ADVERTISEMENT

ದಲಿತ ಸಂಘಟನೆಗಳು ಒಗ್ಗೂಡಲಿ

ಅಭಿನಂದನಾ ಸಮಾರಂಭದಲ್ಲಿ ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜು ಸಲಹೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2017, 6:41 IST
Last Updated 14 ಫೆಬ್ರುವರಿ 2017, 6:41 IST
ಮಂಡ್ಯ ನಗರದ ರೈತ ಸಭಾಂಗಣದಲ್ಲಿ ಭಾನುವಾರ ನಡೆದ ಅಭಿನಂದನಾ ಸಮಾರಂಭವನ್ನು ಡಾ.ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮ ಅಧ್ಯಕ್ಷ ಎಂ.ಎಸ್‌.ಬಸವರಾಜು ಉದ್ಘಾಟಿಸಿದರು
ಮಂಡ್ಯ ನಗರದ ರೈತ ಸಭಾಂಗಣದಲ್ಲಿ ಭಾನುವಾರ ನಡೆದ ಅಭಿನಂದನಾ ಸಮಾರಂಭವನ್ನು ಡಾ.ಬಿ.ಆರ್‌. ಅಂಬೇಡ್ಕರ್‌ ಅಭಿವೃದ್ಧಿ ನಿಗಮ ಅಧ್ಯಕ್ಷ ಎಂ.ಎಸ್‌.ಬಸವರಾಜು ಉದ್ಘಾಟಿಸಿದರು   
ಮಂಡ್ಯ:  ‘ದಲಿತ ಸಂಘಟನೆಗಳು ಹರಿದು ಹಂಚಿಹೋಗಿದ್ದು, ಅವುಗಳು ಒಗ್ಗಟ್ಟಾಗಿ ದುಡಿಯುವ ಮನೋಭಾವ ಬೆಳೆಸಿಕೊಳ್ಳುವವರೆಗೂ ದಲಿತ ಸಮುದಾಯದ ಅಭಿವೃದ್ಧಿ ಸಾಧ್ಯವಿಲ್ಲ’ ಎಂದು ಡಾ.ಬಿ.ಆರ್‌.ಅಂಬೇಡ್ಕರ್‌ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎಸ್‌.ಬಸವರಾಜು ಹೇಳಿದರು.
 
ನಗರದ ರೈತ ಸಭಾಂಗಣದಲ್ಲಿ ಬೆಳಕು ನಗರ ಮತ್ತು ಗ್ರಾಮೀಣಾಬಿವೃದ್ಧಿ ಸಂಸ್ಥೆ ವತಿಯಿಂದ ಭಾನುವಾರ ನಡೆದ ಸಂಸ್ಥೆ ಉದ್ಘಾಟನೆ ಹಾಗೂ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
 
ಪರಿಶಿಷ್ಟ ಜಾತಿಯನ್ನು ಉದ್ಧಾರ ಮಾಡುತ್ತೇವೆ ಎಂದು ವಿವಿಧ ಸಂಘಟನೆಗಳನ್ನು ಕಟ್ಟಿಕೊಂಡರೆ ಪ್ರಯೋಜನವಿಲ್ಲ. ಬದಲಿಗೆ ಒಗ್ಗಟ್ಟಾಗಿ ದಲಿತ ಸಮುದಾಯದ ಏಳಿಗೆಗೆ ದುಡಿಯುವ ಮನಸುಗಳು ದಲಿತ ಸಂಘಟನೆಗಳಿಗೆ ಬೇಕಿದೆ ಎಂದು ಸಲಹೆ ನೀಡಿದರು.
 
ದಲಿತ ಸಮುದಾಯಗಳಿಗೆ ರಾಜಕೀಯ ಪ್ರಾತಿನಿಧ್ಯ ಪರಿಪೂರ್ಣ ವಾಗಿ ಸಿಕ್ಕಿಲ್ಲ. ಮಂಡ್ಯ ಜಿಲ್ಲೆಯಲ್ಲಿ ಶೇ 15ರಷ್ಟು ದಲಿತ ಸಮುದಾಯದ ಜನ ಇದ್ದರೂ ರಾಜಕೀಯದ ಸ್ಥಾನಮಾನ ಗಿಟ್ಟಿಸಿಕೊಳ್ಳುವಲ್ಲಿ ಹಿಂದಿದ್ದೇವೆ. ತಮ್ಮ ಸಮುದಾಯದ ಬಗ್ಗೆ ಮಾತನಾಡುವ ಎದೆಗಾರಿಕೆ ರಾಜಕೀಯ ಪ್ರತಿನಿಧಿಗಳಿಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
 
ಮತವನ್ನು ಹಣಕ್ಕೆ ಮಾರಾಟ ಮಾಡಿಕೊಳ್ಳಬಾರದು. ಜನರ ಸಮಸ್ಯೆಗೆ ಸ್ಪಂದಿಸುವ ಉತ್ತಮ ವ್ಯಕ್ತಿಗಳನ್ನು ಚುನಾವಣೆಯಲ್ಲಿ ಗೆಲ್ಲಿಸಿಕೊಂಡು ಬರಬೇಕು. ಡಾ.ಅಂಬೇಡ್ಕರ್‌ ಜೀವಿತಾ ವಧಿಯಲ್ಲಿ ಅವರನ್ನು ಚುನಾವಣೆಯಲ್ಲಿ ಸೋಲಿಸಲಾಯಿತು. ಇದು ಬೇಸರದ ಸಂಗತಿ, ಮತಕ್ಕೆ ಮೌಲ್ಯ ಬರುವಂತೆ ನಡೆದುಕೊಳ್ಳುವುದು ಅಗತ್ಯ ಎಂದರು.
 
ಪರಿಶಿಷ್ಟ ಜಾತಿಯ ಚುನಾಯಿತ ಪ್ರತಿನಿಧಿಗಳು ಪಕ್ಷಭೇದ ಮರೆತು ಒಗ್ಗಟ್ಟು ಪ್ರದರ್ಶಿಸಬೇಕು. ದಲಿತರಿಗೆ ದೇವಾಲಯ ಪ್ರವೇಶ ನಿರಾಕರಿಸಿದ್ದರೆ ಏನಂತೆ? ನಮ್ಮನಮ್ಮ ಮನೆಯಲ್ಲಿಯೇ ಪೂಜೆ ಮಾಡೋಣ. ಸಮಾಜದಲ್ಲಿ ಸಮುದಾಯಕ್ಕೆ ನೋವಾದಾಗ ದನಿ ಎತ್ತುವ ಧೈರ್ಯ ಮಾಡದಿರುವುದು ನಾಚಿಕೆಗೇಡು ಎಂದು ಹರಿಯಾಯ್ದರು.
 
ಬೆಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌್ ಸ್ಟಡೀಸ್‌ನ ಅಧ್ಯಕ್ಷ ಎಂ.ಬಿ.ಶಿವಕುಮಾರ್‌ ಮಾತನಾಡಿ, ಪರಿಶಿಷ್ಟ ವರ್ಗಕ್ಕೆ ಇರುವ ಸವಲತ್ತುಗಳನ್ನು ಅಲ್ಲಿನ ಸಮುದಾಯದ ಜನರು ಕೇಳುವ ಮನೋಭಾವ ಬೆಳೆಸಿಕೊಳ್ಳಬೇಕು. ಅಂಬೇಡ್ಕರ್‌ ಅವರ ಸಿದ್ಧಾಂತವನ್ನು ಎಲ್ಲರೂ ಪಾಲಿಸಬೇಕು ಎಂದು ಸಲಹೆ ನೀಡಿದರು. 
 
ಡಾ.ಬಿ.ಆರ್‌.ಅಂಬೇಡ್ಕರ್‌ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ.ಸಿ.ಬಿ.ಹೊನ್ನು ಸಿದ್ಧಾರ್ಥ ಅಧ್ಯಕ್ಷತೆ ವಹಿಸಿದ್ದರು. ಲಿಮ್ಕಾ ಗಿನ್ನಿಸ್‌ ದಾಖಲೆ ಬರೆದ ಪಿ.ಜೆ.ಗೌತಮ್‌ ವರ್ಮಾ ಅವರು ತೆಂಗಿನ ಕಾಯಿಯನ್ನು ಹಲ್ಲಿನಿಂದ ಕೀಳುವ ಮೂಲಕ ಜನರನ್ನು ಬೆರಗುಗೊಳಿಸಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಅಭಿನಂದಿಸಲಾಯಿತು. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಕಾರ್ಯಪಾಲ ಎಂಜಿನಿಯರ್‌ ಚನ್ನಯ್ಯ ಉಪಸ್ಥಿತರಿದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.