ADVERTISEMENT

ದಲಿತರಿಗೆ ಕ್ಷೌರ ನಿರಾಕರಣೆ: ಐಜಿಪಿ ಭೇಟಿ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2017, 6:29 IST
Last Updated 21 ಸೆಪ್ಟೆಂಬರ್ 2017, 6:29 IST

ಮದ್ದೂರು (ಮಂಡ್ಯ ಜಿಲ್ಲೆ): ಸಮೀಪದ ವಳಗೆರೆಹಳ್ಳಿ ಗ್ರಾಮದಲ್ಲಿ ದಲಿತರ ಕ್ಷೌರ ನಿರಾಕರಣೆ ಹಿನ್ನೆಲೆಯಲ್ಲಿ ದಕ್ಷಿಣ ವಲಯ ಐಜಿಪಿ ವಿಪುಲ್‌ ಕುಮಾರ್‌ ದಲಿತರ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮದ ದಲಿತ ಮುಖಂಡ ಭಾನುಪ್ರಕಾಶ್ ನಿವಾಸಕ್ಕೆ ಭೇಟಿ ನೀಡಿ, ತಾಯಿ ನಿರ್ಮಲಾ ಹಾಗೂ ತಂದೆ ಸಾಕಯ್ಯ ಅವರನ್ನು ಪ್ರಶ್ನಿಸಿದಾಗ, ‘ನಮಗೆ ಸವರ್ಣೀಯರಿಂದ ಜೀವ ಬೆದರಿಕೆ ಇದೆ’ ಎಂದು ತಿಳಿಸಿದರು.

‘20 ವರ್ಷಗಳಿಂದಲೂ ಗ್ರಾಮದಲ್ಲಿ ದಲಿತರಿಗೆ ಕ್ಷೌರ ಮಾಡುತ್ತಿಲ್ಲ. ಈ ಕಾರಣ ತಾಲ್ಲೂಕುಮಟ್ಟದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ನಂತರ ಗ್ರಾಮದಲ್ಲಿರುವ ಮೂರು ಕ್ಷೌರಿಕರು ಅಂಗಡಿಗಳಿಗೆ ಬೀಗ ಹಾಕಿ ಗ್ರಾಮ ತೊರೆದಿದ್ದಾರೆ. ಗ್ರಾಮದಲ್ಲಿ 50ಕ್ಕೂ ಹೆಚ್ಚು ದಲಿತ ಕುಟುಂಬಗಳು ವಾಸವಿದೆ. ಆದರೆ, ಸವರ್ಣೀಯರಿಂದ ಜೀವ ಭಯ ಇರುವುದರಿಂದ ನಮ್ಮ ನೆರವಿಗೆ ಬರುತ್ತಿಲ್ಲ’ ಎಂದು ದೂರಿದರು.

20 ವರ್ಷಗಳಿಂದ ಈ ಮನೆಯಲ್ಲಿ ವಾಸವಾಗಿದ್ದೇವೆ. ಈಚೆಗೆ ಏಕಾಏಕಿ ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಸಿಬ್ಬಂದಿ ಸೇಡಿನಿಂದ ಮನೆಯಲ್ಲಿದ್ದ ಸಾಮಗ್ರಿಗಳನ್ನು ಏಕಾಏಕೀ ಹೊರ ಹಾಕಿ ಹಲ್ಲೆಗೆ ಯತ್ನಿಸಿದರು ಎಂದು ನಿರ್ಮಲಾ ದೂರಿದರು.

ADVERTISEMENT

ಸವರ್ಣೀಯರಿಂದ ಮನವಿ: ಬಳಿಕ ಅಲ್ಲಿಂದ ಕೃಷಿ ಪತ್ತಿನ ಸಹಕಾರ ಸಂಘದ ಆವರಣಕ್ಕೆ ತೆರಳಿದ ವಿಪುಲ್‌ ಕುಮಾರ್‌ ಅವರಿಗೆ ಸವರ್ಣೀಯರು ಮನವಿ ಸಲ್ಲಿಸಿದರು. ‘ದಲಿತ ಮುಖಂಡ ಭಾನುಪ್ರಕಾಶ್ ಅಸ್ಪೃಶ್ಯತಾ ತಡೆ ಕಾಯಿದೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದು, ಗ್ರಾಮದ ಶಾಂತಿ ಭಂಗಕ್ಕೆ ಕಾರಣವಾಗಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.