ್ಣದ ಹಾಗೂ ತಂಡದಿಂದ  ಸಂಗೀತ ಕಾರ್ಯಕ್ರಮ ಇದೆ.

‘ಸಫಲ ಕೃಷಿ’ ಗೋಷ್ಠಿಯಲ್ಲಿ ಪತ್ರಕರ್ತ ಸೋಮರಡ್ಡಿ ಅಳವಂಡಿ ಮಾತನಾಡುವರು. ಪ್ರಗತಿಪರ ರೈತ ಯಂಕಣ್ಣ ಯರಾಶಿ ಅಧ್ಯಕ್ಷತೆ ವಹಿಸುವರು. ಕೃಷಿ ಸಾಹಿತಿ ಶಿವಾನಂದ ಕಳವೆ ‘ಬರ ಗೆಲ್ಲಲು ನೂರಾರು ದಾರಿ’ ಕುರಿತು ಉಪನ್ಯಾಸ ನೀಡುವರು.

ಕೃಷಿಯಲ್ಲಿ ಮಹಿಳೆಯ ಪಾತ್ರ ಕುರಿತು ರಾಜೇಶ್ವರಿ ಪಾಟೀಲ, ತೋಟಗಾರಿಕೆ ಮತ್ತು ಕೃಷಿ ಅರಣ್ಯ ಕುರಿತು ರಮೇಶ ದೇವೇಂದ್ರಪ್ಪ ಬಳೂಟಗಿ ಉಪನ್ಯಾಸ ನೀಡಲಿದ್ದಾರೆ. ನಂತರ ಕೃಷಿ ಸಾಧಕರಿಗೆ ಸನ್ಮಾನ ಏರ್ಪಡಿಸಲಾಗಿದೆ. ದೊಡ್ಡ ರೇವಣಪ್ಪ ಹಿರೇಕುರುಬರ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ.

ಸಂಜೆ 5ಕ್ಕೆ ನಡೆಯುವ ‘ತಂತ್ರಜ್ಞಾನದಲ್ಲಿ ಕನ್ನಡದ ಬಳಕೆ’ ಎಂಬ 2ನೇ ಗೋಷ್ಠಿಯಲ್ಲಿ ಕಂಪ್ಯೂಟರ್‌ ತಜ್ಞ ಉದಯಶಂಕರ ಪುರಾಣಿಕ ಉಪನ್ಯಾಸ ನೀಡಲಿದ್ದಾರೆ. ಸಂಜೆ 6ಕ್ಕೆ ಜಯಶ್ರೀ ಚೌಕಿಮಠ ಕೊಪ್ಪಳ ಇವರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

6.15ಕ್ಕೆ ನಡೆಯುವ 3ನೇ ಗೋಷ್ಠಿಯಲ್ಲಿ ‘371(ಜೆ) ಅನುಷ್ಠಾನದ ಸವಾಲು ಹಾಗೂ ಸಾಧ್ಯತೆಗಳು’ ಕುರಿತು ಹೈ.ಕ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ರಜಾಕ್‌ ಉಸ್ತಾದ್‌ ಉಪನ್ಯಾಸ ನೀಡುವರು.ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಅಧ್ಯಕ್ಷತೆ ವಹಿಸಲಿದ್ದಾರೆ.

7.30ಕ್ಕೆ ಹಾಸ್ಯ ಕಲಾವಿದರಾದ ಮರಿಯಪ್ಪ ಮನ್ನಾಪುರ, ವೈಶಂಪಾಯನ , ಶರಣಪ್ಪ ಕುರನಾಳ  ಅವರಿಂದ ಹಾಸ್ಯ ಕಾರ್ಯಕ್ರಮ ನಡೆಯಲಿದೆ. 8.30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

*
ಜಿಲ್ಲಾ ಸಾಹಿತ್ಯ ಸಮ್ಮೇಳನ ರೈತರಿಗೆ ಅರ್ಪಿತವಾಗಲಿ. ಕನ್ನಡದ ತೇರು ಎಳೆಯುವ ಕನ್ನಡದ ಹಬ್ಬವು ಯಶಸ್ವಿಯಾಗಿ ಸಾಗಲಿ.
-ಶಿವಣ್ಣ ರಾಯರಡ್ಡಿ, ರೈತ ಮುಖಂಡ, ತಳಕಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT