ADVERTISEMENT

ಕೌನ್ಸೆಲಿಂಗ್‌: ಮೊದಲ ದಿನ 360 ಸೀಟು ಹಂಚಿಕೆ

ಜಿಲ್ಲೆಯ ವಸತಿ ಶಾಲೆಗಳ ಪ್ರವೇಶ, ಅಂಗವಿಕಲರು ಹಾಗೂ ಬಾಲಕಿಯರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 22 ಮೇ 2018, 10:03 IST
Last Updated 22 ಮೇ 2018, 10:03 IST

ಮಂಡ್ಯ: ನಗರದ ಉರ್ದು ಪ್ರಾಥಮಿಕ ಶಾಲೆ ಆವರಣದಲ್ಲಿ ಸೋಮವಾರ ವಸತಿ ಶಾಲೆಗಳ ಪ್ರವೇಶಕ್ಕೆ ಕೌನ್ಸೆಲಿಂಗ್‌ ಆರಂಭವಾಯಿತು. ಪರೀಕ್ಷೆ ಬರೆದು ಅರ್ಹತೆ ಹೊಂದಿದ್ದ ಮಕ್ಕಳಿಗೆ ಜಿಲ್ಲೆಯಲ್ಲಿರುವ ವಸತಿ ಶಾಲೆಗಳಿಗೆ ಸೀಟು ಹಂಚಲಾಯಿತು.

ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಅಂಬೇಡ್ಕರ್, ಇಂದಿರಾಗಾಂಧಿ, ಏಕಲವ್ಯ ವಸತಿ ಶಾಲೆಗಳಿಗೆ ಪ್ರವೇಶ ಪಡೆಯಲು ಜಿಲ್ಲೆಯ 4,736 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಜಿಲ್ಲೆಯಲ್ಲಿರುವ 37 ವಸತಿ ಶಾಲೆಗಳಲ್ಲಿ ಲಭ್ಯವಿರುವ 1,850 ಸೀಟುಗಳಿಗೆ ವಿದ್ಯಾರ್ಥಿಗಳ ಶ್ರೇಣಿ ಪಟ್ಟಿ ತಯಾರಿಸಿ ಸೀಟು ಹಂಚಲಾಯಿತು. ಸೋಮವಾರದಿಂದ ಮೇ 25ರವರೆಗೆ ಕೌನ್ಸೆಲಿಂಗ್‌ ನಡೆಯಲಿದೆ. ಸೋಮವಾರ ಅಂಗವಿಕಲ ಹಾಗೂ ಪರಿಶಿಷ್ಟ ಜಾತಿ ಬಾಲಕಿಯರ ವಿಭಾಗದ ಒಟ್ಟು 360 ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್‌ ಮೂಲಕ ಸೀಟು ಹಂಚಲಾಯಿತು.

ಕೌನ್ಸೆಲಿಂಗ್‌ ಅಂಗವಾಗಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಮಕ್ಕಳು, ಪೋಷಕರು ಬಂದಿದ್ದರು. ಅವರಿಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ಅಗತ್ಯ ಮಾಹಿತಿ ನೀಡಿದರು. ಪೂರ್ವ ಸಿದ್ಧತೆಯೊಂದಿಗೆ ವಸತಿ ಶಾಲೆಗಳ ಸಿಬ್ಬಂದಿ ಮಾಹಿತಿ ಕೇಂದ್ರ ತೆರೆದು ಪೋಷಕರಿಗೆ ಮಾಹಿತಿ ನೀಡಿದರು. ಜಿಲ್ಲೆಯ 37 ವಸತಿ ಶಾಲೆಗಳ ಮಾಹಿತಿ ಹಾಗೂ ವಿಳಾಸವನ್ನು ಸೂಚನಾ ಫಲಕದಲ್ಲಿ ಪ್ರದರ್ಶಿಸಲಾಗಿತ್ತು. ಮಕ್ಕಳು ಹಾಗೂ ಪೋಷಕರಿಗೆ ಯಾವುದೇ ಗೊಂದಲ ಉಂಟಾಗದಂತೆ ದಾಖಲೆ ಪರಿಶೀಲನೆಗೆ, ಸಂದರ್ಶನಕ್ಕೆ ಪ್ರತ್ಯೇಕ ವಿಭಾಗ ಮಾಡಲಾಗಿತ್ತು. ಪೋಷಕರು ಆಯ್ಕೆ ಮಾಡಿಕೊಂಡ ಶಾಲೆಗೆ ಹೆಸರು ನೋಂದಾಯಿಸುವ ವಿಭಾಗವನ್ನು ಪ್ರತ್ಯೇಕವಾಗಿತ್ತು. ಸಮಾಜ ಕಲ್ಯಾಣ ಇಲಾಖೆ ಹೆಚ್ಚುವರಿ ಉಪ ನಿರ್ದೇಶಕಿ ನಾಗಲಕ್ಷ್ಮಿ ಅವರು ವಿದ್ಯಾರ್ಥಿಗಳ ಶಾಲೆ ಆಯ್ಕೆಯನ್ನು ಖಚಿತಪಡಿಸಿ ಆದೇಶ ಪ್ರತಿ ನೀಡಿದರು.

ADVERTISEMENT

ಜಾತ್ರೆಯಾದ ಶಾಲಾ ಆವರಣ: ಜಿಲ್ಲೆಯಾದ್ಯಂತ ಬಂದ ಪೋಷಕರು ಬೆಳಿಗ್ಗೆಯಿಂದಲೂ ತಮ್ಮ ಮಕ್ಕಳ ಪ್ರವೇಶ ಪತ್ರದೊಂದಿಗೆ ಶಾಲೆ ಆವರಣದಲ್ಲಿ ಕಾಯುತ್ತಾ ಕುಳಿತುಕೊಂಡಿದ್ದರು. ತಮ್ಮ ಊರಿಗೆ ಹತ್ತಿರದಲ್ಲಿರುವ ಮಾದರಿ ವಸತಿ ಶಾಲೆಯನ್ನು ಆಯ್ಕೆ ಮಾಡಿಕೊಳ್ಳಲು ಸಾಲುಗಟ್ಟಿ ನಿಂತಿದ್ದರು. ಶಾಲೆ ಆವರಣ ಜಾತ್ರೆಯಂತಾಗಿತ್ತು. ಅಲ್ಲಲ್ಲಿ ಸಣ್ಣ ಪುಟ್ಟ ವ್ಯಾಪಾರಸ್ಥರು ತಿಂಡಿ, ತಿನಿಸು, ಐಸ್‌ಕ್ರೀಂ ಮಾರಾಟ ಮಾಡುತ್ತಿದ್ದರು.

ಜಿಲ್ಲಾ ಪಂಚಾಯಿತಿ ಸಿಇಒ ಬಿ.ಶರತ್ ಕೌನ್ಸೆಲಿಂಗ್ ಉದ್ಘಾಟನೆ ಮಾಡಿದರು. ‘ಜಿಲ್ಲೆಯ ಯಾವುದೇ ಭಾಗದಲ್ಲಿ ಸೀಟು ಲಭ್ಯವಿದ್ದರೂ ಆ ಶಾಲೆಯ ಪ್ರವೇಶ ಪಡೆಯಬೇಕು. ಎಲ್ಲಾ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಇಂಗ್ಲಿಷ್‌ ಮಾಧ್ಯಮದ ಶಿಕ್ಷಣ ದೊರೆಯುತ್ತಿದ್ದು ಆಯ್ಕೆಯಾದ ಎಲ್ಲಾ ಮಕ್ಕಳು ಶ್ರದ್ಧೆಯಿಂದ ಕಲಿತು ಉತ್ತಮ ಅಂಕ ಪಡೆಯಬೇಕು. ಶಾಲೆಗೆ ಹಾಗೂ ಪೋಷಕರಿಗೆ ಕೀರ್ತಿ ತರಬೇಕು. ಪೋಷಕರು ಮಕ್ಕಳನ್ನು ವಸತಿ ಶಾಲೆಯಲ್ಲಿ ಬಿಟ್ಟ ನಂತರ ಪದೇಪದೇ ಊರಿಗೆ ಕರೆದುಕೊಂಡು ಹೋಗುವ ಅಭ್ಯಾಸ ಬಿಡಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.