ADVERTISEMENT

ಕೇಂದ್ರ ಸ್ಥಾನದಲ್ಲೇ ವಾಸ; ವೈದ್ಯರಿಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2017, 8:46 IST
Last Updated 7 ನವೆಂಬರ್ 2017, 8:46 IST

ಮಂಡ್ಯ: ಕೇಂದ್ರ ಸ್ಥಾನದಲ್ಲಿ ವಾಸಿಸದ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಆಸ್ಪತ್ರೆಗಳ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿ ವೈದ್ಯಕೀಯ ಶಿಕ್ಷಣ ಇಲಾಖೆ ರಾಜ್ಯದ ಎಲ್ಲಾ ಸಂಸ್ಥೆಗಳಿಗೆ ಸುತ್ತೋಲೆ ಹೊರಡಿಸಿದೆ.

ಮದ್ದೂರು ತಾಲ್ಲೂಕು ತೊರೆಶೆಟ್ಟಿಹಳ್ಳಿ ಬಳಿ ಈಚೆಗೆ ಸಂಭವಿಸಿದ ಮದುವೆ ದಿಬ್ಬಣದ ಕ್ಯಾಂಟರ್‌ ಅಪಘಾತ ಪ್ರಕರಣದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಲು ನಗರದ ಮಿಮ್ಸ್‌ ಆಸ್ಪತ್ರೆ ವೈದ್ಯರು ಕೇಂದ್ರ ಸ್ಥಾನದಲ್ಲಿ ಇಲ್ಲದಿರುವುದೇ ಕಾರಣ ಎಂಬ ದೂರು ಕೇಳಿ ಬಂದ ಸಂದರ್ಭದಲ್ಲಿ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ವಿ.ಮಂಜುಳಾ ನ. 4ರಂದು ಈ ಸುತ್ತೋಲೆ ಹೊರಡಿಸಿದ್ದಾರೆ.

ವೈದ್ಯರು ಹಾಗೂ ಸಿಬ್ಬಂದಿ ಕೇಂದ್ರ ಸ್ಥಳದಲ್ಲೇ ವಾಸಿಸಬೇಕು ಎಂಬ ನಿಯಮವಿದೆ. ಆದರೆ ಕೆಲವೆಡೆ ವೈದ್ಯರು ಬೇರೆ ನಗರಗಳಲ್ಲಿ ವಾಸಿಸುತ್ತಿದ್ದಾರೆ. ಇದನ್ನು ಇಲಾಖೆ ಸಹಿಸುವುದಿಲ್ಲ. ನಿರ್ದೇಶಕರು ಹಾಗೂ ವೈದ್ಯಕೀಯ ಅಧೀಕ್ಷಕರು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಅನುಮತಿ ಇಲ್ಲದೆ ಕೇಂದ್ರಸ್ಥಾನ ಬಿಡುವಂತಿಲ್ಲ. ವೈದ್ಯರು ಹಾಗೂ ಇತರ ಸಿಬ್ಬಂದಿ ನಿರ್ದೇಶಕರ ಅನುಮತಿ ಪಡೆಯದೇ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ಸುತ್ತೋಲೆ ಸೂಚಿಸಿದೆ.

ADVERTISEMENT

ರೋಗಿಗಳು ಒಂದು ವಾರ್ಡ್‌ನಿಂದ ಇನ್ನೊಂದು ವಾರ್ಡ್‌ಗೆ ತೆರಳುವಾಗ ಆಸ್ಪತ್ರೆ ಸಿಬ್ಬಂದಿ ವ್ಹೀಲ್‌ ಚೇರ್‌, ಸ್ಟ್ರೆಚರ್‌ ನೀಡದೆ ಇರುವ ಬಗ್ಗೆ ಕೆಲ ಆಸ್ಪತ್ರೆಗಳಲ್ಲಿ ದೂರು ಬಂದಿವೆ.  ಮುಂದೆ ಈ ರೀತಿ ಸಮಸ್ಯೆಯಾದರೆ ನಿರ್ದೇಶಕರು ಹಾಗೂ ಅಧೀಕ್ಷಕರನ್ನು ಹೊಣೆಗಾರರನ್ನಾಗಿ ಮಾಡಿ ಕ್ರಮ ಜರುಗಿಸಲಾಗುವುದು. ರಸ್ತೆ ಅಪಘಾತದಂತಹ ತುರ್ತು ಸಂದರ್ಭಗಳಲ್ಲಿ ಗಾಯಾಳುಗಳು ಸರ್ಕಾರಿ ಆಸ್ಪತ್ರೆಗೆ ಬರುತ್ತಾರೆ. ಅಂತಹ ಸಂದರ್ಭದಲ್ಲಿ ತುರ್ತು ಚಿಕಿತ್ಸಾ ವಿಭಾಗ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಸನ್ನದ್ಧವಾಗಿಬೇಕು.

ತಕ್ಷಣ ನಿರ್ದೇಶಕರು ಹಾಗೂ ಅಧೀಕ್ಷಕರು ತಕ್ಷಣ ಸ್ಥಳಕ್ಕೆ ಬರಬೇಕು. ಹೆಚ್ಚುವರಿ ಸಿಬ್ಬಂದಿಯನ್ನು ಕರೆಸಿ ಗಾಯಾಳುಗಳಿಗೆ ಚಿಕಿತ್ಸೆ ನೀಡಬೇಕು ಎಂದು ಸೂಚಿಸಿದೆ. ‘ವೈದ್ಯರು ಕೇಂದ್ರಸ್ಥಾನದಲ್ಲೇ ವಾಸಿ ಸಬೇಕು ಎಂದು ಹಲವು ಬಾರಿ ಸೂಚನೆ ನೀಡಿದ್ದೇವೆ. ಅದು ಪಾಲನೆಯಾಗದ ಕಾರಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ. ಜೊತೆಗೆ ತುರ್ತು ಅಪಘಾತ ಸಂದರ್ಭದಲ್ಲಿ ವೈದ್ಯರು ಯಾವ ರೀತಿ ಚಿಕಿತ್ಸೆ ನೀಡಬೇಕು ಎಂಬ ಬಗ್ಗೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ’ ಎಂದು ವಿ.ಮಂಜುಳಾ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.