ADVERTISEMENT

ಕಲೆಗೆ ಕಾಲು, ಕಿವಿ, ಭಾಷೆ ಬೇಕಿಲ್ಲ...

ಎಂ.ಎನ್.ಯೋಗೇಶ್‌
Published 3 ಡಿಸೆಂಬರ್ 2017, 5:10 IST
Last Updated 3 ಡಿಸೆಂಬರ್ 2017, 5:10 IST
ಮರದ ಜೊತೆ ರಾಜು
ಮರದ ಜೊತೆ ರಾಜು   

ಮಂಡ್ಯ: ತೊದಲು ನುಡಿಯುತ್ತಾ ಅಂಬೆಗಾಲಿಡುತ್ತಿದ್ದ ಎರಡೂವರೆ ವರ್ಷದ ಮಗುವಿನ ಕಾಲುಗಳ ಮೇಲೆ ಮಲೈಮಹಾದೇಶ್ವರ ಬೆಟ್ಟಕ್ಕೆ ಹೊರಟಿದ್ದ ‘ಶಂಭುಲಿಂಗೇಶ್ವರ ಬಸ್‌’ ಹರಿಯಿತು. ಎರಡೂ ಕಾಲು ತುಂಡಾದವು. ದೇಹದ ವಿವಿಧೆಡೆ ಆರು ಶಸ್ತ್ರಚಕಿತ್ಸೆ ಮಾಡಿ ವೈದ್ಯರು ಮಗುವಿನ ಪ್ರಾಣ ಉಳಿಸಿದರು. ನರಮಂಡಲದ ವ್ಯತ್ಯಾಸದಿಂದಾಗಿ ಮಗುವಿನ ಮಾತು ಹೋದವು, ಕಿವಿ ಕೇಳದಾದವು. ಶಿಶುವಿಹಾರಕ್ಕೆ ಹೊರಟಿದ್ದ ಮಗು ಮತ್ತೆ ಶಾಲೆಯ ಮೆಟ್ಟಿಲು ಹತ್ತಲಿಲ್ಲ. ಮಾಂಸದ ಮುದ್ದೆಯಾಗಿದ್ದ ಮಗುವನ್ನು ಹತ್ತು ವರ್ಷಗಳ ಕಾಲ ಆಸ್ಪತ್ರೆಯಿಂದ ಆಸ್ಪತ್ರೆಗೆ ಹೊತ್ತು ಪೋಷಕರು ಜೀವ ತುಂಬಿದರು.

ಮಂಡ್ಯದ ಗಾಂಧಿನಗರ 8ನೇ ಕ್ರಾಸ್‌ನಲ್ಲಿ ಅಮ್ಮನ ಜೊತೆ ವಾಸಿಸು ತ್ತಿರುವ, 28 ವರ್ಷ ವಯಸ್ಸಿನ ರಾಜು ಎಲ್ಲರ ಪ್ರೀತಿಯ ಯುವಕ. ಎರಡೂವರೆ ವರ್ಷದ ಮಗುವಾಗಿದ್ದಾಗ ಕಾಲು ಕಳೆದುಕೊಂಡು, ಈಗ ಎರಡೂವರೆ ಅಡಿ ಇದ್ದಾರೆ. ಮಂಡಿಯಲ್ಲೇ ಪ್ರತಿ ನಿತ್ಯ ಏಳೆಂಟು ಕಿ.ಮೀ ನಡೆದು, ಎಲ್ಲರ ಸ್ಫೂರ್ತಿಯ ಚಿಲುಮೆ.

ಚಪ್ಪಲಿಗಳನ್ನು ತಾವೇ ವಿನ್ಯಾಸ ಮಾಡಿ ಕೊಂಡಿ ದ್ದಾರೆ. ನಗುಮೊಗದಲ್ಲಿ ನೋವಿಲ್ಲ, ಕನಸು ಗಳಿವೆ. ಕಣ್ಣು ಹಾಗೂ ಕೈಗಳು ರಾಜುವಿನ ಆಯುಧಗಳು. ಶಂಭುಲಿಂಗೇಶ್ವರ ಬಸ್‌ ಚಕ್ರದೊಳಗಿಂದ ಬದುಕಿ ಬಂದ ನಂತರ ಉಳಿದದ್ದು ಕಣ್ಣು ಹಾಗೂ ಕೈಗಳು ಮಾತ್ರ. ಸದಾ ಪೆನ್ಸಿಲ್‌ ಜೊತೆ ಕಾಲಕಳಿಯುತ್ತಿದ್ದ ರಾಜು, ನೋಡಿದ್ದನ್ನು ಕಣ್ಣಿಗೆ ಕಟ್ಟಿದಂತೆ ಕಲೆಗಿಳಿಸುತ್ತಾರೆ. ಮರದಲ್ಲಿ ಅತೀ ಸಣ್ಣ ಶಿವಲಿಂಗ ಕೆತ್ತುವ ಕಲೆಯಲ್ಲಿ ಹೆಸರುವಾಸಿ. ಮರದಿಂದ ನಂದಿ, ಗಣಪತಿ, ಲಕ್ಷ್ಮಿ, ಗಂಡಬೇರುಂಡ, ಹನು ಮಂತ ಮುಂತಾದ ವಿಗ್ರಹ ತಯಾರಿಸುವ ಮೂಲಕ ಶ್ರೇಷ್ಠ ಕುಶಲಕರ್ಮಿ.

ADVERTISEMENT

ಕಾವೇರಿನಗರ ಮುಖ್ಯ ರಸ್ತೆಯಲ್ಲಿ ಹೋಗುವ ಪ್ರತಿಯೊಬ್ಬರೂ ಇವರ ಕಡೆಗೆ ಕಣ್ಣರಳಿಸಿ ಮುಂದೆ ಹೋಗುತ್ತಾರೆ. ಲಕ್ಷ್ಮಿವೆಂಕಟೇಶ್ವರ ವುಡ್‌ ವರ್ಕ್ಸ್‌ ಅಂಗಡಿಯಲ್ಲಿ ಮರದ ತುಂಡುಗಳಲ್ಲಿ ಕಲೆ ಅರಳಿಸುತ್ತಾ ಎಲ್ಲರ ಗಮನ ಸೆಳೆಯುತ್ತಾರೆ. ಕಡೆದು ನಿಲ್ಲಿಸಿರುವ ಬಾಗಿಲು, ನಿಲ, ಕಾಲುಗಳನ್ನು ನೋಡಲು ಬಲು ಚೆಂದ. ಅವರ ಕೈಗಳು ಯಂತ್ರದಂತೆ ಮರವನ್ನು ಕಾರ್ಮಿಂಗ್‌ ಮಾಡುತ್ತವೆ. ಸೂಕ್ಷ್ಮಾತಿ ಸೂಕ್ಷ್ಮ ಕಲಾಕುಸುರಿ ಮನಸೂರೆಗೊಳ್ಳುತ್ತದೆ. ಲಕ್ಷ್ಮಿ ಚಿತ್ರವುಳ್ಳ ಬಾಗಿಲು ರಚಿಸುವಲ್ಲಿ ಪ್ರಸಿದ್ಧಿ ಪಡೆದಿದ್ದಾರೆ.

ಮೈಸೂರು, ಬೆಂಗಳೂರಿನವರೂ ಬಾಗಿಲು ಚಿತ್ರ ಮಾಡಿಸುತ್ತಾರೆ. ಬಾಗಿಲಿನ ಎರಡೂ ಕಡೆ ಸೊಂಡಿಲು ತೆರೆದ ಆನೆಗಳ ಚಿತ್ರ, ಕಮಲದ ಮೇಲೆ ಅರಳಿರುವ ಲಕ್ಷ್ಮಿ, ಸುತ್ತಲೂ ಮಲ್ಲಿಗೆಯ ಬಳ್ಳಿಯನ್ನು ಸೊಗಸಾಗಿ ಚಿತ್ರಿಸುತ್ತಾರೆ. ಯಾವುದೇ ಚಿತ್ರ ಕಂಡರೂ ಮೊದಲು ಪೆನ್ಸಿಲ್‌ ಸ್ಕೆಚ್‌ ಮಾಡಿಕೊಳ್ಳುತ್ತಾರೆ.

ನಂತರ ಮರದಿಂದ ಕಲಾಕೃತಿ ತಯಾರಿಸುತ್ತಾರೆ. ಹಲವು ಕ್ರಿಶ್ಚಿಯನ್‌ ಸಮುದಾಯದ ಜನರಿಗೆ ಏಸುವಿನ ಕಲಾಕೃತಿ ಮಾಡಿಕೊಟ್ಟಿದ್ದಾರೆ. ಜೊತೆಗೆ ಮಂಚದ ಕಾಲುಗಳ ಮೇಲೆ ಕಲೆ, ಟೀಪಾಯ್‌ ಮೇಲೆ ಎಲೆಗಳ ಚಿತ್ರ, ಕುರ್ಚಿ, ಮೇಜುಗಳ ಮೇಲೂ ಬಳ್ಳಿ ಚಿತ್ರ ಬಿಡಿಸಿದ್ದಾರೆ.

ರಂಗಿನ ರಂಗೋಲಿ: ರಾಜುಗೆ ರಂಗೋಲಿ ಎಂದರೆ ಬಲು ಇಷ್ಟ. ಗಣಪತಿ ಉತ್ಸವದ ಅಂಗವಾಗಿ ನಡೆಯುವ ರಂಗೋಲಿ ಸ್ಪರ್ಧೆಯಲ್ಲಿ ಬಹುಮಾನ ಪಡೆದಿದ್ದಾರೆ. ಚಿತ್ರವೊಂದನ್ನು ತೋರಿಸಿದರೆ ಸಾಕು, ಅದನ್ನು ಚುಕ್ಕಿಗಿಳಿಸಿ ರಂಗೋಲಿ ಬಿಡಿಸುತ್ತಾರೆ. 

* * 

ರಾಜು ಶ್ರಮಕ್ಕೆ ತಕ್ಕ ಪ್ರತಿಫಲವಿಲ್ಲ: ‘ಬಸ್‌ನೊಳಗೆ ಸಿಲುಕಿದ್ದ ಪಾಪು ವಿಲವಿಲನೆ ಒದ್ದಾಡುತ್ತಿತ್ತು. ಮಗು ಸತ್ತೇ ಹೋಯಿತು ಎಂದುಕೊಂಡಿದ್ದೆವು. ಆದರೆ, ರಾಜು ಬಸ್‌ ಚಕ್ರದೊಳಗಿಂದ ಬದುಕಿ ಬಂದಿದ್ದ. 12 ವರ್ಷ ಕೋರ್ಟ್‌ನಲ್ಲಿ ವ್ಯಾಜ್ಯ ನಡೆಯಿತು. ನಮಗೆ ಒಂದು ಕಿಲುಬು ಕಾಸೂ ಸಿಗಲಿಲ್ಲ.

ಬಸ್‌ ಮಾಲೀಕರು ಲಾಯರ್‌ಗಳನ್ನು ಖರೀದಿ ಮಾಡಿದ್ದರು. ರಾಜುವಿನ ತಂದೆ ಇದೇ ನೋವಿನಲ್ಲಿ ಕೊನೆಯುಸಿರೆಳೆದರು. ನಾನು ಒಂಟಿಯಾಗಿ 15 ವರ್ಷಗಳಿಂದ ಮಗನನ್ನು ಸಾಕಿದೆ. ರಾಜು ಎಂದಿಗೂ ಚಾಕೊಲೆಟ್‌ ಕೇಳಲಿಲ್ಲ, ಅವನು ಕೇಳುತ್ತಿದ್ದದ್ದು ಪೆನ್ಸಿಲ್‌, ಬಿಳಿ ಹಾಳೆ ಮಾತ್ರ. ಪೆನ್ಸಿನ್‌ನೊಂದಿಗೆ ಮುಳುಗಿಬಿಡುತ್ತಿದ್ದ.

ಈಗ ಅವನು ಮರಗೆಲಸದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಮಾಲೀಕರು ಅವನಿಂದ ಎಲ್ಲಾ ಕುಸುರಿ ಕೆಲಸ ಮಾಡಿಸಿಕೊಳ್ಳುತ್ತಾರೆ. ಆದರೆ ಸರಿಯಾಗಿ ಸಂಬಳ ಕೊಡುವುದಿಲ್ಲ. ನಮಗೂ ಬೇರೆ ಗತಿ ಇಲ್ಲ. ಕೊಟ್ಟಷ್ಟನ್ನು ಪಡೆಯುತ್ತೇವೆ’ ಎಂದು ರಾಜು ತಾಯಿ ರಾಜಮ್ಮ ನೋವಿನಿಂದ ನುಡಿಯುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.