ADVERTISEMENT

ಕರ್ನಾಟಕ ತಿಳಿಯಲು ದೇಜಗೌ ಕೃತಿ ಓದಿ

ದೇಜಗೌ ಸಂಸ್ಮರಣೆ ಹಾಗೂ ಕನ್ನಡ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಸಾಹಿತಿ ಸಿ.ಪಿ.ಕೆ ಅಭಿಮತ

​ಪ್ರಜಾವಾಣಿ ವಾರ್ತೆ
Published 30 ಜನವರಿ 2017, 7:16 IST
Last Updated 30 ಜನವರಿ 2017, 7:16 IST
ಮಂಡ್ಯ: ‘ಭರತ ಖಂಡ ಅರಿತುಕೊಳ್ಳಲು ಸ್ವಾಮಿ ವಿವೇಕಾನಂದರ ಸಂದೇಶ ಓದಬೇಕು. ಕರ್ನಾಟಕದ ಬಗ್ಗೆ ತಿಳಿಯಲು ದೇಜಗೌ ಅವರ ಕೃತಿ ಅಧ್ಯಯನ ಮಾಡಬೇಕು’ ಎಂದು ಸಾಹಿತಿ ಸಿ.ಪಿ. ಕೃಷ್ಣಕುಮಾರ್‌ ಹೇಳಿದರು.
 
ನಗರದ ಗಾಂಧಿ ಭವನದಲ್ಲಿ ಜಿಲ್ಲಾ ಯುವ ಬರಹಗಾರರ ಬಳಗದ ವತಿಯಿಂದ ಭಾನುವಾರ ನಡೆದ ನಾಡೋಜ ಡಾ. ದೇಜಗೌ ಸಂಸ್ಮರಣೆ ಹಾಗೂ ಕನ್ನಡ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
 
ದೇಜಗೌ ಅವರು ಕನ್ನಡ ಪ್ರಪಂಚದ ಪ್ರಾತಿನಿಧಿಕ ಚೇತನರಾಗಿದ್ದರು. ಅವರನ್ನು ಕನ್ನಡದ ನಿಧಿ ಎಂದೇ ಹೇಳಬಹುದು. ಕನ್ನಡದ ಏಳಿಗೆಗಾಗಿ ಶ್ರಮಿಸಿದ ಮಹಾನ್‌ ನಾಯಕ ಎಂದರೆ ತಪ್ಪಾಗಲಾರದು. ಭೌತಿಕವಾಗಿ ಇಲ್ಲದಿದ್ದರೂ ಮನಸಿನಲ್ಲಿ ಸದಾನೆಲೆಸಿದ್ದಾರೆ ಎಂದು ಹೇಳಿದರು.
 
ಕನ್ನಡಕ್ಕಾಗಿ ಹೋರಾಟ ಮಾಡುತ್ತಲೇ ಕನ್ನಡಕ್ಕೆ ರಾಷ್ಟ್ರೀಯ ಸ್ಥಾನಮಾನ ತಂದುಕೊಟ್ಟರು. ಕನ್ನಡಕ್ಕೆ ಅಪಮಾನವಾದರೆ ಸಹಿಸುತ್ತಿರಲಿಲ್ಲ. ಕನ್ನಡದ ಉಳಿವಿಗಾಗಿ ಎಲ್ಲವನ್ನು ಅರ್ಪಿಸಿ ಧನ್ಯರಾಗಿ ಕನ್ನಡದಿಂದಲೇ ಮುಕ್ತಿ ಪಡೆದವರು ದೇಜಗೌ ಎಂದು ತಿಳಿಸಿದರು.
 
ದೇಜಗೌ ಅವರು ಕುವೆಂಪು ಅವರ ಮಾನಸ ಪುತ್ರರಾಗಿದ್ದರು. ಮೈಸೂರು ವಿವಿಯ ಕುಲಪತಿ ಆಗಿದ್ದಾಗ ಮೂರು ವಿವಿಗಳನ್ನು ಸ್ಥಾಪಿಸಿದ ಕೀರ್ತಿ ದೇಜಗೌ ಅವರದ್ದಾಗಿದೆ. ಅವರ ಕಾಯಕ, ಹೋರಾಟವನ್ನು ಇಂದಿನ ಯುವ ಪೀಳಿಗೆಯು ಅಳವಡಿಸಿಕೊಳ್ಳಬೇಕು ಎಂದು ಸಲೆಹೆ ಮಾಡಿದರು.
 
ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
 
ಡಾ. ದೇಜಗೌ ಜ್ಞಾನ ವಾಹಿನಿ ಅಕಾಡೆಮಿ ಅಧ್ಯಕ್ಷ ಡಾ.ಡಿ. ತಿಮ್ಮಯ್ಯ, ಕೆಂಪೇಗೌಡ ಕ್ರೆಡಿಟ್ ಕೋ-ಆಪರೇಟಿವ್ ಬ್ಯಾಂಕ್‌ ಅಧ್ಯಕ್ಷ ಬಿ. ಕೃಷ್ಣಪ್ಪ, ಕೃಷಿಕ್ ಲಯನ್ ಸಂಸ್ಥೆಯ ಕೆ.ಟಿ. ಹನುಮಂತು, ಬಿಜೆಪಿ ನಗರ ಘಟಕ ಅಧ್ಯಕ್ಷ ಎಚ್.ಆರ್. ಅರವಿಂದ್, ಜನಪರ ಕ್ರಿಯಾ ವೇದಿಕೆ ಅಧ್ಯಕ್ಷ ಎಂ.ಬಿ. ನಾಗಣ್ಣಗೌಡ, ಬಳಗದ ಅಧ್ಯಕ್ಷ ಟಿ. ಸತೀಶ್‌ ಜವರೇಗೌಡ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.