ADVERTISEMENT

ಕಾಲೇಜು ಆವರಣದಲ್ಲಿ ಮೇಳ; ಪಾಠಕ್ಕೆ ಉದ್ಯಾನ

ಸಾರ್ವಜನಿಕರ ತೊಂದರೆ ನಿವಾರಿಸಲು ಅಧಿಕಾರಿಗಳು ಮುಂದಾಗಲಿ; ಸಾರ್ವಜನಿಕರ ಒತ್ತಾಯ

ಬಸವರಾಜ ಹವಾಲ್ದಾರ
Published 6 ಫೆಬ್ರುವರಿ 2017, 5:43 IST
Last Updated 6 ಫೆಬ್ರುವರಿ 2017, 5:43 IST
ಮಂಡ್ಯದ ಅಶೋಕನಗರದಲ್ಲಿರುವ ಆನೆ ಪಾರ್ಕ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರ ಚಿತ್ರ
ಮಂಡ್ಯದ ಅಶೋಕನಗರದಲ್ಲಿರುವ ಆನೆ ಪಾರ್ಕ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರ ಚಿತ್ರ   

ಮಂಡ್ಯ: ಕಾಲೇಜು ಆವರಣದಲ್ಲಿ ವಸ್ತು ಗಳ ಮಾರಾಟ ಮೇಳ, ಉದ್ಯಾನದಲ್ಲಿ ಗಾಯನ, ಉಪನ್ಯಾಸ, ಕ್ರೀಡಾಂಗಣದಲ್ಲಿ ವಿವಿಧ ಕಾರ್ಯಕ್ರಮ..!
ಜಾಗ ಇರುವುದರ ಉದ್ದೇಶ ಬೇರೆಯಾಗಿದ್ದರೆ, ಅದರ ಬಳಕೆಯಾಗುತ್ತಿರುವುದೇ ಅನ್ಯ ಉದ್ದೇಶಕ್ಕೆ. ಇಂತಹ ಅವಾಂತರಗಳಿಗೆ ಮಂಡ್ಯ ನಗರದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲು ಜಿಲ್ಲಾಡಳಿತ, ವಿವಿಧ ಇಲಾಖೆಗಳು ಕಾರಣ ಆಗುತ್ತಿವೆ.

ಇತ್ತೀಚಿನ ಮೂರು, ನಾಲ್ಕು ವರ್ಷಗಳಿಂದ ಕಾಲೇಜು ಮೈದಾನದಲ್ಲಿ ವಿವಿಧ ವಸ್ತುಗಳ ಮಾರಾಟ ಹಾಗೂ ವಿವಿಧ ಆಟದ ವಸ್ತುಗಳ ಮೇಳಕ್ಕೆ ಅನುಮತಿ ನೀಡಲಾಗುತ್ತಿದೆ. ಕಾಲೇಜು ಮೈದಾನದಲ್ಲಿ ಇಂತಹ ಮೇಳಕ್ಕೆ ಅವಕಾಶ ನೀಡುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ.

ತಿಂಗಳುಗಟ್ಟಲೆ ಮೇಳ ನಡೆಯುವುದರಿಂದ ಕಾಲೇಜು ಮಕ್ಕಳ ಆಟೋಟ ಮುಂತಾದ ಕಾರ್ಯಗಳಿಗೆ ಅಡ್ಡಿಯಾಗುತ್ತದೆ. ಮೈದಾನದಲ್ಲಿ ಅಲ್ಲಲ್ಲಿ ಆ ದಿನಗಳಲ್ಲಿ ಕಸದ ರಾಶಿ ಬೀಳುತ್ತಿರುತ್ತದೆ. ವಿದ್ಯೆ ಕಲಿಸುವ ಇಂತಹ ಸ್ಥಳದಲ್ಲಿ ಮೇಳಗಳಿಗೆ ಅನುಮತಿ ನೀಡಬೇಕೆ ಎಂಬುದು ನಾಗರಿಕರ ಪ್ರಶ್ನೆಯಾಗಿದೆ.

ಅಶೋಕನಗರಲ್ಲಿರುವ ಆನೆ ಪಾರ್ಕ್‌ (ಬಾಲಭವನ ಇರುವ ಉದ್ಯಾನ)ನಲ್ಲಿ ಇತ್ತೀಚೆಗೆ ವಿವಿಧ ಕಾರ್ಯಕ್ರಮಗಳ ಆಯೋಜನೆಗೆ ಅವಕಾಶ ನೀಡಲಾ ಗುತ್ತಿದೆ. ವಾಕಿಂಗ್‌ ಹಾಗೂ ಹಸಿರು ಬೆಳೆಸಲು ಕಾಯ್ದಿರಿಸುವ ಜಾಗದಲ್ಲಿ ಕಾರ್ಯಕ್ರಮ ಮಾಡಲಾಗುತ್ತಿದೆ.

ವೇದಿಕೆ ನಿರ್ಮಾಣ ಮಾಡುವುದ ರಿಂದ ಅಲ್ಲಲ್ಲಿ ಗುಂಡಿಗಳು ಬೀಳುತ್ತವೆ. ಜತೆಗೆ ನೂರಾರು ಜನರು ಸೇರುವು ದರಿಂದ ವಾಹನ ಸಂಚಾರಕ್ಕೂ ತೀವ್ರ ತೊಂದರೆಯಾಗುತ್ತದೆ. ಇದರ ಜತೆಗೆ ಮೈಕ್‌ ಹಾವಳಿಯಿಂದಾಗಿ ಸುತ್ತಲಿನ ಜನ ರಿಗೆ ತೊಂದರೆಯಾಗುತ್ತದೆ. ಅದರಲ್ಲೂ ಸುತ್ತ–ಮುತ್ತಲಿನಲ್ಲಿ ಆಸ್ಪತ್ರೆಗಳಿರುವುದ ರಿಂದ ರೋಗಿಗಳಿಗೂ ಕಿರಿಕಿರಿಯಾ ಗುತ್ತದೆ ಎನ್ನುತ್ತಾರೆ ಸ್ಥಳೀಯರು.

ಹಸಿರು ಬೆಳೆಯಬೇಕಾಗಿದ್ದ ಜಾಗದಲ್ಲಿ ವೇದಿಕೆ ನಿರ್ಮಾಣ ಮಾಡಿ ಕಾರ್ಯಕ್ರಮಗಳ ಆಯೋಜನೆಗೆ ನೀಡುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಅಲ್ಲಿಗೆ ವಾಕಿಂಗ್‌ ಬರುವ ಜನರದ್ದಾಗಿದೆ.

ಜಿಲ್ಲಾ ಕ್ರೀಡಾಂಗಣವನ್ನೂ ರಾಜ ಕೀಯ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನೀಡಲಾಗುತ್ತಿದೆ. ಇದರಿಂದಾಗಿ ಕ್ರೀಡಾ ವಸತಿ ನಿಲಯದ ಕ್ರೀಡಾ ಪಟುಗಳ ಅಭ್ಯಾಸಕ್ಕೆ ತೊಂದರೆಯಾಗುತ್ತದೆ.

ಕ್ರೀಡಾಂಗಣದಲ್ಲಿ ನಿತ್ಯ ಬೆಳಿಗ್ಗೆ ಹಾಗೂ ಸಂಜೆ ನೂರಾರು ಜನರು ವಾಕಿಂಗ್‌ಗೆ ಬರುತ್ತಾರೆ. ಅವರಿಗೂ ತೊಂದರೆಯಾಗುತ್ತದೆ. ಜತೆಗೆ ಕಾರ್ಯಕ್ರಮ ಸಂದರ್ಭದಲ್ಲಿ ವಾಹನಗಳನ್ನು ನಿಲ್ಲಿಸಿರುವುದರಿಂದ ಸಂಚಾರವೂ ಅಸ್ತವ್ಯಸ್ತಗೊಳ್ಳುತ್ತಿದೆ.

ಸಾರ್ವಜನಿಕರಿಗೆ ತೊಂದರೆಯಾಗು ವಂತಹ ಸ್ಥಳದಲ್ಲಿ ಕಾರ್ಯಕ್ರಮಗಳಿಗೆ ಅವಕಾಶ ನೀಡಬಾರದು ಎಂದು ನ್ಯಾಯಾಲಯದ ಆದೇಶವಿದೆ. ಆದರೆ, ಜಿಲ್ಲೆಯ ಅಧಿಕಾರಿಗಳು ಮಾತ್ರ ಪದೇ ಪದೇ ಜನರಿಗೆ ತೊಂದರೆಯಾಗುವಂಥ ಸ್ಥಳದಲ್ಲಿ ಕಾರ್ಯಕ್ರಮಗಳಿಗೆ ಅವಕಾಶ ನೀಡುತ್ತಲೇ ಇದ್ದಾರೆ.

ದೊಡ್ಡ, ದೊಡ್ಡ ಸಾರ್ವಜನಿಕ ಕಾರ್ಯಕ್ರಮಗಳಿಗೆ ಜಾಗವೊಂದನ್ನು ಗುರುತಿಸಿ, ಅಲ್ಲಿ ಕಾರ್ಯಕ್ರಮ ನಡೆಸಲು ಅವಕಾಶ ಮಾಡಿಕೊಡುವ ಕೆಲಸವನ್ನು ಜಿಲ್ಲಾಡಳಿತ ಮಾಡಬೇಕಿದೆ. ಜನಸೇವೆ ಎಂದು ಹೇಳಿಕೊಂಡೇ ಕಾರ್ಯಕ್ರಮ ಆಯೋಜಿಸುವ ಸಂಘಟನೆಗಳೂ ಜನರಿಗೆ ಆಗುವ ತೊಂದರೆ ತಪ್ಪಿಸಬೇಕು ಎನ್ನುತ್ತಾರೆ ವಸಂತ ಕುಮಾರ್‌.

*
ಉದ್ಯಾನದಲ್ಲಿ ಕಾರ್ಯಕ್ರಮ ಆಯೋಜಿಸುವುದು ಸರಿಯಲ್ಲ. ಇದರಿಂದ ಉದ್ಯಾನಕ್ಕೆ ಬರುವವರಿಗೆ ಹಾಗೂ ಸುತ್ತಲಿನ ನಿವಾಸಿಗಳಿಗೆ ತೊಂದರೆಯಾಗುತ್ತದೆ.
-ಎಚ್‌.ವಸಂತಕುಮಾರ್‌,
ಅಶೋಕನಗರ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT