ADVERTISEMENT

ಆಂಧ್ರಪ್ರದೇಶ ಮುಜರಾಯಿ ಸಚಿವ, ತಿರುಪತಿ ಶಾಸಕಿ ಭಾಗಿ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2017, 7:31 IST
Last Updated 23 ಸೆಪ್ಟೆಂಬರ್ 2017, 7:31 IST

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ನಡೆಯುತ್ತಿರುವ ಕಾವೇರಿ ಮಹಾ ಪುಷ್ಕರದ 11ನೇ ದಿನವಾದ ಶುಕ್ರವಾರವೂ ಕಾವೇರಿ ನದಿಯಲ್ಲಿ ಸಾವಿರಾರು ಮಂದಿ ಪುಣ್ಯ ಸ್ನಾನ ಮಾಡಿದರು. ಆಂಧ್ರ ಪ್ರದೇಶದ ಧಾರ್ಮಿಕ ಮತ್ತು ದತ್ತಿ ಇಲಾಖೆ ಸಚಿವ ಪೈಡಿಕೊಂಡಲ ಮಾಣಿಕ್ಯಾಲರಾವ್‌, ತಿರುಪತಿ ಕ್ಷೇತ್ರದ ಶಾಸಕಿ ಸುಗುಣಮ್ಮ ಕುಟುಂಬ ಸದಸ್ಯರ ಜತೆಗೂಡಿ ಕಾವೇರಿ ನದಿಯಲ್ಲಿ ಸ್ನಾನ ಮಾಡಿದರು.

ಇಲ್ಲಿನ ಸ್ನಾನ ಘಟ್ಟದ ಬಳಿ ಸ್ನಾನ ಮಾಡಿ ನಾರು ಮಡಿಯಲ್ಲಿ ಕಾವೇರಿಗೆ ಬಾಗಿನ ಅರ್ಪಿಸಿದರು. ಇದಕ್ಕೂ ಮುನ್ನ ಸಚಿವ ಪೈಡಿಕೊಂಡಲ ಮಾಣಿಕ್ಯಾಲರಾವ್‌ ಅಗಲಿದ ತಮ್ಮ ಪಿತೃಗಳಿಗೆ ಪಿಂಡ ಪ್ರದಾನ ಮಾಡಿದರು. ಅಲ್ಲಿಂದ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

‘ಕಳೆದ ವರ್ಷ ಆಂಧ್ರಪ್ರದೇಶದಲ್ಲಿ ನಡೆದ ಕೃಷ್ಣಾ ನದಿಯ ಮಹಾ ಪುಷ್ಕರದ ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದ ಸಚಿವ ಪೈಡಿಕೊಂಡಲ ಮಾಣಿಕ್ಯಾಲರಾವ್‌ ಮಹಾ ಪುಷ್ಕರವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು’ ಎಂದು ಸಚಿವರ ಆಪ್ತರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಸಂಸ್ಕಾರ ಭಾರತಿ ಸಂಘಟನೆ ಕರ್ನಾಟಕ ಕ್ಷೇತ್ರೀಯ ಅಧ್ಯಕ್ಷ ಪ.ರಾ. ಕೃಷ್ಣಮೂರ್ತಿ. ಆಂಧ್ರಪ್ರದೇಶದ ಕೈಂಡ್‌ನೆಸ್‌ ಸೊಸೈಟಿ ಅಧ್ಯಕ್ಷ ಮಾಣಿಕ್ಯಲರಾವ್‌, ಕಮ್ಮವಾರಿ ಸಂಘದ ಅಧ್ಯಕ್ಷ ಜಿ. ರಾಮಕೃಷ್ಣ ಮೊದಲಾದವರೂ ನದಿಯಲ್ಲಿ ಮಿಂದು ಸೂರ್ಯ ನಮಸ್ಕಾರ, ಕುಂಭ ಪೂಜೆ, ಮಹಾ ಗಣಪತಿ ಪೂಜೆ, ಗಂಗಾಜಲ ಪೂಜೆ ಇತರ ವಿಧಿ. ವಿಧಾನಗಳನ್ನು ನೆರವೇರಿಸಿದರು. ಪಟ್ಟಣ ಸೋಪಾನಕಟ್ಟೆ ಮಾತ್ರವಲ್ಲದೆ ದೊಡ್ಡ ಗೋಸಾಯಿ ಘಾಟ್‌, ಪಶ್ಚಿಮ ವಾಹಿನಿ, ಗಂಜಾಂ ನಿಮಿಷಾಂಬಾ ದೇವಾಲಯ ಇತರೆಡೆಯೂ ಭಕ್ತರು ಪುಣ್ಯ ಸ್ನಾನ ಮಾಡಿದರು.

ಗುರುವಾರ ಸಂಜೆ ಸಂಸ್ಕೃತಿ ಚಿಂತಕ ಪಾವಗಡ ಪ್ರಕಾಶ್‌ ‘ಗಂಗಾವತರಣ’ ಕುರಿತು ಉಪನ್ಯಾಸ ನೀಡಿದರು. ಕಾವೇರಿ ಪುಷ್ಕರದ ಸಂಚಾಲಕ ಡಾ.ಭಾನುಪ್ರಕಾಶ್‌ ಶರ್ಮಾ ನೇತೃತ್ವದಲ್ಲಿ ಶೋಡಷೋಪಚಾರ ಪೂಜೆ, ಅರ್ಘ್ಯ ಸಮರ್ಪಣೆ ಮೊದಲಾದ ಸಾಂಪ್ರದಾಯಿಕ ಆಚರಣೆಗಳು ನಡೆದವು. ‘ಕಾವೇರಿ ಮಹಾ ಪುಷ್ಕರಕ್ಕೆ ಶನಿವಾರ ತೆರೆ ಬೀಳಲಿದ್ದು, ಸಂಜೆ 5 ಕ್ಕೆ ಹಿರೇಮಗಳೂರು ಕಣ್ಣನ್‌ ಅವರಿಂದ ಉಪನ್ಯಾಸ ಏರ್ಪಡಿಸಲಾಗಿದೆ’ ಎಂದು ಅಭಿನವ ಭಾರತ್‌ ತಂಡದ ಮುಖ್ಯಸ್ಥ ಕೆ.ಎಸ್‌.ಲಕ್ಷ್ಮೀಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.