ADVERTISEMENT

ದುಡಿಯುವ ವರ್ಗ ಕಡೆಗಣನೆ

ಮಹಿಳಾ ಕೃಷಿ ಕೂಲಿಕಾರರ ರಾಜ್ಯಮಟ್ಟದ ಮೂರನೇ ಸಮಾವೇಶ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 7:57 IST
Last Updated 9 ಮಾರ್ಚ್ 2017, 7:57 IST
ಮಂಡ್ಯ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದುಡಿಯುವ ವರ್ಗವನ್ನು ಕಡೆಗಣಿಸಿವೆ. ಮಹಿಳಾ ಕೂಲಿ ಕಾರ್ಮಿಕರಿಗೆ ಉದ್ಯೋಗ ಭದ್ರತೆ ನೀಡುವಲ್ಲಿಯೂ ಸೋತಿವೆ ಎಂದು ಆಖಿಲ ಭಾರತ ಕೃಷಿ ಕೂಲಿಕಾರರ ಸಂಘದ ಪ್ರಧಾನ ಕಾರ್ಯದರ್ಶಿ ಎ.ವಿಜಯರಾಘವನ್‌ ಟೀಕಿಸಿದರು.
 
ನಗರದ ಕಲಾಮಂದಿರದಲ್ಲಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ವತಿಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಬುಧವಾರ ನಡೆದ ಮಹಿಳಾ ಕೃಷಿ ಕೂಲಿಕಾರರ ರಾಜ್ಯಮಟ್ಟದ ಮೂರನೇ ಸಮಾವೇಶದಲ್ಲಿ ಅವರು ಮಾತನಾಡಿದರು.
 
ಮಹಿಳಾ ಕೃಷಿ ಕೂಲಿಕಾರರ ಸಮಸ್ಯೆಗಳು ಬಗೆಹರಿಯಬೇಕು. ದುಡಿಯುವ ಸ್ಥಳದಲ್ಲಿ ಭದ್ರತೆ ಸಿಗಬೇಕು. ಮಹಿಳೆಯರಿಗೆ ಇರುವ ಹಕ್ಕುಗಳನ್ನು ತಿಳಿದುಕೊಳ್ಳಲು ಶಿಕ್ಷಣವಂತರಾಗಬೇಕು. ಕೂಲಿ ಕಾರ್ಮಿಕರ ನೆರವಿಗೆ ಸಂಘಟನೆಗಳು ಬರಬೇಕು ಎಂದು ಸಲಹೆ ಮಾಡಿದರು.
 
ಗ್ರಾಮೀಣ ಪ್ರದೇಶದಲ್ಲಿ ದುಡಿ ಯುವ ವರ್ಗವನ್ನು ನಿರ್ಲಕ್ಷಿಸಲಾಗಿದೆ. ಬರಗಾಲದಿಂದ ಬಳಲುತ್ತಿರುವ ಜನರು ಹಾಗೂ ಕೂಲಿ ಕಾರ್ಮಿಕರಿಗೆ ಆಹಾರ ಭದ್ರತೆ ನಿರಾಕರಿಸಲಾಗುತ್ತಿದೆ. ಅದರಲ್ಲೂ ಮಹಿಳೆಯರು ತೊಂದರೆಗೆ ಸಿಲುಕಿದ್ದಾರೆ. ಅವರಿಗೆ ಪೌಷ್ಟಿಕ ಆಹಾರ ಸಿಗುತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆಹಾರ ಭದ್ರತೆ ಕಿತ್ತುಕೊಳ್ಳುತ್ತಿವೆ ಎಂದು ಹರಿಯಾಯ್ದರು.
 
ಕೇಂದ್ರ ಸರ್ಕಾರವು ಬಂಡವಾಳ ಶಾಹಿ, ಶ್ರೀಮಂತರ ಲಕ್ಷಾಂತರ ಕೋಟಿ ತೆರಿಗೆ ಹಣ ಮನ್ನಾ ಮಾಡಿದೆ. ಆಹಾರ ಭದ್ರತೆಗೆ ಕೇವಲ ₹ 1.5 ಲಕ್ಷ ಕೋಟಿ ಹಣ ಸಾಕು. ಅದನ್ನು ಕೊಡುವಲ್ಲಿ ವಿಫಲ ಆಗಿದೆ ಎಂದು ಟೀಕಿಸಿದರು.
 
ಸಮಾವೇಶ ಉದ್ಘಾಟಿಸಿ ಮಾತನಾಡಿದ ಶಂಕರಗೌಡ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕಿ ವಿ.ಡಿ.ಸುವರ್ಣಾ, ಸಮಾಜದಲ್ಲಿನ ವ್ಯವಸ್ಥೆ ದೂಷಿಸಿದರೆ ಅದಕ್ಕೆ ನಾವೇ ಹೊಣೆಗಾರರಾಗಿದ್ದೇವೆ. ಮಹಿಳೆಯರಲ್ಲಿ ಶಿಕ್ಷಣದ ಕೊರತೆ ಕಾಣುತ್ತಿದ್ದು, ಶಿಕ್ಷಣಕ್ಕೆ ತೆರೆದುಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.   
 
ದುಡಿಯುವ ವರ್ಗ ಯೋಜನೆಗಳ ಬಗ್ಗೆ ತಿಳಿದುಕೊಳ್ಳಬೇಕು. ಮಹಿಳೆಯರು ಸ್ವಂತ ನಿರ್ಧಾರ ತೆಗೆದುಕೊಳ್ಳುವ ಧೈರ್ಯ ಮಾಡಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ಸಮರ್ಪಕವಾಗಿ ಬಳಸಿಕೊಂಡು ಸ್ವಾವಲಂಬನೆ ಜೀವನ ನಡೆಸಬೇಕು ಎಂದು ಹೇಳಿದರು.
 
ಮಹಿಳಾ ಕೃಷಿ ಕೂಲಿಕಾರರ ಸಂಘದ ರಾಜ್ಯ ಸಂಚಾಲಕಿ ಮಲ್ಲಮ್ಮ ಕೊಡ್ಲಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್‌ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜೆ.ಪ್ರೇಮಕುಮಾರಿ, ಉಪಾಧ್ಯಕ್ಷೆ ಪಿ.ಕೆ.ಗಾಯಿತ್ರಿ, ಮುಖಂಡರಾದ ನಿತ್ಯಾನಂದಸ್ವಾಮಿ, ಜಿ.ಎನ್‌. ನಾಗರಾಜು, ಚಂದ್ರಪ್ಪ ಹೊಸ್ಕೇರಾ, ಎಂ.ಪುಟ್ಟಮಾದು, ಕೆ.ಬಸವರಾಜು, ಸರೋಜಮ್ಮ, ಸಿ.ಕುಮಾರಿ, ದೇವಿ, ಟಿ.ಎನ್‌.ಕೃಷ್ಣೇಗೌಡ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.