ADVERTISEMENT

ಜನರಲ್ಲಿ ಯೋಜನೆಗಳ ಅರಿವಿನ ಕೊರತೆ

ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ದೊರೆಯುವ ಸೇವಾ ಸೌಲಭ್ಯ: ಜಿ.ಪಂ. ಸದಸ್ಯರಿಗೆ ಮಾಹಿತಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 10:19 IST
Last Updated 22 ಮಾರ್ಚ್ 2017, 10:19 IST

ಮಂಡ್ಯ: ಸರ್ಕಾರದ ಯೋಜನೆಗಳ ಬಗ್ಗೆ ಜನಪ್ರತಿನಿಧಿಗಳು ತಿಳಿದುಕೊಂಡರೆ, ಅದು ಜನರಿಗೆ ಯೋಜನೆ ತಲುಪಿಸಲು ಸಹಕಾರಿ ಆಗುತ್ತದೆ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೆ. ಶಿವಾನಂದ್‌ ಸಲಹೆ ನೀಡಿದರು.

ನಗರದಲ್ಲಿರುವ ಜಿಲ್ಲಾ ತರಬೇತಿ ಕೇಂದ್ರದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಂಗಳವಾರ ನಡೆದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ದೊರೆಯುವ ಸೇವಾ ಸೌಲಭ್ಯಗಳ ಕುರಿತು ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಮಾಹಿತಿ ನೀಡುವ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಜನಪ್ರತಿನಿಧಿಗಳು ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಅಡಿಯಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಜನರಿಗೆ ತಿಳಿಸಲು ಹಾಗೂ ಸೌಲಭ್ಯ ಒದಗಿಸಲು ಇದು ಸಹಕಾರಿ ಆಗುತ್ತದೆ ಎಂದರು.

ಆರೋಗ್ಯ ಕಾರ್ಯಕ್ರಮ ಹಾಗೂ ವಿವಿಧ ಇಲಾಖೆಗಳ ಯೋಜನೆಗಳ ಅರಿವು ಜನರಿಗೆ ಇಲ್ಲ. ಹಾಗಾಗಿ ಯೋಜನೆಗಳನ್ನು ಅವರಿಗೆ ತಲುಪಿಸಿ ಸಾಧ್ಯವಾಗುತ್ತಿಲ್ಲ. ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.

ಸ್ವಚ್ಛತೆ, ಪೌಷ್ಟಿಕ ಆಹಾರ ಪೂರೈಕೆ, ಜೀವನಶೈಲಿಯಿಂದಾಗಿ ಆರೋಗ್ಯಕರ ಜೀವನ ನಡೆಸಲು ಕಷ್ಟ ಆಗಿದೆ. ಜನಸಂಖ್ಯೆಯಲ್ಲಿನ ಸ್ಥಿರತೆ ಒಂದು ಸವಾಲಾಗಿ ಪರಿಣಿಮಿಸಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ವಿಮಾ ಸೌಲಭ್ಯ ಬಹಳ ಕಡಿಮೆ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜೆ. ಪ್ರೇಮಕುಮಾರಿ ಅವರು, ಜನಪ್ರತಿನಿಧಿಗಳಿಗೆ ಯೋಜನೆಗಳ ಬಗ್ಗೆ ತಿಳಿಸಿದರೆ, ಜನರೊಂದಿಗೆ ಇರುವ ಅವರು ನೇರವಾಗಿ ಅವರಿಗೆ ತಿಳಿಸುತ್ತಾರೆ ಎಂದರು.

ಜಿ.ಪಂ ಉಪಾಧ್ಯಕ್ಷೆ ಗಾಯಿತ್ರಿ ರೇವಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಚ್.ಎನ್. ಯೋಗೇಶ್, ಬೋರಯ್ಯ, ಡಾ. ಭವಾನಿ ಶಂಕರ್, ಡಾ.ಎಂ.ಸಿ. ರೋಚನಾ, ಡಾ.ಕೆ.ಪಿ. ಅಶ್ವಥ್ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.