ADVERTISEMENT

ಕಾವೇರಿ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯ

l ಕನ್ನಡ ಭಾಷೆಗೆ ಅದ್ಭುತ ಶಕ್ತಿ ಇದೆ l ಸಾಹಿತ್ಯ, ಭಾಷೆ ನನ್ನ ಬದುಕು ರೂಪಿಸಿವೆ-– ಪ್ರೊ.ಎಂ.ಕೃಷ್ಣೇಗೌಡ

ಬಸವರಾಜ ಹವಾಲ್ದಾರ
Published 18 ಫೆಬ್ರುವರಿ 2017, 8:36 IST
Last Updated 18 ಫೆಬ್ರುವರಿ 2017, 8:36 IST
ಮಂಡ್ಯದಲ್ಲಿ ಶುಕ್ರವಾರ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ಉದ್ಘಾಟಿಸಿದರು
ಮಂಡ್ಯದಲ್ಲಿ ಶುಕ್ರವಾರ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ಉದ್ಘಾಟಿಸಿದರು   
ಮಂಡ್ಯ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ‘ಸರ್ವೈವಲ್‌ ಪಾಲಿಟಿಕ್ಸ್‌’ ಹಾಗೂ ತಮಿಳುನಾಡಿನ ‘ಬ್ಲಾಕ್‌ಮೇಲ್‌  ಪಾಲಿಟಿಕ್ಸ್‌’ನಿಂದಾಗಿ ರಾಜ್ಯಕ್ಕೆ ಕಾವೇರಿ ನೀರಿನ ವಿಷಯದಲ್ಲಿ ಅನ್ಯಾಯವಾಗುತ್ತಲೇ ಇದೆ. ಪರಿಣಾಮ ಜಿಲ್ಲೆಯ ರೈತರು ಒಂದೇ ಬೆಳೆ ಬೆಳೆಯಬೇಕಾಗಿದೆ ಎಂದು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ.ಎಂ.ಕೃಷ್ಣೇಗೌಡ ಕಳವಳ ವ್ಯಕ್ತಪಡಿಸಿದರು.
 
ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾದ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳಾನಧ್ಯಕ್ಷರ ಭಾಷಣ ಮಾಡಿದರು.
ಜಿಲ್ಲೆಯ ಕನ್ನಂಬಾಡಿ ಕಟ್ಟೆಯಲ್ಲಿ ಕಟ್ಟೆ ಕಟ್ಟಿಕೊಂಡು ಜೋಪಾನವಾಗಿ ನೀರು ಸಂಗ್ರಹಿಸಿ, ತಲೆಬಗ್ಗಿಸಿಕೊಂಡು ತಮಿಳುನಾಡಿಗೆ ನೀರು ಬಿಟ್ಟುಕೊಡುವುದನ್ನು ರಾಜ್ಯ, ಕೇಂದ್ರ ಸರ್ಕಾರಗಳು ಹಾಗೂ ನ್ಯಾಯಾಲಯಗಳು ಅನಿವಾರ್ಯವಾಗಿಸಿವೆ ಎಂದು ಟೀಕಿಸಿದರು.
 
ಮಂಡ್ಯ ಹಸಿರು ಜಿಲ್ಲೆ ಎಂಬ ಭಾವನೆ ಇದೆ. ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಉತ್ತಮವಾಗಿದೆ. ಆದರೆ, ಇಲ್ಲಿಯೂ ಬೆಂಗಾಡಿನಂತಹ ಪ್ರದೇಶಗಳು ಇವೆ. ಅವುಗಳ ಅಭಿವೃದ್ಧಿಯೂ ಆಗಬೇಕಿದೆ ಎಂದರು.
 
ಜಿಲ್ಲೆಯಲ್ಲಿ ರೈತ ಚಳವಳಿ ಜೋರಾಗಿ ಬೆಳೆದಿದೆ ಯಾದರೂ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಎದೆಯಲ್ಲಿ ಸಂಕಟ ಹುಟ್ಟಿಸುತ್ತದೆ. ಅವರು ಆತ್ಮಹತ್ಯೆ ಮಾಡಿಕೊಂಡಾಗ ಪರಿಹಾರಕ್ಕೆ ಒತ್ತಾಯಿಸುವುದು, ಆಳುವವರು ಒಂದಷ್ಟು ಕಾಸುಕೊಟ್ಟು ಕಣ್ಣೀರು ಸುರಿಸಿ ಮುಂದೆ ಹೋಗುವುದು. ಇಷ್ಟೇ ಆಗುತ್ತಿದೆಯೇ ವಿನಾ ರೈತರ ಬದುಕನ್ನು ಸಮಗ್ರವಾಗಿ ಸುಧಾರಿಸುವ ಚರ್ಚೆಯೇ ಆರಂಭವಾಗಿಲ್ಲ ಎಂದು ವಿಷಾದಿಸಿದರು.
 
ಜಿಲ್ಲೆಯಲ್ಲಿ ರೈತರು ಸುರಕ್ಷಿತವಾಗಿಲ್ಲ ಎಂದರೆ ಇಡೀ ಜಿಲ್ಲೆಯ ಬದುಕು ಚೆನ್ನಾಗಿಲ್ಲ ಎಂದು ಅರ್ಥ. ಇದನ್ನು ಅರ್ಥ ಮಾಡಿಕೊಂಡು ಪರಿಹಾರ ಕಂಡುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದರು.
 
ಜಾನಪದ ಲೋಕಕ್ಕೆ ಮಂಡ್ಯದ ಕೊಡುಗೆ ದೊಡ್ಡದಾಗಿದೆ. ಆ ಶಬ್ದ ಭಂಡಾರವೇ ನನ್ನನ್ನು ಇಂದು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ. ಜಾನಪದವನ್ನು ಸಂಪನ್ಮೂಲವಾಗಿಸಿಕೊಂಡು ಒಟ್ಟು ಬದುಕನ್ನು ಸೃಷ್ಟಿಸಿಕೊಳ್ಳುವ ಕೆಲಸ ಆಗಿಲ್ಲ. ಆಗಿದ್ದರೂ ಅದು ಕಿಂಚಿತ್‌ ಮಾತ್ರ ಎನ್ನುವುದನ್ನು ವಿಷಾದದಿಂದ ಹೇಳಬೇಕಾಗಿದೆ ಎಂದರು.
 
ಕನ್ನಡ ಚಲನಚಿತ್ರ ರಂಗಕ್ಕೂ ಮಂಡ್ಯ ದೊಡ್ಡ ಕೊಡುಗೆಯನ್ನು ನೀಡಿದೆ. ಪ್ರತಿ ಚಿತ್ರದಲ್ಲಿಯೂ ಒಂದುಕಡೆ ಮಂಡ್ಯದ ಪ್ರಸ್ತಾಪ ಇದ್ದೇ ಇರುತ್ತದೆ. ಸಾಹಿತ್ಯ ಕ್ಷೇತ್ರವೂ ಶ್ರೀಮಂತವಾಗಿದೆ. ರಾಜ್ಯಕ್ಕೂ ಇಲ್ಲಿನ ಸಾಹಿತಿಗಳು ದೊಡ್ಡ ಕೊಡುಗೆ ನಿಡಿದ್ದಾರೆ ಎಂದು ಹೇಳಿದರು. 
 
‘ಗ್ರಾಮೀಣ ಪ್ರದೇಶದ ಬದುಕು ಹಾಗೂ ಕನ್ನಡ ಭಾಷೆ, ಸಾಹಿತ್ಯದ ಶಕ್ತಿಯಿಂದಾಗಿ ಗ್ರಾಮದಲ್ಲಿಯೇ ಸಾಮಾನ್ಯನಾಗಿ ಉಳಿದು ಬಿಡಬಹುದಾಗಿದ್ದ ನನ್ನನ್ನು ಭೂಲೋಕವನ್ನೇ ಸುತ್ತುವಂತೆ ಮಾಡಿತು’ ಎಂದರು.ಇದಕ್ಕೂ ಮುನ್ನ ನಗರದ ಪ್ರಮುಖ ರಸ್ತೆಗಳಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತು.
 
ಸಮ್ಮೇಳನಗಳು ನಿರರ್ಥಕವಲ್ಲ; ಚರ್ಚೆಗೆ ವೇದಿಕೆ
ಮಂಡ್ಯ: ಕನ್ನಡ ಶಾಲೆಯಲ್ಲಿ ಎರಡನೇ ಭಾಷೆಯಾಗಿ ಇಂಗ್ಲಿಷ್‌ ಅನ್ನು ಯಾಕೆ ಕಲಿಸಬಾರದು. ಹಾಗೆ ಮಾಡಿದರೆ ಆಗಲಾದರೂ ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಬಹುದು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್‌ ಅಭಿಪ್ರಾಯಪಟ್ಟರು.

ನಗರದ ಸರ್‌್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾದ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಸಮ್ಮೇಳನಗಳು ನಿರರ್ಥಕ ಎಂದು ನೋಡಬಾರದು. ಹಾಗೆ ಮಾಡಿದರೆ ಶೂನ್ಯ ಆವರಿಸುತ್ತದೆ. ಭಾಷೆ, ಸಮಾಜದ ಸಮಸ್ಯೆಗಳ ಚರ್ಚೆಗೆ ಸಮ್ಮೇಳನಗಳು ವೇದಿಕೆಯಾಗಿವೆ. ಅವುಗಳ ಅನಿವಾರ್ಯತೆಯೂ ಇದೆ ಎಂದರು.

ಒತ್ತಡದ ಬದುಕಿನಲ್ಲಿ ಜೀವನ ಪಾಠವನ್ನು ರಸಮಯವಾಗಿ ಬಡಿಸಬೇಕಾದ ಅವಶ್ಯಕತೆ ಇದೆ. ಅದನ್ನು ಸಮ್ಮೇಳನಾಧ್ಯಕ್ಷ ಕೃಷ್ಣೇಗೌಡ ಅವರು ಮಾಡುತ್ತಿದ್ದಾರೆ. ಸಾಹಿತ್ಯ, ಪುಸ್ತಕ ಬರೆದ ಸಂಖ್ಯೆಯ ಮೇಲೆ ಸಮ್ಮೇಳನಾಧ್ಯಕ್ಷರ ಆಯ್ಕೆ ಸರಿಯಲ್ಲ. ಸಾಹಿತ್ಯವೂ ಎಲ್ಲ ಸಂವೇದನೆಗಳನ್ನು ಒಳಗೊಂಡಿದೆ. ಕಾರ್ಮಿಕ, ಕೃಷಿಕ, ಮಗುವಿನಿಂದ ದೊಡ್ಡವರು ಅದರ ವ್ಯಾಪ್ತಿಯಲ್ಲಿದ್ದಾರೆ ಎಂದು ಹೇಳಿದರು.

ಸಮ್ಮೇಳನಗಳೂ ವಿಷಯ ವೈವಿಧ್ಯದಿಂದ ನಡೆಯುತ್ತಿವೆ. ಅವುಗಳ ಮುಕ್ತ ಚರ್ಚೆಗೆ ಸಮ್ಮೇಳನವನ್ನು ಬಳಸಿಕೊಳ್ಳಬೇಕು. ಸಮಾಜದ ಸ್ವಸ್ಥ ಬದುಕಿಗೆ ಸಮ್ಮೇಳನ ಏನು ನೀಡಬಹುದು ಎಂಬ ಬಗ್ಗೆ ಚಿಂತನೆಯಾಗಬೇಕು ಎಂದರು.

ಸಮ್ಮೇಳನ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ಮಾತನಾಡಿ, ಸಾಹಿತ್ಯದ ಪುಸ್ತಕಗಳನ್ನು ಕೊಂಡು ಓದಬೇಕು. ಮನೆಯಲ್ಲಿ ಕನ್ನಡ ಮಾತನಾಡಬೇಕು ಎಂದರು.

ಸಾಹಿತ್ಯ, ನಾಟಕ, ಚಿತ್ರರಂಗದಲ್ಲಿ ಜಿಲ್ಲೆಯ ಕೊಡುಗೆ ದೊಡ್ಡದಾಗಿದೆ. ಭೌಗೋಳಿಕವಾಗಿಯೂ ಸಂಪದ್ಭರಿತವಾಗಿದೆ ಎಂದು ಹೇಳಿದರು.
ವಿಧಾನ ಪರಿಷತ್‌ ಉಪಸಭಾಪತಿ ಮಾತನಾಡಿ, ಜಿಲ್ಲೆಯ ಹಲವರು ಭಾಷಾ ಬೆಳವಣಿಗೆಗೆ ಶ್ರಮಿಸಿದ್ದಾರೆ. ಸುಂದರ ಬದುಕು ರೂಪಿಸಿಕೊಳ್ಳಲು ಸಾಹಿತ್ಯ ಸಹಕಾರಿಯಾಗಿದೆ ಎಂದರು.

ಸಂಸದ ಸಿ.ಎಸ್‌.ಪುಟ್ಟರಾಜು ಮಾತನಾಡಿ, ಇಂಗ್ಲಿಷ್‌ ಭಾಷೆಗೆ ಮಾರು ಹೋಗಿದ್ದೇವೆ. ಕನ್ನಡದ ಕೂಗು ಮಂಕಾಗುತ್ತಿದೆ ಎಂಬ ಭಾವನೆ ಆವರಿಸಿಕೊಂಡಿದೆ. ಸರ್ಕಾರವು ಭಾಷಾ ಬೆಳವಣಿಗೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಆಗ್ರಹಿಸಿದರು. ಜಿಲ್ಲೆಯ ಬರದ ನಡುವೆಯೂ ಕನ್ನಡದ ಜಾತ್ರೆ ನಡೆದಿದೆ. ಮೈಷುಗರ್‌ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು ಎಂದರು.
 
ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಆರತಿ ಕೃಷ್ಣ ಪುಸ್ತಕ ಮಳಿಗೆ ಉದ್ಘಾಟಿಸಿದರು. ಮಾಜಿ ಶಾಸಕರಾದ ಎಂ.ಎಸ್‌.ಆತ್ಮಾನಂದ, ಎಂ.ಶ್ರಿನಿವಾಸ್‌, ಪ್ರಭಾವತಿ ಜಯರಾಂ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪ್ರೇಮಕುಮಾರಿ, ನಗರಸಭೆ ಅಧ್ಯಕ್ಷ ಹೊಸಹಳ್ಳಿ ಬೋರೇಗೌಡ, ಮೈಸೂರಿನ ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ವೆಂಕಟೇಶ್‌, ಜಿಲ್ಲಾಧಿಕಾರಿ ಜಿಯಾವುಲ್ಲಾ, ರವಿಕುಮಾರ ಚಾಮಲಾಪುರ, ಎಚ್‌.ಎನ್‌.ಯೋಗೇಶ್‌, ಎಂ.ಬಿ.ರಮೇಶ್‌, ಕೃಷ್ಣೇಗೌಡ, ಅಪ್ಪಾಜಪ್ಪ ಉಪಸ್ಥಿತರಿದ್ದರು.
 
* ಸಾಹಿತ್ಯ ಸಮ್ಮೇಳನಗಳಿಂದ ಯಾವ ಪ್ರಯೋಜನ ಆಗುವುದಿಲ್ಲ ಅನ್ನುವ ಟೀಕೆ ಆಗಾಗ ಕೇಳಿ ಬರುತ್ತದೆ. ಇಂತಹ ಜಾತ್ರೆ ನಡೆಯದಿದ್ದರೆ ಬದುಕಿ ನಲ್ಲಿ ಬಣ್ಣವೇ ಇರುವುದಿಲ್ಲ ಅನ್ನವುದೂ ಸತ್ಯ. ಆಡಂಬರ ಕ್ಕಿಂತ ಅರ್ಥಪೂರ್ಣತೆಗೆ ಎಷ್ಟು ತುಡಿಯುತ್ತದೆಯೋ ಅಷ್ಟು ಆ ಸಮ್ಮೇಳನ ಯಶಸ್ವಿಯಾಗುತ್ತದೆ
-ಪ್ರೊ.ಎಂ.ಕೃಷ್ಣೇಗೌಡ, ಸಮ್ಮೇಳನಾಧ್ಯಕ್ಷ
 
ಕನ್ನಡ ಭಾಷೆಗೆ ಧಕ್ಕೆ: ಸಂಸ್ಕೃತಿ ಮೇಲೂ ಪರಿಣಾಮ

ಮಂಡ್ಯ: ‘ಜಾನಪದದಲ್ಲಿ ಕನ್ನಡ ಭಾಷೆಯು ಅಳಿಯದೇ ಉಳಿದಿದೆ. ಅದು ಜನರ ಬದುಕಾಗಿಯೂ ಉಳಿದಿದೆ. ಸತ್ವಯುತವಾಗಿರುವ ಜಾನಪದದ ಕನ್ನಡ ಭಾಷೆ ಉಳಿಸಿಕೊಳ್ಳುವ ಕೆಲಸ ಆಗಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಹೇಳಿದರು.

ನಗರದ ಸರ್‌ಎಂ.ವಿ. ಕ್ರೀಡಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದಿಂದ ಶುಕ್ರವಾರ ಆರಂಭವಾದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ‘ನನಗೆ ತಿಳಿದಂತೆ ಕನ್ನಡವೆಂದರೆ’ ಎಂಬ ವಿಷಯ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

ಭಾಷೆಯಿಂದ ಬದುಕು ಅಲ್ಲ; ಬದುಕಿನಿಂದ ಭಾಷೆ ಆಗಿದೆ. ಮಂಗಳೂರು, ಕಲಬುರ್ಗಿ, ಕೊಳ್ಳೇಗಾಲ ವಿವಿಧೆಡೆ ಕಡೆ ಕನ್ನಡ ಭಾಷೆ ವಿವಿಧ ರೀತಿಯಲ್ಲಿದೆ. ಬೆಂಗಳೂರಿನಲ್ಲಿ ಕನ್ನಡ ಭಾಷೆ ಉಳಿಯಬೇಕಿದೆ. ವ್ಯವಹಾರಕ್ಕಾಗಿ ಸತ್ವಹೀನ ಕನ್ನಡ ಭಾಷೆ ಉಳಿಸಿಕೊಳ್ಳಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಯಾವುದೇ ಭಾಷೆಯು ಶ್ರೇಷ್ಠವೂ ಅಲ್ಲ, ಕನಿಷ್ಠವೂ ಅಲ್ಲ, ಅನಿಷ್ಟವೂ ಅಲ್ಲ. ಕನ್ನಡ ಭಾಷೆ ಉಳಿವಿಗೆ ರಾಜ್ಯದಾದ್ಯಂತ ಹೋರಾಟ ಮಾಡುವುದು ಅಗತ್ಯವಿದೆ ಎಂದು ಸಲಹೆ ಮಾಡಿದರು.

ಗಡಿಯಲ್ಲಿನ ಜನರ ಸಮಸ್ಯೆ ಹೆಚ್ಚಾಗಿದ್ದು, ಅಲ್ಲಿ ಕನ್ನಡ ಭಾಷೆ ಕಾಣೆಯಾಗುತ್ತಿದೆ. ಅವರ ಮೇಲೆ ಅನ್ಯಭಾಷಿಗರ ಹಾವಳಿ ಹಾಗೂ ದಬ್ಬಾಳಿಕೆ ಹೆಚ್ಚಾಗಿದೆ. ಅದನ್ನು ತಡೆಯುವ ಅವಶ್ಯಕತೆ ಇದೆ ಎಂದು ಸಲಹೆ ಮಾಡಿದರು.

ಸಾಹಿತಿ ಬಿ.ಚಂದ್ರೇಗೌಡ ಮಾತನಾಡಿ, ಕನ್ನಡ ಭಾಷೆ ಕೆಟ್ಟರೆ ಅದರ ಪರಿಣಾಮ ಸಂಸ್ಕೃತಿಯ ಮೇಲೆ ಆಗುತ್ತದೆ. ಮನುಷ್ಯನ ದೇಹದಲ್ಲಿ ರಕ್ತ ಎಷ್ಟು ಮುಖ್ಯ ಆಗುತ್ತದೋ ಅದೇ ರೀತಿ ಸಂಸ್ಕೃತಿಯಲ್ಲಿ ಕನ್ನಡ ಭಾಷೆ ಮುಖ್ಯ ಆಗುತ್ತದೆ ಎಂದರು. ಮಾಜಿ ಶಾಸಕ ಕೆ.ಅನ್ನದಾನಿ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಪ್ರೊ.ಜಿ.ಟಿ. ವೀರಪ್ಪ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ರವಿಕುಮಾರ ಚಾಮಲಾಪುರ ಉಪಸ್ಥಿತರಿದ್ದರು.
-ಮೋಹನ್‌ ರಾಗಿಮುದ್ದನಹಳ್ಳಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.