ADVERTISEMENT

ಕೆರೆಗಳ ಡಿನೋಟಿಫೈ ಪ್ರಸ್ತಾವ– ಆಕ್ರೋಶ

​ಪ್ರಜಾವಾಣಿ ವಾರ್ತೆ
Published 25 ಜುಲೈ 2017, 8:51 IST
Last Updated 25 ಜುಲೈ 2017, 8:51 IST

ಶ್ರೀರಂಗಪಟ್ಟಣ: ನಾಡಪ್ರಭು ಕೆಂಪೇಗೌಡ ಅವರು ಜನ ಕಲ್ಯಾಣಕ್ಕಾಗಿ 400 ವರ್ಷಗಳ ಹಿಂದೆ ನಿರ್ಮಿಸಿರುವ ಕೆರೆಗಳನ್ನು ಡಿನೋಟಿಫೈ ಮಾಡಲು ರಾಜ್ಯದ ಕಾಂಗ್ರೆಸ್‌ ಸರ್ಕಾರ ಹುನ್ನಾರ ನಡೆಸಿದೆ ಎಂದು ಒಕ್ಕಲಿಗ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.

ಸಮೀಪದ ಗಂಜಾಂನ ನಿಮಿಷಾಂಬ ಸಮುದಾಯ ಭವನದಲ್ಲಿ ಸೋಮವಾರ ನಡೆದ ನೇಗಿಲ ಯೋಗಿ ಒಕ್ಕಲಿಗರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಸಿ.ಮರಿಯಪ್ಪ, ಹಿರಿಯ ವಕೀಲ ಸಿ.ಪುಟ್ಟಸ್ವಾಮಿ, ಕರವೇ ಜಿಲ್ಲಾ ಉಪಾಧ್ಯಕ್ಷ ಸಿ.ಸ್ವಾಮಿಗೌಡ, ಡಾ.ಬಿ.ನರಸಿಂಹಸ್ವಾಮಿ, ಸಂಘದ ನೂತನ ಅಧ್ಯಕ್ಷ ನಿಂಗೇಗೌಡ, ಮುಖಂಡ ರಾದ ಡಿ.ಎಂ.ರವಿ, ಡಿ.ಕೆ.ನಾಗರಾಜು, ಗೌಡಹಳ್ಳಿ ದೇವರಾಜು, ಎಂ.ಸುರೇಶ್‌ ಸರ್ಕಾರದ ಪ್ರಸ್ತಾವಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಕೆರೆಗಳನ್ನು ಡಿನೋಟಿಫೈ ಮಾಡುವಂತಹ ಅವೈಜ್ಞಾನಿಕ ಮತ್ತು ಜನವಿರೋಧಿ ಕ್ರಮದಿಂದ ಸರ್ಕಾರ ಹಿಂದೆ ಸರಿಯಬೇಕು. ಕೆರೆಗಳನ್ನು ನಾಶ ಮಾಡಲು ಯತ್ನಿಸಿದರೆ ತೀವ್ರ ಸ್ವರೂಪದ ಹೋರಾಟ ರೂಪಿಸುತ್ತೇವೆ ಎಂದು ಒಕ್ಕೊರಲಿನಿಂದ ಎಚ್ಚರಿಸಿದರು.

ADVERTISEMENT

ಮಹಾಕಾಳಿ ಮಂದಿರದ ಗುರುದೇವ ಸ್ವಾಮೀಜಿ ನೇಗಿಲ ಯೋಗಿ ಒಕ್ಕಲಿಗರ ಸಂಘವನ್ನು ಉದ್ಘಾಟಿಸಿ ಮಾತನಾಡಿ, ‘ಎಲ್ಲ ಜಾತಿಗಳ ಜನರು ಸಾಮರಸ್ಯದಿಂದ ಬದುಕುವ ವಾತಾವರಣ ಸೃಷ್ಟಿಯಾಬೇಕು. ಹಳೇ ಮೈಸೂರು ಭಾಗದಲ್ಲಿ ಬಹುಸಂಖ್ಯಾತರಾಗಿರುವ ಒಕ್ಕಲಿಗರು ಹಿಂದುಳಿದ ಜಾತಿಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಕಷ್ಟದಲ್ಲಿರುವವರ ನೆರವಿಗೆ ಧಾವಿಸಬೇಕು ಎಂದರು.

ಹಿರಿಯ ವಕೀಲ ಸಿ.ಪುಟ್ಟಸ್ವಾಮಿ ಮಾತನಾಡಿ, ಬಸವ ಜಯಂತಿ, ಅಂಬೇಡ್ಕರ್‌ ಜಯಂತಿ, ವಾಲ್ಮೀಕಿ ಜಯಂತಿಗಳಿಗೆ ರಜೆ ನೀಡುವಂತೆ ನಾಡಪ್ರಭು ಕೆಂಪೇಗೌಡ ಜಯಂತಿಗೂ ರಜೆ ನೀಡಬೇಕು. ವಿಧಾನಸೌಧಕ್ಕೆ ಕೆಂಗಲ್‌ ಹನುಮಂತಯ್ಯ ಸೌಧ ಎಂದು ಮರುನಾಮಕರಣ ಮಾಡಬೇಕು ಎಂದು ಒತ್ತಾಯಿಸಿದರು. ಡಾ.ಬಿ.ನರಸಿಂಹಸ್ವಾಮಿ ನಾಡಪ್ರಭು ಕೆಂಪೇಗೌಡ ಅವರ ಸಾಧನೆ ಕುರಿತು ಮಾತನಾಡಿದರು.

ನೇಗಿಲ ಯೋಗಿ ಒಕ್ಕಲಿಗರ ಸಂಘದ ಅಧ್ಯಕ್ಷ ಶ್ರೀನಿವಾಸ ಅಗ್ರಹಾರ ನಿಂಗೇಗೌಡ ಮಾತನಾಡಿ, ‘ಸಂಘದಿಂದ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಸಂಕಷ್ಟದಲ್ಲಿರುವ ರೋಗಿಗಳಿಗೆ ಚಿಕಿತ್ಸಾ ವೆಚ್ಚ ನೀಡಲಾಗುತ್ತದೆ. ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಗೌರವಿಸಲಾಗುವುದು.

ತಾಲ್ಲೂಕು ಕೇಂದ್ರದಲ್ಲಿ ನಾಡಪ್ರಭು ಕೆಂಪೇಗೌಡ ಭವನ ನಿರ್ಮಿಸಲು ಪ್ರಯತ್ನಿಸಲಾಗುತ್ತದೆ ಎಂದರು. ಎನ್‌.ನಾಗೇಶ್‌, ಗಂಜಾಂ ಕೃಷ್ಣಪ್ಪ, ನಿಮಿಷಾಂಬಾ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈ.ಪ್ರಕಾಶ್‌, ಮಂಜುನಾಥ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.