ADVERTISEMENT

ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಸೂಕ್ತ ಸಿದ್ಧತೆ ಬೇಕು

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2016, 4:55 IST
Last Updated 28 ಡಿಸೆಂಬರ್ 2016, 4:55 IST

ಕೆರಗೋಡು: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಸಜ್ಜುಗೊಳಿಸಬೇಕು ಎಂದು ವಿಜ್ಞಾನ ಶಿಕ್ಷಕರಿಗೆ ಮಂಡ್ಯ ಉತ್ತರವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎನ್. ಮಂಜುನಾಥ್ ಹೇಳಿದರು.

ಸಮೀಪದ ಶಿವಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದ ವಿಜ್ಞಾನ ವಿಷಯ ಶಿಕ್ಷಕರ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಶಾಲೆಗಳಲ್ಲಿ ಹತ್ತನೇ ತರಗತಿ ಫಲಿತಾಂಶ ಸುಧಾರಿಸಿದೆ. ಆದರೆ, ಹೆಚ್ಚಿನ ಅಂಕಗಳು ಸಿಕ್ಕಾಗ ಮಾತ್ರ ಉನ್ನತಮಟ್ಟದ ಕೋರ್ಸ್‌ಗಳಿಗೆ ಸೇರಲು ಅವಕಾಶ ಸಿಗುತ್ತದೆ. ಈ ನಿಟ್ಟಿನಲ್ಲಿ ವಿಶೇಷ ತರಗತಿಗಳು, ಗುಂಪು ಅಧ್ಯಯನ ಮತ್ತು ಪೋಷಕರ ಜತೆ ಮಕ್ಕಳ ಶೈಕ್ಷಣಿಕ ಮಟ್ಟದ ಚರ್ಚೆಗಳನ್ನು ನಡೆಸಬೇಕು ಎಂದು ಸಲಹೆ ನೀಡಿದರು.

ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪಾಸಿಂಗ್ ಪ್ಯಾಕೇಜ್ ವಿಧಾನದ ಮೂಲಕ ತೇರ್ಗಡೆ ಹೊಂದಲು ಸೂಕ್ತ ಯೋಜನೆ ತಯಾರಿಸಿ ಅಭ್ಯಾಸ ನಡೆಸಬೇಕು ಎಂದರು.
ನಂತರ ನಡೆದ ಕಾರ್ಯಾಗಾರದಲ್ಲಿ ವಿಜ್ಞಾನ ಶಿಕ್ಷಕರಿಗೆ ನೀಲನಕ್ಷೆ ತಯಾರಿಕೆ, ಪಾಠಗಳಲ್ಲಿ ಅಳವಡಿಸಿಕೊಳ್ಳಬೇಕಾದ ಸರಳ ಚಟುವಟಿಕೆಗಳು, ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ‘ಟಾರ್ಗೆಟ್ 40’ ಪರೀಕ್ಷಾ ವಿಧಾನಗಳು ಸೇರಿದಂತೆ ಹಲವು ವಿಷಯಗಳನ್ನು ಸಂಪನ್ಮೂಲ ವ್ಯಕ್ತಿಗಳಾದ ತೋಂಟದಾರ್ಯಸ್ವಾಮಿ ಮತ್ತು ಜಯಶ್ರೀ ತಿಳಿಸಿಕೊಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯಶಿಕ್ಷಕ ಡಿ.ಎಸ್.ಚಂದ್ರಶೇಖರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ  ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಉಮಾ ಶಂಕರ, ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಜ್ಞಾನ ವಿಷಯ ಪರಿವೀಕ್ಷಕಿ ರಾಜಮಣಿ, ಕೆ.ಆರ್. ಶಶಿಧರ, ಶಿಕ್ಷಕರಾದ ಎಸ್.ವಿಜಯಕುಮಾರ್, ಡಿ.ಆರ್.ಈರಪ್ಪ, ರಾಘವೇಂದ್ರ, ಲಕ್ಷ್ಮಣ್ ಬಹದ್ದೂರ್, ಕುಸುಮಾ, ಎಸ್‌ಡಿಎಂಸಿ ಸದಸ್ಯರಾದ ಶಾರದಮ್ಮ, ಉಮಾ ಹಾಗೂ ತಾಲ್ಲೂಕಿನ ವಿಜ್ಞಾನ ಶಿಕ್ಷಕರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.