ADVERTISEMENT

ಕಾಳಿಕಾಂಬಾ ದೇವಿ ಗಿಂಡಿ ಉತ್ಸವ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 5:44 IST
Last Updated 16 ಏಪ್ರಿಲ್ 2017, 5:44 IST
ಮದ್ದೂರು ಸಮೀಪದ ದೇಶಹಳ್ಳೀ ಗ್ರಾಮದಲ್ಲಿ ಶನಿವಾರ ಕಾಳಿಕಾಂಬಾದೇವಿಯ ‘ಗಿಂಡಿ ಉತ್ಸವ’ದಲ್ಲಿ ಪಾಲ್ಗೊಂಡ ಭಕ್ತರು
ಮದ್ದೂರು ಸಮೀಪದ ದೇಶಹಳ್ಳೀ ಗ್ರಾಮದಲ್ಲಿ ಶನಿವಾರ ಕಾಳಿಕಾಂಬಾದೇವಿಯ ‘ಗಿಂಡಿ ಉತ್ಸವ’ದಲ್ಲಿ ಪಾಲ್ಗೊಂಡ ಭಕ್ತರು   

ಮದ್ದೂರು: ತಾಲ್ಲೂಕಿನ ದೇಶಹಳ್ಳಿ ಗ್ರಾಮದ ಕಾಳಿಕಾಂಬಾ ದೇವಿಯ ‘ಗಿಂಡಿ ಉತ್ಸವ’ ಸಾವಿರಾರು ಭಕ್ತರ ಹರ್ಷೋದ್ಗಾರಗಳ ನಡುವೆ ಶನಿವಾರ ಬೆಳಿಗ್ಗೆ ಸಂಭ್ರಮದಿಂದ ನಡೆಯಿತು.ಮುಂಜಾನೆ ದೇಗುಲದ ಆವರಣದಿಂದ ಹೊರಟ ದೇವಿಯ ಗಿಂಡಿ ಉತ್ಸವ ಮೆರವಣಿಗೆಯನ್ನು ದಾರಿಯುದ್ದಕ್ಕೂ ಜನರು ಸಾಲುಗಟ್ಟಿ ನಿಂತು ವೀಕ್ಷಿಸಿದರು.

ದೇವಿಯ ಗಿಂಡಿಯನ್ನು ಹೊತ್ತ ದೇಗುಲದ ಪ್ರಧಾನ ಅರ್ಚಕ ರಾಮಣ್ಣ ಅವರು ಆಕರ್ಷಕ ನೃತ್ಯ ಮಾಡುವ ಮೂಲಕ ಜನರ ಗಮನ ಸೆಳೆದರು. ಗ್ರಾಮದ ಜನರು ದೇವಿಗೆ ನೂರಾರು ಕುರಿ, ಕೋಳಿ ಬಲಿ ನೀಡುವ ಮೂಲಕ ಹರಕೆ ಸಲ್ಲಿಸಿದರು.

ತಮಟೆ, ನಗಾರಿ ಪೂಜಾ ಪಟಗಳ ಮೆರವಣಿಗೆ ನಡೆಯಿತು. ವಿವಿಧೆಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬಂದು ದೇವಿ ದರ್ಶನ ಪಡೆದರು. ಕೆಲ ಭಕ್ತರು ಬಾಯಿ ಬೀಗ, ತಲೆಮುಡಿ ಹರಕೆ ಸಮರ್ಪಿಸಿದರು.ಬಳಿಕ ಬಂದ ಸಾವಿರಾರು ಭಕ್ತರಿಗೆ ದೇಗುಲದ ಆವರಣದಲ್ಲಿ ವಿಶೇಷ ಅನ್ನಸಂತರ್ಪಣೆ ನಡೆಯಿತು. ದೇಗುಲ ಧರ್ಮದರ್ಶಿ ಮಂಡಳಿಯ ಪದಾಧಿಕಾರಿಗಳಾದ ಸತ್ಯಪ್ಪ, ಯೋಗಾನಂದ ಇದ್ದರು.ಸಂಜೆ ದೇಗುಲದ ಆವರಣದಲ್ಲಿ ನಾಡಿನ ಖ್ಯಾತ ಕಲಾವಿದರಿಂದ ಭಕ್ತಿಗೀತೆಗಳ ಗಾಯನ, ಹಾಸ್ಯ ರಸಮಂಜರಿ ಕಾರ್ಯಕ್ರಮ ನಡೆಯಿತು.

ADVERTISEMENT

ಭರ್ಜರಿ ವ್ಯಾಪಾರ: ಜಾತ್ರಾ ಮಹೋತ್ಸವದ ಅಂಗವಾಗಿ ದೇಗುಲ ಆವರಣದಲ್ಲಿ ಮಕ್ಕಳ ಅಟಿಕೆ, ಕಡ್ಲೆಪುರಿ ಸೇರಿದಂತೆ ವಿವಿಧ ತಿನಿಸುಗಳ ಅಂಗಡಿಗಳನ್ನು ತೆರೆಯಲಾಗಿತ್ತು. ಜನರು ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತು ವಿವಿಧ ವಸ್ತುಗಳನ್ನು ಖರೀದಿಸುತ್ತಿದ್ದ ದೃಶ್ಯ ಕಂಡು ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.