ADVERTISEMENT

ಗೆಳತಿಯ ಜೀವ ಉಳಿಸಿದ ‘ಚಂದನಾ’

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2017, 9:54 IST
Last Updated 15 ನವೆಂಬರ್ 2017, 9:54 IST
ಚಂದನಾ
ಚಂದನಾ   

ಭಾರತೀನಗರ: ಅಣ್ಣೂರು ಗ್ರಾಮದಲ್ಲಿ ಈಚೆಗೆ ಚಪ್ಪಲಿಗೆ ಮೆತ್ತಿಕೊಂಡ ಸಗಣಿಯನ್ನು ಮನೆಯ ಎದುರಿನಲ್ಲಿದ್ದ ಕಟ್ಟೆಯಲ್ಲಿ ತೊಳೆಯಲು ಹೋಗಿ ನೀರಿನಲ್ಲಿ ಜಾರಿ ಬಿದ್ದ ಮೂರು ವರ್ಷದ ಬಾಲಕಿಯೊಬ್ಬಳನ್ನು ಆಕೆಯ ಗೆಳತಿ ಸಮಯ ಪ್ರಜ್ಞೆಯಿಂದ ಬದುಕಿಸಿದ್ದಾಳೆ.

ಅಣ್ಣೂರು ಗ್ರಾಮದ ಚಂದ್ರಶೇಖರ್ ಮತ್ತು ವಿನುತಾ ಅವರ ಮೂರು ವರ್ಷದ ಪುತ್ರಿ ರಿತು ಬದುಕುಳಿದ ಬಾಲಕಿ. ಅಣ್ಣೂರು ಗ್ರಾಮದ ಅಜಿತ್‌ ಕುಮಾರ್ ಹಾಗೂ ಶಿಲ್ಪಾ ದಂಪತಿ ಪುತ್ರಿ ಚಂದನಾ ಸಮಯಪ್ರಜ್ಞೆ ಹಾಗೂ ಸಾಹಸದಿಂದ ಗ್ರಾಮಸ್ಥರ ಮನೆ ಮಾತಾಗಿದ್ದಾಳೆ.

ಘಟನೆ ವಿವರ: ನ.10 ರ ಸಂಜೆ 5 ಗಂಟೆ ಸಮಯದಲ್ಲಿ ಚಂದನಾ ಅಂಗಡಿಯಿಂದ ತಿಂಡಿ ತೆಗೆದುಕೊಂಡು ಮನೆಗೆ ಬರುತ್ತಿದ್ದಳು. ಅದೇ ಸಂದರ್ಭದಲ್ಲಿ ರಸ್ತೆ ಬದಿಯಲ್ಲೇ ಇದ್ದ 8 ಅಡಿ ಆಳದ ಕಟ್ಟೆಗೆ ರಿತು ಜಾರಿ ಬಿದ್ದಿದ್ದಾಳೆ.

ADVERTISEMENT

ಇದನ್ನು ಗಮನಿಸಿದ ಚಂದನಾ ಅಳುತ್ತ ಮನೆಗೆ ಓಡಿಹೋಗಿ ತಂದೆಗೆ ವಿಷಯ ತಿಳಿಸಿದ್ದಾರೆ. ತಂದೆ ಆಕೆಯ ಮಾತನ್ನ ನಂಬಿಲ್ಲ. ನಂತರ ಆಕೆ ರಿತು ಮನೆಗೆ ತೆರಳಿ ಆಕೆಯ ಪೋಷಕರಿಗೂ ವಿಷಯ ತಿಳಿಸಿದಾಗ ಅವರೂ ನಂಬಿಲ್ಲ. ಇದರಿಂದ ಧೃತಿಗೆಟ್ಟ ಚಂದನಾ ತಂದೆಯ ಮುಂದೆ ಜೋರಾಗಿ ಅಳಲಾರಂಭಿಸಿ ಸಹಾಯಕ್ಕೆ ಬರುವಂತೆ ಕೋರಿದಾಗ ಅವರು ಹೊರಗೆ ಬಂದಿದ್ದಾರೆ.

ಅಷ್ಟರಲ್ಲಿ ರಿತು ತಾಯಿ ಕೂಡ ಮಗಳನ್ನು ಅಕ್ಕಪಕ್ಕ ಹುಡುಕಾಡಿ ಕೂಗಿಕೊಳ್ಳಲಾರಂಬಿಸಿದ್ದಾರೆ. ಅಜಿತ್‌ಕುಮಾರ್ ಕಟ್ಟೆಗೆ ಇಳಿದು ಹುಡುಕಾಡಿದಾಗ ರಿತು ದೇಹ ಕಾಲಿಗೆ ಸಿಕ್ಕಿದ್ದು, ತಕ್ಷಣ ಎತ್ತಿಕೊಂಡಿದ್ದಾರೆ. ಆ ಸಂದರ್ಭರಿತು ಪ್ರಜ್ಞೆ ತಪ್ಪಿ ಬಾಯಿಯಿಂದ ನಾಲಿಗೆ ಹೊರಗೆ ಬಂದಿತ್ತು. ಆ ಸಂದರ್ಭದಲ್ಲಿ ಅಜಿತ್ ಕುಮಾರ್ ಮಗು ಕುಡಿದಿದ್ದ ನೀರನ್ನು ಹೊರಗೆ ತೆಗೆದು ಬಾಯಿಯಿಂದ ಉಸಿರು ನೀಡಿದಾಗ ಮಗು ಕಣ್ಣು ಬಿಟ್ಟಿದೆ.

ತಕ್ಷಣ ಭಾರತೀನಗರ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. 2 ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ರಿತು ಆಸ್ಪತ್ರೆಯಿಂದ ಮನೆಗೆ ಮರಳಿದ್ದಾಳೆ. ಚಂದನಾ ಮತ್ತು ರಿತು ಮನೆ ಅಕ್ಕಪಕ್ಕದಲ್ಲೇ ಇದೆ. ಮನೆಯ ಹತ್ತಿರವೇ ಇರುವ ಅಂಗನವಾಡಿಗೆ ಹೋಗುತ್ತಾರೆ.

‘ರಿತು ನೀರಿನಲ್ಲಿ ಬಿದ್ದ ತಕ್ಷಣ ಚಂದನಾ ತೀವ್ರ ಒತ್ತಡ ಹಾಕದಿದ್ದರೆ, ನಮ್ಮ ಮಗಳು ಉಳಿಯುತ್ತಿರಲಿಲ್ಲ. ನಮ್ಮ ಮಗಳನ್ನು ಆಕೆಯ ಗೆಳತಿ ಉಳಿಸಿಕೊಂಡಳು’ ಎನ್ನುತ್ತಾರೆ ರಿತು ತಾಯಿ ವಿನುತಾ.

ಮನೆಯ ಮುಂದೆ ಕಟ್ಟೆಯಿದೆ. ಸುತ್ತಲು ಯಾವುದೇ ತಡೆಗೋಡೆಯಿಲ್ಲ. ತಕ್ಷಣ ಅದರ ಸುತ್ತ ತಡೆಗೋಡೆ ನಿರ್ಮಿಸಿ. ಇಂತಹ ಅಪಾಯಗಳು ಜರುಗದಂತೆ ಕ್ರಮ ಕೈಗೊಳ್ಳಬೇಕೆಂದು ಮಗುವನ್ನು ರಕ್ಷಿಸಿದ ಅಜಿತ್‌ಕುಮಾರ್ ಹೇಳುತ್ತಾರೆ. ಬಾಲಕಿ ಚಂದನಾ ಅವರ ಸಮಯ ಪ್ರಜ್ಞೆ, ಆಕೆ ತಂದೆಯ ಮೇಲೆ ಹಾಕಿದ ಒತ್ತಡ, ಗ್ರಾಮದ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.