ADVERTISEMENT

ಎಲ್ಲ ವರ್ಗದ ಜನ ಒಗ್ಗಟ್ಟಾದರೆ ದೇಶದ ಅಭಿವೃದ್ಧಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2017, 5:05 IST
Last Updated 15 ಏಪ್ರಿಲ್ 2017, 5:05 IST

ಮಂಡ್ಯ: ಸಮಾಜದಲ್ಲಿ ಎಲ್ಲ ವರ್ಗದವರು ಒಗ್ಗಟ್ಟಾಗಿದ್ದರೆ ದೇಶದ ಅಭಿವೃದ್ಧಿ ಸಾಧ್ಯ ಎಂದು ಬಿ.ಆರ್‌.ಅಂಬೇಡ್ಕರ್‌ ಅವರು ಸಂವಿಧಾನದ ಮೂಲಕ ಪ್ರತಿಪಾದಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ. ಕೃಷ್ಣಪ್ಪ ಹೇಳಿದರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿನ ಉದ್ಯಾನದಲ್ಲಿ ಶುಕ್ರವಾರ ನಡೆದ ಬಿ.ಆರ್‌. ಅಂಬೇಡ್ಕರ್‌ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

ಜಾತಿ ವ್ಯವಸ್ಥೆಗೆ ಸ್ವತಃ ಅಂಬೇಡ್ಕರ್‌ ಅವರೇ ನಲುಗಿ ಹೋಗಿದ್ದರು. ಇದನ್ನು ಮನಗಂಡ ಅವರು ನನ್ನ ಜನ ಶಿಕ್ಷಣವಂತರಾಗಬೇಕು, ಸಂಘಟಿತರಾಗಬೇಕು, ಹಕ್ಕಿಗಾಗಿ ಹೋರಾಟ ಮಾಡಬೇಕು ಎಂದು ಮಲಗಿದ್ದವರನ್ನು ಎಬ್ಬಿಸಿ ಹೋರಾಟ ಕಿಚ್ಚು ಹಚ್ಚಿಸಿದ ಒಬ್ಬ ಮಹಾನ್‌ ಚೇತನ ಎಂದು ಸ್ಮರಿಸಿದರು.

ಅಂಬೇಡ್ಕರ್‌ ಅವರು ಸಾಮಾಜಿಕ ನ್ಯಾಯದ ಹರಿಕಾರರಾಗುವ ಮೂಲಕ ವಿಶ್ವಕ್ಕೆ ಮಾದರಿ ಆಗುವ ಉತ್ಕೃಷ್ಟ ಸಂವಿಧಾನ ರಚಿಸಿದರು. ಆ ಮೂಲಕ ಜಾತಿ ವ್ಯವಸ್ಥೆ, ಅಸ್ಪೃಶ್ಯತೆ ನಿರ್ಮೂಲನೆ ಪ್ರಯತ್ನಿಸಿದ್ದರು. ದಲಿತರು ಹಾಗೂ ಸಾಮಾಜಿಕವಾಗಿ ಹಿಂದುಳಿದವರಿಗೆ ನ್ಯಾಯ ದೊರಕಿಸಿಕೊಟ್ಟರು ಎಂದು ಹೇಳಿದರು.

ADVERTISEMENT

ಪರಿಶಿಷ್ಟ ಜಾತಿ ಹಾಗೂ ಬುಡಕಟ್ಟು ಉಪ ಯೋಜನೆಯನ್ನು ರಾಜ್ಯ ಸರ್ಕಾರ ಜಾರಿಗೆ ತರುವ ಮೂಲಕ ದೇಶಕ್ಕೆ ಮಾದರಿ ಆಗಿದೆ. 33 ಅಭಿವೃದ್ಧಿ ಇಲಾಖೆಗಳಿಗೆ ಈ ಯೋಜನೆಗೆ ₹ 174.97 ಕೋಟಿ ಅನುದಾನ ಒದಗಿಸಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಅಂಬರೀಷ್‌, ‘ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಲ್ಲಿದ್ದಾಗ ಮೈಷುಗರ್‌ ಕಾರ್ಖಾನೆ ಮುಚ್ಚಿತ್ತು ಎಂಬ ಕೊರಗು ನನಗೆ ಕಾಡುತ್ತಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಕೃಷ್ಣಪ್ಪ ಅವರ ಶ್ರಮದ ಫಲವಾಗಿ ಅಂಬೇಡ್ಕರ್‌ ಜಯಂತಿಯಂದು ಕಾರ್ಖಾನೆ ಆರಂಭವಾಗಿರುವುದು ನನ್ನ ಕೊರಗನ್ನು ದೂರ ಮಾಡಿದೆ’ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಮಾತನಾಡಿದರು.ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ, ಉಪಾಧ್ಯಕ್ಷೆ ಸುಜಾತಮಣಿ, ತಾ.ಪಂ. ಅಧ್ಯಕ್ಷ ಕೆ.ಎಂ. ಬೀರಪ್ಪ, ಸದಸ್ಯ ರಾಮಲಿಂಗಯ್ಯ, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್‌. ಪೂರ್ಣಿಮಾ, ಜಿ.ಪಂ. ಸಿಇಒ ಬಿ. ಶರತ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸುಧೀರ್‌ಕುಮಾರ್‌ ರೆಡ್ಡಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಬಿ. ಮಾಲತಿ, ಮುಖಂಡರಾದ ವೆಂಕಟಗಿರಿಯಯ್ಯ, ಎಂ.ಬಿ. ಶ್ರೀನಿವಾಸ್‌, ರಾಜು, ಚಂದ್ರಶೇಖರ್‌ ಉಪಸ್ಥಿತರಿದ್ದರು.ಸಂಪತ್ತಿನ ಸಮಾನ ಹಂಚಿಕೆಯಿಂದ ಜಾತಿ ನಿರ್ಮೂಲನೆ

ಭಾರತೀನಗರ:  ದೇಶದ ಆಸ್ತಿ ಮತ್ತು ಸಂಪತ್ತಿನ ಸಮಾನ ಹಂಚಿಕೆಯಿಂದ ಮಾತ್ರ ಜಾತಿ ನಿರ್ಮೂಲನೆ ಸಾಧ್ಯ ಎಂದು ಬಿಎಸ್‌ಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಕೃಷ್ಣಮೂರ್ತಿ ಹೇಳಿದರು.ಸಮೀಪದ ಗುಡಿಗೆರೆ ಬಿಸಿಎಂ ಹಾಸ್ಟೆಲ್‌ನಲ್ಲಿ ಸಮಾಜ ಕಲ್ಯಾಣ ಇಲಾಖೆ ಶುಕ್ರವಾರ ಆಯೋಜಿಸಿದ್ದ ‘ಅಂಬೇಡ್ಕರ್‌್ ಜ್ಞಾನ ದರ್ಶನ ಅಭಿಯಾನ’ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.


ಸರ್ಕಾರಿ ಮಹಿಳಾ ಕಾಲೇಜಿನ ಉಪನ್ಯಾಸಕಿ ಕೆ.ಸೌಭಾಗ್ಯಾ, ದಸಂಸ ತಾಲ್ಲೂಕು ಸಂಚಾಲಕ ಗುಡಿಗೆರೆ ಬಸವರಾಜು, ಸಂಪನ್ಮೂಲ ವ್ಯಕ್ತಿಗಳಾದ ಸಿ.ಕೆ.ನಾಗರಾಜು, ಅಭಿಗೌಡ ಹನಕೆರೆ, ವಜ್ರಮುನಿ, ಬಿಸಿಎಂ ಅಧಿಕಾರಿ ಮಂಜುನಾಥ್‌ ನಾಯ್ಡು, ಕುದರಗುಂಡಿ ಸ್ವಾಮಿ, ಮಹೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.