ADVERTISEMENT

ಕೆರೆಗೆ ನೀರುಣಿಸುವ ಆಧುನಿಕ ಭಗೀರಥ

ಜಮೀನಿಗೆ ನೀರು ಹಾಯಿಸಲು ಎಂದು ಕೊರೆಯಿಸಿದ್ದ ಎರಡು ಕೊಳವೆ ಬಾವಿಗಳಿಂದ ಕೆರೆ ತುಂಬಿಸುತ್ತಿದ್ದಾರೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 10:28 IST
Last Updated 22 ಮಾರ್ಚ್ 2017, 10:28 IST
ಮದ್ದೂರು ತಾಲ್ಲೂಕು ಹೆಮ್ಮನಹಳ್ಳಿ ಗ್ರಾಮದಲ್ಲಿ ಹಾಲಿನ ವ್ಯಾಪಾರಿ ಕೃಷ್ಣ  ದಂಪತಿ ತಮ್ಮ ಸ್ವಂತ ಕೊಳವೆಬಾವಿಯಿಂದ ಗ್ರಾಮದ ಕೆರೆಗೆ ನೀರು ತುಂಬಿಸುತ್ತಿರುವುದು.
ಮದ್ದೂರು ತಾಲ್ಲೂಕು ಹೆಮ್ಮನಹಳ್ಳಿ ಗ್ರಾಮದಲ್ಲಿ ಹಾಲಿನ ವ್ಯಾಪಾರಿ ಕೃಷ್ಣ ದಂಪತಿ ತಮ್ಮ ಸ್ವಂತ ಕೊಳವೆಬಾವಿಯಿಂದ ಗ್ರಾಮದ ಕೆರೆಗೆ ನೀರು ತುಂಬಿಸುತ್ತಿರುವುದು.   

ಮದ್ದೂರು: ಬೇಸಿಗೆಯಿಂದ ಬಳವಳಿದಿರುವ  ಜನ, ಜಾನುವಾರುಗಳಿಗೆ ಅನುಕೂಲವಾಗಲಿ ಎಂದು ಕೃಷಿಕರೊಬ್ಬರು ತಮ್ಮ ಜಮೀನಿಗೆ ನೀರು ಹಾಯಿಸಲು ಎಂದು ಕೊರೆಯಿಸಿದ್ದ ಎರಡು ಕೊಳವೆಬಾವಿಗಳಿಂದ ಕೆರೆ ತುಂಬಿಸುತ್ತಿದ್ದಾರೆ.

ಹೆಮ್ಮನಹಳ್ಳಿ ಗ್ರಾಮದ ಹಾಲಿನ ವ್ಯಾಪಾರ ಮಾಡುವ ಕೃಷ್ಣಪ್ಪ ಮೂಲತಃ ಕೃಷಿಕರು. ಕಳೆದ ಎರಡೂವರೆ ತಿಂಗಳ ಹಿಂದೆ ಜಮೀನಿನಲ್ಲಿದ್ದ ತೆಂಗಿನ ಮರಗಳ ರಕ್ಷಣೆಗಾಗಿ ಕೊಳವೆಬಾವಿ ಕೊರೆಯಿಸಿದ್ದರು. ಈಗ ಆ ಕೊಳವೆಬಾವಿಗಳಿಂದ ಕೆರೆ ನೀರು ಹರಿಸುವ ಮೂಲಕ ‘ಆಧುನಿಕ ಭಗೀರಥ’ ನಾಗಿದ್ದಾರೆ. 

ಗ್ರಾಮದ ಜೀವನಾಡಿ ಕೆರೆ ಬತ್ತಿ ಹೋದುದ್ದನ್ನು ಕಂಡು ಮಮ್ಮಲ ಮರುಗಿದರು. ತಮ್ಮ ಜಮೀನಿಗೆ ಹರಿ ಬಿಡುತ್ತಿದ್ದ ನೀರನ್ನು ನಿಲ್ಲಿಸಿ, ಕೆರೆಯೆಡೆಗೆ ತಿರುಗಿಸುವ ಮೂಲಕ ಉದಾರತೆ ಮೆರೆದಿದ್ದಾರೆ.

ಜಮೀನಿನಲ್ಲಿರುವ ತೆಂಗಿನ ಮರಗಳು ಒಣಗುತ್ತಿದ್ದರೂ, ಕೆರೆ ತುಂಬಿಸುವ ಕಾರ್ಯ ಕಂಡು ಜಿಲ್ಲಾಡಳಿತವು ಕೃಷ್ಣ ಅವರಿಗೆ ತಿಂಗಳಿಗೆ ₹ 18 ಸಾವಿರ ನೆರವು  ನೀಡುವುದಾಗಿ ತಿಳಿಸಿತು. ಆದರೆ, ಆ ನೆರವನ್ನು ಕೃಷಿಕರು ನಿರಾಕರಿಸಿದ್ದಾರೆ.

‘ಗ್ರಾಮದವನಾಗಿ ಸಣ್ಣದಾದ ಸೇವೆ ಮಾಡುತ್ತಿದ್ದೇನೆ. ಈ ಸೇವೆಗೆ ಹಣ ಪಡೆಯುವುದು ಸರಿಯಲ್ಲ’ ಎನ್ನುತ್ತಾರೆ ಅವರು.ಹೆಮ್ಮನಹಳ್ಳಿ ಗ್ರಾಮ ಪಂಚಾಯತಿ ವತಿಯಿಂದಲೂ ಶಾಸಕರ ಅನುದಾನದಲ್ಲಿ ಹೊಸದಾಗಿ ಕೊಳವೆಬಾವಿ ಕೊರೆಯಿಸಿ ಕೆರೆಗೆ ನೀರು ತುಂಬಿಸುವ ಕೆಲಸಕ್ಕೆ ಮುಂದಾಗಿದೆ.

‘ಹೆಮ್ಮನಹಳ್ಳಿ ಕೆರೆ ನಮ್ಮೂರಿನ ಹೆಮ್ಮೆಯ ಪ್ರತೀಕ. ಈ ಕೆರೆ ಹಿಂದೆ ಸರೋವರದಂತೆ ಕಂಗೊಳಿಸುತ್ತಿತ್ತು. ಈ ವರ್ಷ ತೀವ್ರ ಬರಗಾಲದಿಂದ ನೀರಿಲ್ಲದೇ ಒಣಗಿದೆ. ಪ್ರಾಣಿ, ಪಕ್ಷಿಗಳ ಸಂಕಷ್ಟ ಕಂಡು ನೀರು ಹರಿಸುವ ನಿರ್ಧಾರವನ್ನು  ಸ್ವ ಇಚ್ಛೆಯಿಂದ ಕೈಗೊಂಡೆ’ ಎನ್ನುತ್ತಾರೆ ಕೃಷ್ಣ.

-ಮಧುಸೂದನ ಮದ್ದೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT