ADVERTISEMENT

ಕೃಷ್ಣರಾಜಮುಡಿ ಬ್ರಹ್ಮೋತ್ಸವ ಸಂಭ್ರಮ

ಮೇಲುಕೋಟೆಯಲ್ಲಿ ಹತ್ತು ದಿನ ಆಷಾಢ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 9:01 IST
Last Updated 13 ಜುಲೈ 2017, 9:01 IST

ಮೇಲುಕೋಟೆ: ಗರುಡ ಧ್ವಜಾರೋಹಣ ದೊಂದಿಗೆ ಚಲುವನಾರಾಯಣಸ್ವಾಮಿ ದೇವಾಲಯದಲ್ಲಿ ಬುಧವಾರ ಕೃಷ್ಣರಾಜ ಮುಡಿ ಬ್ರಹ್ಮೋತ್ಸವ ಆರಂಭವಾಯಿತು.

ಹತ್ತುದಿನ ನಡೆಯುವ ಆಷಾಢ ಜಾತ್ರಾ ಮಹೋತ್ಸವದ ಆರಂಭದ ದಿನ ಸ್ವಾಮಿಯ ಮಂಟಪ ವಾಹನೋತ್ಸವದೊಂದಿಗೆ ಗರುಡ ದೇವನ ಪಟವನ್ನು ಮೆರವಣಿಗೆ ನಡೆಸಿದ ನಂತರ ಧ್ವಜಾರೋಹಣ ಕೈಗೊಳ್ಳಲಾಯಿತು. ದೇವಾನುದೇವತೆಗಳನ್ನು ಬ್ರಹ್ಮೋತ್ಸವಕ್ಕೆ ಆಹ್ವಾನಿಸಿ, ಆಗಮೋಕ್ತ ವಿಧಿವಿಧಾನ ನೆರವೇರಿಸಿ ಗರುಡ ಧ್ವಜಾರೋಹಣ ನೆರವೇರಿಸಲಾಯಿತು. ಮಹೋತ್ಸವ 21ರವರೆಗೆ ನಡೆಯಲಿದೆ.

ಇದಕ್ಕೂ ಮುನ್ನಾದಿನ ಮಂಗಳವಾರ  ಮೈಸೂರು ಅರಸ ಮುಮ್ಮಡಿ ಕೃಷ್ಣರಾಜ ಒಡೆಯರ್ ವರ್ಧಂತಿಯ ನಿಮಿತ್ತ ಚೆಲುವನಾರಾಯಣಸ್ವಾಮಿ ಮತ್ತು ರಾಮಾನುಜಾಚಾರ್ಯರಿಗೆ ಮಹಾಭಿಷೇಕ ನೆರವೇರಸಲಾಯಿತು. ರಾತ್ರಿ ಕಲ್ಯಾಣೋತ್ಸವ ನೆರವೇರಿತು. ಇದೇ ವೇಳೆ ಮುಮ್ಮುಡಿ ಕೃಷ್ಣರಾಜ ಒಡೆಯರ್ ವಿಗ್ರಹಕ್ಕೆ ಗೌರವಸಮರ್ಪಣೆ ಮಾಡಿ, ಲೋಕಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಯಿತು. 

ADVERTISEMENT

ಜುಲೈ 15ರಂದು ರಾತ್ರಿ 7ಕ್ಕೆ ಚಲುವನಾರಾಯಣಸ್ವಾಮಿಗೆ ಕೃಷ್ಣ ರಾಜ ಮುಡಿ ಕಿರೀಟಧಾರಣ ಮಹೋತ್ಸವ ನೆರವೇರಲಿದೆ. ಮೂರ್ತಿಗೆ ವಖ್ರ ಖಚಿತ ಕಿರೀಟ ಹಾಕಿ ನಾಲ್ಕೂ ಬೀದಿಗಳಲ್ಲಿ ಉತ್ಸವ ನೆರವೇರಿಸಲಾಗುತ್ತದೆ. ಈ ಕಿರೀಟ ಜುಲೈ 21ರವರೆಗೆ ಪ್ರತಿದಿನ ನಡೆಯುವ ಉತ್ಸವಗಳಲ್ಲಿ ಚೆಲುವ ನಾರಾಯಣಸ್ವಾಮಿಯನ್ನು ಅಲಂಕರಿಸಲಿದೆ.

ಜುಲೈ 13ರಂದು 2ನೇ ತಿರುನಾಳ್, ರಾತ್ರಿ ಶೇಷವಾಹನೋತ್ಸವ, 14ರಂದು 3ನೇ ತಿರುನಾಳ್, ಸಂಜೆ ನಾಗವಲ್ಲಿ ಮಹೋತ್ಸವ, ರಾತ್ರಿ ಚಂದ್ರಮಂಡಲ ವಾಹನೋತ್ಸವ ನಡೆಯಲಿವೆ. 16ರಂದು 5ನೇ ತಿರುನಾಳ್, ರಾತ್ರಿ ಗರುಡವಾಹನೋತ್ಸವ, 17ರಂದು 6ನೇ ತಿರುನಾಳ್, ಸಂಜೆ ಗಜೇಂದ್ರಮೋಕ್ಷ, ರಾತ್ರಿ ಆನೆ ವಸಂತ ಕುದುರೆ ಮತ್ತು ಆನೆ ವಾಹನೋತ್ಸವ ನೆರವೇರಲಿವೆ.

ಬ್ರಹ್ಮೋತ್ಸವದಲ್ಲಿ ರಥೋತ್ಸವ ಮತ್ತು ತೆಪ್ಪೋತ್ಸವದ ಬದಲಾಗಿ ಉತ್ಸವಗಳು ನಡೆಯಲಿದ್ದು, 18ರಂದು 7ನೇ ತಿರುನಾಳ್ ಕೃಷ್ಣರಾಜಮುಡಿ ರಥೋತ್ಸವದ ಸಾಂಕೇತಿಕ ಉತ್ಸವ, 19ರಂದು ಏಕಾದಶಿ ತೆಪ್ಪೋತ್ಸವದ ಸಾಂಕೇತಿಕ ಉತ್ಸವ ನೆರವೇರಲಿವೆ.  20ರಂದು 9ನೇ ತಿರುನಾಳ್, ಸಂಧಾನ ಸೇವೆ ನಡೆಯಲಿದೆ. ಜುಲೈ 21ರಂದು 10ನೇ ತಿರುನಾಳ್ ಪ್ರಯುಕ್ತ ಪುಷ್ಪಯಾಗ ನಡೆಯುವುದು ಎಂದು ದೇವಾಲಯದ ಕಾರ್ಯ ನಿರ್ವಾಹಕ ಅಧಿಕಾರಿ ಕುಮಾರಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.