ADVERTISEMENT

ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷಕ್ಕೆ ಅಧಿಕಾರ ಅಗತ್ಯ

ಜಿಲ್ಲಾ ಮಟ್ಟದ ಯುವ ಜನತಾದಳ ಸಮಾವೇಶ: ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2018, 12:19 IST
Last Updated 11 ಏಪ್ರಿಲ್ 2018, 12:19 IST
ಮಂಡ್ಯದ ವಿಜಯಲಕ್ಷ್ಮಿ ಸಮುದಾಯ ಭವನದಲ್ಲಿ ನಡೆದ ಯುವ ಜನತಾದಳ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಸಮಾವೇಶವನ್ನು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಮಧುಬಂಗಾರಪ್ಪ ಉದ್ಘಾಟಿಸಿದರು
ಮಂಡ್ಯದ ವಿಜಯಲಕ್ಷ್ಮಿ ಸಮುದಾಯ ಭವನದಲ್ಲಿ ನಡೆದ ಯುವ ಜನತಾದಳ ಪದಾಧಿಕಾರಿಗಳ ಹಾಗೂ ಕಾರ್ಯಕರ್ತರ ಸಮಾವೇಶವನ್ನು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ಮಧುಬಂಗಾರಪ್ಪ ಉದ್ಘಾಟಿಸಿದರು   

ಮಂಡ್ಯ: ರಾಜ್ಯದ ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರುವುದು ಅಗತ್ಯ ಎಂದು ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಮಂಗಳವಾರ ಪ್ರತಿಪಾದಿಸಿದರು.

ನಗರದ ವಿಜಯಲಕ್ಷ್ಮಿ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಯುವ ಜನತಾದಳ ಪದಾಧಿಕಾರಿಗಳು, ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.

ಜೆಡಿಎಸ್ ಅಧಿಕಾರಕ್ಕೆ ಬಂದರೆ ಕುಮಾರಸ್ವಾಮಿ ಅವರು ಉದ್ಯೋಗ ಸೃಷ್ಟಿ, ಕೃಷಿ ಹಾಗೂ ಸ್ವ ಸಹಾಯ ಸಂಘಗಳ ಸಾಲಮನ್ನಾಗೆ ಆದ್ಯತೆ ನೀಡಲಿದ್ದಾರೆ. ರಾಜ್ಯದ ಪ್ರಗತಿಗಾಗಿ ಪ್ರಾದೇಶಿಕ ಪಕ್ಷ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ADVERTISEMENT

ಈ ಚುನಾವಣೆ ಜಿಲ್ಲೆಯಲ್ಲಿ ಹಠ, ಛಲ ಹಾಗೂ ವೈಯಕ್ತಿಕ ಕಾರಣಕ್ಕೆ ಪ್ರಮುಖವಾಗಿದೆ. ಕುಮಾರಸ್ವಾಮಿ ಯುವಜನರಿಗೆ ಆದ್ಯತೆ ನೀಡುತ್ತಿದ್ದಾರೆ. ಬಿಎಸ್‌ಪಿ ಜೊತೆಗೆ ಜೆಡಿಎಸ್‌ ಮೈತ್ರಿ ಆಗಿದೆ. ಈ ಬಾರಿ ಜೆಡಿಎಸ್ ಅಧಿಕಾರಕ್ಕೆ ತರಲು ಯುವಜನರು ಸಂಕಲ್ಪ ತೊಡಬೇಕಾಗಿದೆ ಎಂದು ಹೇಳಿದರು.

ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಬರೆದು ಕೊಟ್ಟದ್ದನ್ನು ವಿವೇಚನೆ ಇಲ್ಲದೆ ಹೇಳುತ್ತಾರೆ. ಕರ್ನಾಟಕದಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದೆ. ಆ ಪಕ್ಷಕ್ಕೆ ರಾಜ್ಯ ಸಂಪತ್ತಿನ ಖಜಾನೆಯಾಗಲು ಅವಕಾಶ ನೀಡಬಾರದು ಎಂದರು.

ನರೇಂದ್ರ ಮೋದಿ 2.5 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿದ್ದರು. ಈಗ 85 ಲಕ್ಷ ಉದ್ಯೋಗ ಭರ್ತಿ ಮಾಡಿದ್ದಾರೆ. ಸುಳ್ಳು ಭರವಸೆ ಮೂಲಕ ಯುವಜನರನ್ನು ವಂಚಿಸುತ್ತಿದ್ದಾರೆ. ಮಹಾದಾಯಿ ಕುರಿತು ಖಚಿತತೆ ಇಲ್ಲ ಎಂದು ಹೇಳಿದರು.

ಪಕ್ಷ ಈಗ 126 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿದೆ. ಬರುವ ದಿನಗಳಲ್ಲಿ ಮೈತ್ರಿಯಡಿ ಬಿಎಸ್‌ಪಿಗೆ ಹಂಚಿಕೆ ಆಗಿರುವ ಕ್ಷೇತ್ರ ಹೊರತುಪಡಿಸಿ ಉಳಿದ ಕ್ಷೇತ್ರಗಳಿಗೂ ಅಭ್ಯರ್ಥಿ ಘೋಷಿಸಲಾಗುವುದು. ಪಕ್ಷವನ್ನು ಅಧಿಕಾರಕ್ಕೆ ತರಲು ಜೆಡಿಎಸ್‌ ಸಾಧನೆಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.

ಜೆಡಿಎಸ್‌ ಗರಡಿಯಲ್ಲಿಬೆಳೆದು ಅನ್ಯ ಪಕ್ಷಕ್ಕೆ ವಲಸೆ ಹೋಗಿರುವವರಿಗೂ ಜನತೆ ಈ ಚುನಾವಣೆಯ ಮೂಲಕ ಪಾಠ ಕಲಿಸಬೇಕು ಎಂದು ಕೋರಿದರು.

ಜೆಡಿಎಸ್ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಪ್ರತಾಪ್‌ ಕುಮಾರ್, ಕಾರ್ಯದರ್ಶಿ ಚಂದ್ರಶೇಖರ್, ಜಿಲ್ಲಾ ಘಟಕದ ಅಧ್ಯಕ್ಷ ಡಿ.ರಮೇಶ್, ಜೆಡಿಎಸ್ ಜಿಲ್ಲಾ ಯುವ ಘಟಕದ ಅಧ್ಯಕ್ಷ ಅಶೋಕ್ ಜಯರಾಮ್, ಕೆ.ಆರ್.ಪೇಟೆ ಶಾಸಕ ನಾರಾಯಣಗೌಡ, ಮಾಜಿ ಶಾಸಕ ಎಂ.ಶ್ರೀನಿವಾಸ್, ಮುಖಂಡರಾದ ಡಾ.ಕೃಷ್ಣ, ತಗ್ಗಹಳ್ಳಿ ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.