ADVERTISEMENT

ಇತಿಹಾಸದ ಕುರುಹುಗಳ ದುಸ್ಥಿತಿಗೆ ಮರುಕ

ಶ್ರೀರಂಗಪಟ್ಟಣ: ಸ್ಮಾರಕಗಳ ಜತೆ ಮೌನ ಮಾತುಕತೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 10:59 IST
Last Updated 23 ಏಪ್ರಿಲ್ 2018, 10:59 IST

ಶ್ರೀರಂಗಪಟ್ಟಣ: ಪಟ್ಟಣ ಹಾಗೂ ಆಸುಪಾಸಿನಲ್ಲಿ ಭಾನುವಾರ ಸ್ಮಾರಕಗಳ ಜತೆ ಮೌನ ಮಾತುಕತೆ ನಡೆಯಿತು.

ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.20ರವರೆಗೆ ಇತಿಹಾಸ ತಜ್ಞರು ಹಾಗೂ ಇತಿಹಾಸ ಪ್ರಿಯರು ವಿವಿಧ ಸ್ಮಾರಕಗಳಿಗೆ ಭೇಟಿ ನೀಡಿ ಸ್ಮಾರಕಗಳ ಮಗ್ಗುಲಲ್ಲಿ ಕುಳಿತು ಪರಸ್ಪರ ಚರ್ಚಿಸಿದರು.

ಹಿರಿಯ ಸಾಹಿತಿ ಪ್ರೊ.ಎಂ.ಕರಿಮುದ್ದೀನ್‌ ಇತಿಹಾಸ ಪ್ರಿಯರಿಗೆ ಕಾವೇರಿ– ಲೋಕಪಾವನಿ ಸಂಗಮ ಸ್ಥಳ, ಕರ್ನಲ್‌ ಬೇಯ್‌ಲಿ ಸೆನಟೋಪ್‌, ಗುಂಬಸ್‌ ರಸ್ತೆಯಲ್ಲಿರುವ ಡವ್‌ಕೋಟ್‌, ಚಮನ್‌ ಬಯಲು ಅರಮನೆ ಅವಶೇಷ, ಗುಲಾಂ ಅಲಿಖಾನ್‌ ಗುಂಬಸ್‌ ಹಾಗೂ ಯೂರೋಪಿಯನ್ನರ ಸಮಾಧಿಗಳ ಬಗ್ಗೆ ತಳಸ್ಪರ್ಶಿ ಮಾಹಿತಿ ನೀಡಿದರು.

ADVERTISEMENT

ಡವ್‌ಕೋಟ್‌ ಕುಸಿದಿರುವುದು, ಚಮನ್‌ ಬಯಲಿನ ಅರಮನೆ ಅವಶೇಷಗಳು, ಗುಲಾಂ ಅಲಿಖಾನ್‌ ಗುಂಬ್ಚಿ ಶಿಥಿಲವಾಗಿರುವ ಕುರಿತು ತಂಡ ಮರುಕ ವ್ಯಕ್ತಪಡಿಸಿತು. ‘ಅಂಚೆ ವ್ಯವಸ್ಥೆ ಇಲ್ಲದ ಟಿಪ್ಪು ಸುಲ್ತಾನ್‌ ಕಾಲದಲ್ಲಿ ಪಾರಿವಾಳಗಳನ್ನು ಪತ್ರಗಳ ರವಾನೆಗೆ ಬಳಸಲಾಗುತಿತ್ತು. ಅವುಗಳ ವಾಸ ಸ್ಥಾನಕ್ಕೆ ಪ್ರತ್ಯೇಕ ಮನೆ (ಡವ್‌ಕೋಟ್‌) ನಿರ್ಮಿಸಲಾಗಿತ್ತು. ಈ ಮಾದರಿಯ ಒಂದು ಸ್ಮಾರಕ ಇಲ್ಲಿ ಹೇಗೆ ಕುಸಿದು ಬಿದ್ದಿದೆ ನೋಡಿ’ ಎಂದು ಕರಿಮುದ್ದೀನ್‌ ತೋರಿಸಿದರು.

‘ಇಲ್ಲಿನ ಸೆರಮನೆಯಲ್ಲಿ ಬಂಧಿಯಾಗಿ ಇಲ್ಲೇ ಕೊನೆಯುಸಿರೆಳೆದ ಕರ್ನಲ್‌ ಬೇಯ್‌ಲಿ ಹೆಸರಿನಲ್ಲಿ ಬ್ರಿಟಿಷರು ನಿರ್ಮಿಸಿರುವ ಸ್ಮಾರಕದ (ಸೆನಟೋಪ್‌) ಬಗ್ಗೆ ಸ್ಥಳೀಯರಿಗೇ ಮಾಹಿತಿ ಇಲ್ಲ. ಇಂತಹ ವಿಶೇಷ ಸ್ಮಾರಕದ ಬಗ್ಗೆ ಪ್ರಚಾರ ಮಾಡಬೇಕು’ ಎಂದು ಕುಂತಿಬೆಟ್ಟ ಚಂದ್ರಶೇಖರ್‌ಯ್ಯ ಹೇಳಿದರು.

ಗುಂಬಸ್‌ ಸಮೀಪದ ಚಮನ್‌ ಬಯಲು ಪ್ರದೇಶದಲ್ಲಿರುವ ಅರಮನೆಯ ಅವಶೇಷಗಳನ್ನು ಇತಿಹಾಸಪ್ರಿಯರ ತಂಡ ವೀಕ್ಷಿಸಿತು.

ಇಲ್ಲಿನ ಚಂದಗಾಲು ರಸ್ತೆಯಲ್ಲಿರುವ ಗುಲಾಂ ಅಲಿಖಾನ್‌ ಗುಂಬ್ಚಿಗೂ ಭೇಟಿ ನೀಡಿದ್ದ ತಂಡ ಬೃಹತ್‌ ಸ್ಮಾರಕ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಬಗ್ಗೆ ಖೇದ ವ್ಯಕ್ತಪಡಿತು. ಟಿಪ್ಪು ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಲಂಗ್ಡೆ ಗುಮಾಂ ಅಲಿಖಾನ್‌ ಕಾವೇರಿ ನದಿ ದಡದಲ್ಲಿ 5 ದ್ವಾರಗಳ ಗುಂಬಸ್‌ ನಿರ್ಮಿಸಿದ್ದು, ಆತ ಷಿಯಾ ಪಂಗಡಕ್ಕೆ ಸೇರಿದವನು ಎಂಬ ಕಾರಣಕ್ಕೆ ಈ ಸ್ಮಾರಕವನ್ನು ನಿರ್ಲಕ್ಷಿಸಲಾಗಿದೆ. ಈ ಗುಂಬಸ್‌ನ ಅರ್ಧ ಭಾಗ ಕುಸಿದು ಬಿದ್ದಿದ್ದು ಉಳಿದ ಭಾಗದಲ್ಲಿ ಕೂಡ ಬಿರುಕು ಮೂಡಿರುವುದನ್ನು ಕಂಡ ಈ ತಂಡದ ಡಾ.ಕೆ.ವೈ ಶ್ರೀನಿವಾಸ್‌, ಕುಂತಿಬೆಟ್ಟ ಚಂದ್ರಶೇಖರಯ್ಯ, ಧನ್ಯಕುಮಾರ್‌, ಜಯಶಂಕರ್‌ ಇತರರು ಪ್ರವಾಸೋದ್ಯಮ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಗ್ಯಾರಿಸನ್‌ ಸೆಮಟರಿ (ಯೂರೋಪಿಯನ್ನರ ಸಮಾಧಿ) ಸ್ಥಳಕ್ಕೆ ಭೇಟಿ ನೀಡಿದ್ದ ತಂಡ ಪ್ರತಿ ಸಮಾಧಿಯ ಬಳಿ ತೆರಳಿ ಅವುಗಳ ಮೇಲೆ ಅಮೃತ ಶಿಲೆಯಿಂದ ಕೆತ್ತಿರುವ ಮಾಹಿತಿಯನ್ನು ಸಂಗ್ರಹಿಸಿತು. 1799ರ ನಾಲ್ಕನೇ ಆಂಗ್ಲೋ– ಮೈಸೂರು ಯುದ್ಧದ ನಂತರ ಮೈಸೂರು ಹಾಗೂ ಶ್ರೀರಂಗಪಟ್ಟಣದಲ್ಲೇ ಉಳಿದ, 1800ರಿಂದ 1860ರವರೆಗೆ ಮೃತಪಟ್ಟ ಯೂರೋಪಿನ ವಿವಿಧ ದೇಶಗಳ ಸೈನಿಕರು ಮತ್ತು ಅವರ ಕುಟುಂಬದ ಸದಸ್ಯರ 250ಕ್ಕೂ ಹೆಚ್ಚು ಸಮಾಧಿಗಳು ಇಲ್ಲಿದ್ದು ಅವುಗಳ ಬಗ್ಗೆಯೂ ಪ್ರೊ.ಎಂ. ಕರಿಮುದ್ದೀನ್‌ ವಿವರ ನೀಡಿದರು.

ಬೆಂಗಳೂರಿನ ಬಿಜಿಎಸ್‌ ಆಸ್ಪತ್ರೆಯ ಪ್ರಾಧ್ಯಾಪಕ ಕೃಷ್ಣ ಮಾತನಾಡಿ, ‘ರಾಜಸ್ಥಾನದಲ್ಲಿ ಕೋಟೆ ಇತರ ಸ್ಮಾರಕಗಳನ್ನು ವೈಜ್ಞಾನಿಕವಾಗಿ ಸಂರಕ್ಷಿಸಲಾಗಿದೆ. ಮಹತ್ವದ ಐತಿಹಾಸಿಕ ಕುರುಹುಗಳನ್ನು ತನ್ನ ಒಡಲಲ್ಲಿ ತುಂಬಿಕೊಂಡಿರುವ ಶ್ರೀರಂಗಪಟ್ಟಣವನ್ನು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಗೆ ತರಬಹುದು. ಆದರೆ, ಇಲ್ಲಿನ ಸ್ಮಾರಕಗಳ ಸ್ಥಿತಿ ನೋಡಿದರೆ ಅಯ್ಯೋ ಎನಿಸುತ್ತದೆ. ಪ್ರಾಚ್ಯವಸ್ತು ಮತ್ತು ಪ್ರವಾಸೋದ್ಯಮ ಇಲಾಖೆಗಳು ನಿದ್ದೆ ಮಾಡುತ್ತಿವೆಯೆ?’ ಎಂದು ಅವರು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.