ADVERTISEMENT

ಕೆರೆ ತುಂಬಿಸಲು ಸರ್ಕಾರಕ್ಕೆ ಮನವಿ ಮಾಡಿ

ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಅಧ್ಯಕ್ಷೆ ಜೆ.ಪ್ರೇಮಕುಮಾರಿ ಸಲಹೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 6:43 IST
Last Updated 18 ಜುಲೈ 2017, 6:43 IST

ಮಂಡ್ಯ: ಜಿಲ್ಲೆಯಲ್ಲಿ 45,000 ತೆಂಗಿನ ಸಸಿಗಳು ಸತ್ತುಹೋಗಿವೆ. ಜನ ಜಾನುವಾರುಗಳಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಕೂಡಲೇ ಸರ್ಕಾರಕ್ಕೆ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಟ್ಟು, ಕೆರೆ– ಕಟ್ಟೆಗಳಿಗೆ ನೀರು ತುಂಬಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜೆ.ಪ್ರೇಮಕುಮಾರಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಭತ್ತ ಸೇರಿದಂತೆ ಮುಂದಿನ ಬೆಳೆ ಬೆಳೆಯುವುದಾದರೂ ಹೇಗೆ? ಈಗಾಗಲೇ ರೈತರು ಬರಗಾಲದಿಂದ ತತ್ತರಿಸಿ ಹೋಗಿದ್ದಾರೆ. ಜಾನುವಾರುಗಳಿಗೆ ಕುಡಿಯಲೂ ನೀರು ಸಿಗುತ್ತಿಲ್ಲ. ಜಿಲ್ಲೆಯ ಕೆರೆ ಕಟ್ಟೆಗಳು ಒಣಗಿದ್ದು, ಅಂತರ್ಜಲ ಕ್ಷೀಣಿಸುತ್ತಿದೆ. ಇದರಿಂದ ಪಂಪ್‌ಸೆಟ್‌ಗಳಿಗೂ ಹಾನಿಯಾಗಿದೆ. ಇದೆಲ್ಲದರ ಮಾಹಿತಿಯನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ADVERTISEMENT

ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಕೆ.ರುದ್ರೇಶ್‌ ಮಾತನಾಡಿ,‘ ಇಲ್ಲಿಯವರೆಗೆ 20,000 ತೆಂಗಿನ ಸಸಿ ವಿತರಿಸಲಾಗಿದೆ. ಇನ್ನೂ 1.60 ಲಕ್ಷ ತೆಂಗಿನ ಸಸಿ ಬಾಕಿ ಇವೆ. ಈಗಾಗಲೇ 45,000 ತೆಂಗಿನ ಸಸಿಗಳು ಸತ್ತು ಹೋಗಿರುವುದರ ಬಗ್ಗೆ ಮಾಹಿತಿ ಸಿಕ್ಕಿದೆ. ಇದರಿಂದ 6,000 ಹೆಕ್ಟೇರ್‌ನಷ್ಟು ತೆಂಗಿನ ಇಳುವರಿ ಕಡಿಮೆ ಆಗಿದೆ ಎಂದು ಸರ್ಕಾರಕ್ಕೆ ಪತ್ರವನ್ನೂ ಬರೆಯಲಾಗಿದೆ’ ಎಂದು ಸಭೆಗೆ ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತೊಂದರೆ ಆಗದಂತೆ ಎಚ್ಚರ ವಹಿಸಬೇಕು. ಟ್ಯಾಂಕ್‌ ಮೂಲಕ ನೀರು ಸರಬರಾಜು ಮಾಡುತ್ತಿರುವವರಿಗೆ ಬಿಲ್‌ ಮಾಡಿಸಿಕೊಡಬೇಕು. ಕೇವಲ 400 ಅಡಿಗೆ ಕೊಳವೆ ಬಾವಿ ತೋಡಿಸಿ ನೀರು ಬರದಿದ್ದರೆ ನಿಲ್ಲಿಸಲಾಗುತ್ತಿದೆ. ಅದನ್ನು 600ರಿಂದ 800 ಅಡಿಗಳವರೆಗೂ ತೋಡಿಸಲು ಕ್ರಮ ವಹಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಕುಡಿಯುವ ನೀರಿನ ಕಾರ್ಯಪಾಲಕ ಎಂಜಿನಿಯರ್‌ ರಾಮಕೃಷ್ಣ ಅವರಿಗೆ ತಿಳಿಸಿದರು.

ಮದ್ಯದ ಅಂಗಡಿಗಳನ್ನು ಶಾಲೆಗಳ ಬಳಿ ತೆರೆಯದಂತೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ಇದರಲ್ಲಿ ಅಧಿಕಾರಿಗಳು ಬೇಜವಾಬ್ದಾರಿತನ ತೋರಬಾರದು. ಜಿಲ್ಲೆಯಲ್ಲಿ ಈಗಾಗಲೇ ಹಲವು ದೂರುಗಳು ಬಂದಿವೆ. ಇದರ ಬಗ್ಗೆ ಯಾವ ಕ್ರಮ ವಹಿಸಿದ್ದೀರಿ ಎಂದು ಅಬಕಾರಿ ಅಧಿಕಾರಿಗೆ ಪ್ರಶ್ನೆ ಮಾಡಿದರು. ಮುಂದಿನ ಸಭೆಗೆ ಅಬಕಾರಿ ಡಿ.ಸಿ. ಹಾಜರಾಗಬೇಕು ಎಂದು ತಾಕೀತು ಮಾಡಿದರು.

ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಕೆ.ಮೋಹನ್‌ ಮಾತನಾಡಿ,‘ಡೆಂಗಿ, ಚಿಕೂನ್‌ಗುನ್ಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ರೋಗಿಗಳಿಗೆ  ಸೂಕ್ತ ಚಿಕಿತ್ಸೆ ನೀಡಲು ಕ್ರಮ ವಹಿಸಲಾಗಿದೆ’ ಎಂದು ಹೇಳಿದಾಗ ಇದಕ್ಕೆ ಅಧ್ಯಕ್ಷರು ಪ್ರತಿಕ್ರಿಯಿಸಿ,‘ಅಗತ್ಯ ಆರೋಗ್ಯ ಸೇವೆ ನೀಡಲು ವೈದ್ಯರು ಸಿದ್ಧರಿರಬೇಕು. ಬೇರೆ ಕಾರಣ ಹೇಳಿ ರೋಗಿಗಳಿಗೆ ತೊಂದರೆ ಕೊಡಬಾರದು’ ಎಂದು ತಾಕೀತು ಮಾಡಿದರು.

ಉಪಾಧ್ಯಕ್ಷೆ ಗಾಯತ್ರಿ, ಸ್ಥಾಯಿ ಸಮಿತಿ ಅಧ್ಯಕ್ಷ ಬೋರಯ್ಯ ಇದ್ದರು.

**

ಶಿಥಿಲ ಕಟ್ಟಡ ಕೆಡವಲು ತಾಕೀತು

ಮಂಡ್ಯ: ಜಿಲ್ಲೆಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಅಂಗನವಾಡಿ ಕಟ್ಟಡ ಹಾಗೂ ಶಾಲಾ ಕಟ್ಟಡವನ್ನು ನೆಲಸಮ ಮಾಡಬೇಕು. ಮಕ್ಕಳು ಜೀವ ಭಯದಲ್ಲಿ ಪಾಠ ಕೇಳುವ ಪರಿಸ್ಥಿತಿ ಇದೆ. ಇದರ ಬಗ್ಗೆ ಕ್ರಮ ವಹಿಸಬೇಕು ಎಂದು ಅಧ್ಯಕ್ಷರು ಸೂಚಿಸಿದರು.

ಇದಕ್ಕೆ ಡಿಡಿಪಿಐ ಶಿವಮಾದಪ್ಪ ಪ್ರತಿಕ್ರಿಯಿಸಿ, ‘ಈ ಬಗ್ಗೆ ಕ್ರಮ ವಹಿಸಲಾಗುವುದು. ವರದಿ ತರಿಸಿಕೊಂಡು ಭೇಟಿ ನೀಡಿ ಪರಿಶೀಲನೆ ನಡೆಸುತ್ತೇನೆ’ ಎಂದು ಉತ್ತರಿಸಿದರು.

ಸ್ಥಾಯಿ ಸಮಿತಿ ಅಧ್ಯಕ್ಷ ಎಚ್‌.ಎನ್‌.ಯೋಗೇಶ್‌ ಮಾತನಾಡಿ,‘ಪಾಂಡವಪುರ ತಾಲ್ಲೂಕಿನ ಎರೆಗೋಡನಹಳ್ಳಿಯ ಶಂಭುಲಿಂಗೇಶ್ವರ ಪ್ರೌಢಶಾಲೆಯಲ್ಲಿನ ಪರಿಸ್ಥಿತಿ ಹದಗೆಟ್ಟಿದೆ. ಮಕ್ಕಳಿಗೆ ವರ್ಗಾವಣೆ ಪತ್ರ(ಟಿ.ಸಿ.) ಕೊಡುತ್ತಿಲ್ಲ. ಪೋಷಕರು ಶಾಲೆ ಎದುರು ಪ್ರತಿಭಟನೆ ಮಾಡುತ್ತಿದ್ದಾರೆ ಯಾವ ಕ್ರಮವನ್ನೂ ಅಧಿಕಾರಿಗಳು ತೆಗೆದುಕೊಳ್ಳುತ್ತಿಲ್ಲ’ ಎಂದು ಪ್ರಶ್ನಿಸಿದರು.

ಶಾಲೆಯಲ್ಲಿ ಹೊಂದಾಣಿಕೆಯ ಕೊರತೆ ಇದೆ. ವ್ಯವಸ್ಥಾಪಕರಲ್ಲೇ ಗೊಂದಲಗಳಿವೆ. ಈ ಬಗ್ಗೆ ವರದಿ ತರಿಸಿಕೊಂಡು ಕ್ರಮ ವಹಿಸುತ್ತೇನೆ ಎಂದು ಶಿವಮಾದಪ್ಪ ಉತ್ತರಿಸಿದರು. ಶಾಲೆಗಳ ಬಗ್ಗೆ ಸಮಸ್ಯೆಗಳಿದ್ದರೆ ಅವುಗಳನ್ನು ಡಿಡಿಪಿಐ ಗಮನಕ್ಕೆ ತರುವುದು ಒಳ್ಳೆಯದು. ಇದರಿಂದ ಸಮಸ್ಯೆ ಬಗೆಹರಿಸಬಹುದು ಎಂದು ಸಿಇಒ ಶರತ್‌ ಹೇಳಿದಾಗ, ಅಧ್ಯಕ್ಷರು ಪ್ರತಿಕ್ರಿಯಿಸಿ,‘ಶಾಲೆಗಳ ಬಗ್ಗೆ ದೂರುಗಳು ಬಂದರೆ ಕಾನೂನು ಪ್ರಕಾರ ಕ್ರಮ ವಹಿಸಲಾಗುವುದು’ ಎಂದು ದನಿಗೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.