ADVERTISEMENT

ಕೆಎಫ್‌ಡಿ, ಎಸ್‌ಡಿಪಿಐ ಸಂಘಟನೆ ನಿಷೇಧಿಸಿ

ಕಾಂಗ್ರೆಸ್‌ ಆಡಳಿತದ ಅವಧಿಯಲ್ಲಿ ಸಂಘ ಪರಿವಾರದ 20 ಕಾರ್ಯಕರ್ತರ ಹತ್ಯೆ: ಆರೋಪ

​ಪ್ರಜಾವಾಣಿ ವಾರ್ತೆ
Published 20 ಜುಲೈ 2017, 9:30 IST
Last Updated 20 ಜುಲೈ 2017, 9:30 IST

ಮಂಡ್ಯ: ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಕೆ.ಎಫ್‌.ಡಿ. ಹಾಗೂ ಎಸ್‌.ಡಿ.ಪಿ.ಐ. ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಜಿಲ್ಲಾ ಘಟಕದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ಮಾಡಿದರು.

ನಗರದ ಸರ್‌ ಎಂ.ವಿ. ಪ್ರತಿಮೆ ಎದುರು ಸೇರಿದ್ದ  ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ನಂತರ ಜಿಲ್ಲಾಧಿಕಾರಿ ಕಚೇರಿಯವರೆಗೂ ಮೆರವಣಿಗೆ ನಡೆಸಿದರು.

ಕಾಂಗ್ರೆಸ್‌ ಸರ್ಕಾರದ ನಾಲ್ಕು ವರ್ಷಗಳ ಆಡಳಿತದಲ್ಲಿ ಸಂಘ ಪರಿವಾರದ 20 ಕಾರ್ಯಕರ್ತರ ಹತ್ಯೆಯಾಗಿದೆ. ಶರತ್‌ ಮಡಿವಾಳ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಬೇಕು. ಈ ಕುಟುಂಬಕ್ಕೆ ₹ 25 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರೈತರ ಸಮಸ್ಯೆಗಳು ಹೆಚ್ಚಾಗಿವೆ. ಆದರೆ, ಆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ. ಹೀಗಾಗಿ ಈ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಒತ್ತಾಯಿಸಿದರು. ಮುಖಂಡರಾದ ಕೆ.ಎಸ್‌.ಮಲ್ಲಿಕಾರ್ಜುನ, ಎಚ್‌.ಆರ್‌.ಅರವಿಂದ್‌, ಹೊಸಹಳ್ಳಿ ಶಿವು, ಸಿದ್ದರಾಜುಗೌಡ, ಶಿವಕುಮಾರ್‌ ಆರಾಧ್ಯ, ಪ್ರಶಾಂತ್‌, ಎಂ.ಎಸ್‌. ವೀರಭದ್ರಸ್ವಾಮಿ, ಯೋಗಾನಂದ, ಪುಟ್ಟಮ್ಮ, ಯಶೋದಾ, ಬಿ.ಹರ್ಷ, ರಾಮು ಇದ್ದರು.

**

ಕೈದಿಗಳಿಗೂ ‘ಐಷಾರಾಮಿ ಭಾಗ್ಯ’!

ಮಂಡ್ಯ: ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಪ್ರಾಮಾಣಿಕ ಅಧಿಕಾರಿಗಳು ಭಯದಿಂದ ಕರ್ತವ್ಯ ನಿರ್ವಹಿಸುವ ಸ್ಥಿತಿ ನಿರ್ಮಾಣವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಿನಿಂದ ಹಲವು ಭಾಗ್ಯಗಳನ್ನು ಕರುಣಿಸಿದ್ದಾರೆ. ಜೈಲಿನಲ್ಲಿರುವ ಕೈದಿಗಳಿಗೂ ‘ಐಷಾರಾಮಿ ಭಾಗ್ಯ’ ಕರುಣಿಸಲಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕೈದಿಗಳಿಗೆ ನೀಡುತ್ತಿರುವ ಐಷಾರಾಮಿ ಭಾಗ್ಯದ ಬಗ್ಗೆ ಪ್ರಾಮಾಣಿಕ ಅಧಿಕಾರಿಗಳು ಪ್ರಶ್ನಿಸಿದರೆ ಅಂತಹ ಅಧಿಕಾರಿಗಳಿಗೆ ವರ್ಗಾವಣೆ ಶಿಕ್ಷೆಯನ್ನು ಕಾಂಗ್ರೆಸ್‌ ಸರ್ಕಾರ ಕರುಣಿಸುತ್ತಿದೆ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.